ADVERTISEMENT

ಖನಿಜ ನಿಧಿಯಲ್ಲಿ ವಿಜಯನಗರಕ್ಕೆ ಶೇ 39ರಷ್ಟು ಪಾಲು: ಆನಂದ್‌ ಸಿಂಗ್‌

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 9:17 IST
Last Updated 26 ಜೂನ್ 2022, 9:17 IST
   

ಹೊಸಪೇಟೆ (ವಿಜಯನಗರ): ‘ಅಖಂಡ ಬಳ್ಳಾರಿ ಜಿಲ್ಲೆಯಿಂದ ವಿಜಯನಗರ ಪ್ರತ್ಯೇಕಗೊಂಡ ನಂತರ ಜಿಲ್ಲಾ ಖನಿಜ ನಿಧಿಯ ಪಾಲು ಹಂಚಿಕೆಗೆ ಸಂಬಂಧಿಸಿದಂತೆ ಕೆಲ ಶಾಸಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಕಾನೂನುಬದ್ಧವಾಗಿ ಜಿಲ್ಲೆಗೆ ಶೇ 39ರಷ್ಟು ಪಾಲು ಸಿಕ್ಕಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ರಾಜ್ಯ ಸರ್ಕಾರಿ ನೌಕರರ ಎಸ್ಸಿ/ಎಸ್ಟಿ ನೌಕರರ ಸಮನ್ವಯ ಸಮಿತಿ ಜಿಲ್ಲಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೆಲ ಶಾಸಕರು ವಿಜಯನಗರ ಜಿಲ್ಲೆಗೆ ಶೇ 5ರಿಂದ 8ರಷ್ಟು ಪಾಲು ನೀಡಲು ಆಗ್ರಹಿಸಿದ್ದರು. ಆದರೆ, ನ್ಯಾಯಬದ್ಧವಾಗಿ ಎಷ್ಟು ಸಿಗಬೇಕಿತ್ತೋ ಅಷ್ಟು ಸಿಕ್ಕಿದೆ. ಹೊಸ ಜಿಲ್ಲೆ ನಂತರ ಕೆಲವರು ಬೆಲೆ ಹೆಚ್ಚಾಗಿದೆ ಎಂದು ಆರೋಪ ಮಾಡಿದ್ದರು. ಆದರೆ, ಜಿಲ್ಲೆ ಅಭಿವೃದ್ಧಿ ಪಥದಲ್ಲಿ ಸಾಗಿದೆ. ಬಳ್ಳಾರಿ ಜಿಲ್ಲೆಗೆ ಸರಿಸಮವಾಗಿ ವಿಜಯನಗರ ಬೆಳೆದು ನಿಲ್ಲಲಿದೆ. ಅಕ್ಟೋಬರ್‌ 2ರಂದು ಜೋಳದರಾಶಿ ಗುಡ್ಡದ ಮೇಲೆ 45 ಅಡಿ ಎತ್ತರದ ಕೃಷ್ಣದೇವರಾಯನ ಕಂಚಿನ ಪುತ್ಥಳಿಯನ್ನು ಮುಖ್ಯಮಂತ್ರಿ ಅನಾವರಣಗೊಳಿಸುವರು’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.