
ಹೊಸಪೇಟೆಯ ಸರ್ಕಾರಿ ಆಸ್ಪತ್ರೆ ಬಳಿ ಮೃತನ ಸಂಬಂಧಿಕರ ರೋದನ
ಹೊಸಪೇಟೆ (ವಿಜಯನಗರ): ನಗರದ ಹೊರವಲಯದ ಕರಿಗನೂರು ಗ್ರಾಮದ ಪಾಂಡುರಂಗ ದೇವಸ್ಥಾನದ ಬಳಿ ಗುರುವಾರ ಬೆಳಿಗ್ಗೆ ಕೂಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರನ್ನು ಹಲ್ಲೆ ಮಾಡಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಏಳು ಮಂದಿ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರಿಗನೂರು ನಿವಾಸಿ ಮಾಬುಸಾಬ್ (50) ಮೃತರು. ಅದೇ ಗ್ರಾಮದ ನಿವಾಸಿಗಳಾದ ಭಂಗಿ ಹನುಮಂತ (25), ಚರಣ (20), ಹುಲಿಗೆಮ್ಮ (46), ರಾಘವೇಂದ್ರ (25), ಚಂದ್ರಶೇಖರ್ (26), ಗುರುರಾಯ (48) ಹಾಗೂ ದರ್ಶನ್ (25) ವಿರುದ್ಧ ಪ್ರಕರಣ ದಾಖಲಿಸಲಾಗಿದೆ, ಸದ್ಯ ಯಾರನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಈ ಹಿಂದೆ ನಡೆದ ಗಲಾಟೆಯೊಂದಕ್ಕೆ ಸಂಬಂಧಿಸಿದಂತೆ ಜಿಲಾನ್ ಎಂಬವರ ಮನೆ ಅಂಗಳಕ್ಕೆ ಗುರುವಾರ ಬೆಳಿಗ್ಗೆ ತೆರಳಿದ ಏಳು ಜನರು, ಮೌಲ ಹುಸೇನ್, ಮಾಬುಸಾಬ್, ಯಮನೂರ ಹಾಗೂ ಹೊನ್ನರು ಸಾಬ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋದ ಮಾಬುಸಾಬ್ ಅವರ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ, ಘಟನೆಯಲ್ಲಿ ಐದು ಮಂದಿಗೆ ಗಾಯವಾಗಿದೆ ಎಂದು ಎಫ್ಐಆರ್‌ನಲ್ಲಿ ತಿಳಿಸಲಾಗಿದೆ.
ಪ್ರತಿಭಟನೆ: ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿ ಸಂತ್ರಸ್ತನ ಕುಟುಬದವರು 100 ಹಾಸಿಗೆ ಆಸ್ಪತ್ರೆ ಬಳಿ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಧಾವಿಸಿದ ಎಸ್‌ಪಿ ಎಸ್.ಜಾಹ್ನವಿ, ಡಿವೈಎಸ್‌ಪಿ ಟಿ.ಮಂಜುನಾಥ್ ಮತ್ತು ಇತರ ಅಧಿಕಾರಿಗಳು ಸಮಾಧಾನಪಡಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.