ADVERTISEMENT

5 ವರ್ಷದಲ್ಲಿ 58,917 ಮನೆ ನಿರ್ಮಾಣ ಗುರಿ: ಸಚಿವ ಜಮೀರ್‌ ಅಹಮದ್ ಖಾನ್‌

ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಉಸ್ತುವಾರಿ ಸಚಿವ ಜಮೀರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 7:28 IST
Last Updated 12 ಫೆಬ್ರುವರಿ 2026, 7:28 IST
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್   

ಹೊಸಪೇಟೆ (ವಿಜಯನಗರ):  ಜಿಲ್ಲೆಯ 6 ತಾಲ್ಲೂಕಿಗೆ ಗ್ರಾಮೀಣ ವಸತಿ ಯೋಜನೆಯಡಿ ಮುಂದಿನ ಐದು ವರ್ಷದಲ್ಲಿ 58,917 ಮನೆ ನಿರ್ಮಾಣಕ್ಕೆ ಭೌತಿಕ ಗುರಿ ಹೊಂದಲಾಗಿದೆ. ಇದಕ್ಕಾಗಿ ₹6,048 ಕೋಟಿ ಅಂದಾಜು ಮಾಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್ ಖಾನ್‌ ಹೇಳಿದರು.

ಇಲ್ಲಿ ಬುಧವಾರ ನಡೆದ ಪ್ರಸಕ್ತ ಸಾಲಿನ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಾತಾಡಿದ ಅವರು, ಮುಂದಿನ ವರ್ಷ 11,782 ಮನೆಗಳ ನಿರ್ಮಾಣಕ್ಕೆ ₹191 ಕೋಟಿ ವೆಚ್ಚದ ಅಂದಾಜು ಮಾಡಲಾಗಿದೆ ಎಂದರು.

ಹೊಸಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಒಟ್ಟು 60 ಕೊಳಚೆ ಪ್ರದೇಶಗಳಿದ್ದು. ಈ ಪೈಕಿ 35 ಸರ್ಕಾರದ ಜಾಗ ಹಾಗೂ 25 ಖಾಸಗಿಯಾಗಿವೆ. ಸರ್ಕಾರಿ ಸ್ವಾಮ್ಯದಲ್ಲಿನ 35 ಕೊಳಚೆ ಪ್ರದೇಶದ ಎಲ್ಲಾ ನಿವಾಸಿಗಳಿಗೂ ಒಂದು ತಿಂಗಳ ಒಳಗಾಗಿ ಇ-ಖಾತಾ ನೀಡಬೇಕು. ತಪ್ಪಿದಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ರಾಜ್ಯದಲ್ಲಿ ನಿವೇಶನ ರಹಿತರಿಗೆ ಮುಂದಿನ ಒಂದು ವರ್ಷದಲ್ಲಿ ಸರ್ಕಾರದಿಂದಲೇ ಲೇ-ಔಟ್ ನಿರ್ಮಿಸಿ ನಿವೇಶನ ನೀಡುವ ಗುರಿ ಹೊಂದಲಾಗಿದೆ. 2021ರ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ 36 ಲಕ್ಷ ಜನರು ನಿವೇಶನ ರಹಿತರಿದ್ದಾರೆ. ಅಂತಹ ಅರ್ಹ ಫಲಾನುಭವಿಗಳಿಗೆ ಸರ್ಕಾರಿ ಸ್ವಾಮ್ಯದ ಜಾಗ ಅಥವಾ ಖಾಸಗಿ ವ್ಯಕ್ತಿಗಳಿಂದ ಖರೀದಿಸಿ ಬಡಾವಣೆ ನಿರ್ಮಿಸಿ ನಿವೇಶ ನೀಡಲಾಗುವುದು.  ರಾಜೀವ್ ಗಾಂಧಿ ಹೌಸಿಂಗ್ ನಿಗಮದ ಹೆಸರಿನಲ್ಲಿ 24 ಸಾವಿರ ಎಕರೆ ಜಮೀನಿದ್ದು, ಇದರಲ್ಲಿ ಬಡಾವಣೆ ನಿರ್ಮಿಸಿ ಹಂತ ಹಂತವಾಗಿ ನಿವೇಶನ ರಹಿತರಿಗೆ ನಿವೇಶನಗಳನ್ನು ರಚನೆ ಮಾಡಿ ವಿತರಣೆ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಭೆಯಲ್ಲಿ ಶಾಸಕರಾದ ಡಾ.ಎನ್.ಟಿ.ಶ್ರೀನಿವಾಸ್, ಎಂ.ಪಿ.ಲತಾ ಮಲ್ಲಿಕಾರ್ಜುನ, ಕೃಷ್ಣನಾಯ್ಕ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಸಿಇಒ ನೋಂಗ್ಜಾಯ್ ಮೊಹಮ್ಮದ್‌ ಅಲಿ ಅಕ್ರಂ ಷಾ, ಡಿಸಿಎಫ್‌ ಅನುಪಮ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.