ADVERTISEMENT

ವಿಜಯನಗರ: ಹಕ್ಕುಪತ್ರಕ್ಕೆ ಆಗ್ರಹಿಸಿ ರೈತರ ಪಾದಯಾತ್ರೆ

ಶೀಘ್ರ ಸ್ಪಂದಿಸದಿದ್ದರೆ ಸಿಎಂ ಭೇಟಿ ವೇಳೆ ಪ್ರತಿಭಟನೆ–ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 6:07 IST
Last Updated 4 ನವೆಂಬರ್ 2025, 6:07 IST
ರೈತರ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಸೋಮವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ
ರೈತರ ಸಾಗುವಳಿ ಭೂಮಿಗೆ ಹಕ್ಕುಪತ್ರ ನೀಡಲು ಆಗ್ರಹಿಸಿ ಸೋಮವಾರ ಹೊಸಪೇಟೆಯಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರಿಗೆ ಮನವಿ ಸಲ್ಲಿಸಲಾಯಿತು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ತುಂಗಭದ್ರಾ ಜಲಾಶಯ ನಿರ್ಮಾಣವಾದ ವೇಳೆ ಮುಳುಗಡೆಯದ ಪ್ರದೇಶಗಳ ರೈತರಿಗೆ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಲು ತಿಳಿಸಿ ಇದುವರೆಗೂ ಹಕ್ಕುಪತ್ರ ನೀಡದೆ ಇರುವ ಸರ್ಕಾರದ ಕ್ರಮವನ್ನು ವಿರೋಧಿಸಿ ನೂರಾರು ರೈತರು ಸೋಮವಾರ ಮರಿಯಮ್ಮನಹಳ್ಳಿಯಿಂದ ನಗರಕ್ಕೆ ಪಾದಯಾತ್ರೆ ನಡೆಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಮರಿಯಮ್ಮನಹಳ್ಳಿ ಹೋಬಳಿ ಸಮಿತಿಯ ನೇತೃತ್ವದಲ್ಲಿ ನಡೆದ ಈ ಪಾದಯಾತ್ರೆಯ ಕೊನೆಯಲ್ಲಿ  ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಲಾಯಿತು.

‘ಮುಳುಗಡೆ ಪ್ರದೇಶದ ಜನರಿಗೆ ಬದಲಿ ಜಮೀನು ನೀಡಬೇಕಿರುವುದು ಸರ್ಕಾರದ ಕರ್ತವ್ಯ. ಆದರೆ ಕಳೆದ 73 ವರ್ಷಗಳಿಂದಲೂ ಜನರಿಗೆ ಸರ್ಕಾರಗಳು ವಂಚಿಸುತ್ತಲೇ ಬಂದಿವೆ. ಇದೀಗ ಪಟ್ಟಣ ಪಂಚಾಯಿತಿಯಿಂದ 3 ಕಿ.ಮೀ. ವ್ಯಾಪ್ತಿಯೊಳಗೆ ಹಕ್ಕುಪತ್ರ ನೀಡಲಾಗದು ಎಂದು ತಾಲ್ಲೂಕು ಆಡಳಿತ ಹೇಳುತ್ತಿದೆ, ಇದನ್ನು ಒಪ್ಪಲಾಗದು. ವಿಶೇಷ  ಪ್ರಸಂಗವೆಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು’ ಎಂದು ರೈತ‌ಸಂಘದ ರಾಜ್ಯ ಮುಖಂಡರಾದ ಮಂಜುಳಾ ಎಸ್.ಅಕ್ಕಿ ಹೇಳಿದರು.

ADVERTISEMENT

‘ನಮ್ಮನ್ನು ಒಕ್ಕಲೆಬ್ಬಿಸಿದ್ದು ಸರ್ಕಾರ, ಬದಲಿ ನಿವೇಶನ ನೀಡಿದ್ದೂ ಸರ್ಕಾರ, ಇದೀಗ ಅದಕ್ಕೆ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುವುದು ಸರಿಯಲ್ಲ. ಮುಖ್ಯಮಂತ್ರಿಗಳು ಜಿಲ್ಲೆಗೆ ಬಂದಿದ್ದಾಗ ನಾಲ್ಕು ಬಾರಿ ಈ ನಿಟ್ಟಿನಲ್ಲಿ ಮನವಿ ಕೊಟ್ಟಿದ್ದೇವೆ, ಆದರೂ ಸರ್ಕಾರ ನಮ್ಮ ಬೇಡಿಕೆ ಈಡೇರಿಸಿಲ್ಲ’ ಎಂದು ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿ.ಗೋಣಿಬಸಪ್ಪ ಆರೋಪಿಸಿದರು.

ಎಚ್ಚರಿಕೆ: ಸರ್ಕಾರ ಕೂಡಲೇ ಈ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲಾ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲವಾದರೆ ನ.9ರಂದು ಕೂಡ್ಲಿಗಿಗೆ ಆಗಮಿಸಲಿರುವ ಮುಖ್ಯಮಂತ್ರಿ ಅವರ ಮುಂದೆ ಪ್ರತಿಭಟಿಸುವುದು ಅನಿವಾರ್ಯವಾಗಲಿದೆ ಹಾಗೂ ಹೆದ್ದಾರಿ ತಡೆದು ಪ್ರತಿಭಟಿಸುವ ನಿರ್ಧಾರಕ್ಕೂ ಬರಲಿದ್ದೇವೆ ಎಂದು ಅವರು ಎಚ್ಚರಿಸಿದರು.

ರೈತ ಮುಖಂಡರಾದ ಎಲ್.ಕೆ.ನಾಯ್ಡು, ಜಿ.ಮೆಹಬೂಬ್‌ ಸಾಬ್‌, ಗಂಟೆ ಸೋಮಶೇಖರ್, ಟಿ.ಹನುಮಂತಪ್ಪ, ಇಬ್ರಾಹಿಂ ಸಾಬ್‌, ಕಾಶಿಂ ಸಾಬ್‌, ಹುಸೇನ್ ಸಾಬ್‌, ದುರುಗಪ್ಪ, ಒಪ್ಪತೇಶ್ ಬಣಕಾರ್, ನಾಗರಾಜ್‌, ಮನ್ಸೂರ್, ತಳವಾರ್ ಹುಲುಗಪ್ಪ ಇತರರು ಇದ್ದರು.

ರೈತರ ಹಕ್ಕೊತ್ತಾಯಗಳು

*ನಾವು ಭೂಸಂತ್ರಸ್ತರು 73 ವರ್ಷಗಳಿಂದ ಉಳುಮೆ ಮಾಡುತ್ತಿದ್ದೇವೆ ‌ಹಕ್ಕುಪತ್ರ ನೀಡಿ

* ಕೆಲವು ಜನರಿಗೆ ಹಕ್ಕುಪತ್ರ ಕೊಟ್ಟಿದ್ದರೂ ಸಹ ಕೆಐಎಡಿಬಿ ಮೂಲಕ ಮೂಲಕ ವಶಪಡಿಸಿಕೊಳ್ಳುವ ಹುನ್ನಾರ ನಡೆದಿದೆ ಅದನ್ನು ತಕ್ಷಣ ನಿಲ್ಲಿಸಬೇಕು

*ಪಟ್ಟಣ ಪಂಚಾಯಿತಿ 3 ಕಿ.ಮೀ.ವ್ಯಾಪ್ತಿಯ ನೆಪ ಹೇಳದೆ ವಿಶೇಷ ಸಂದರ್ಭ ಎಂದು ಪರಿಗಣಿಸಿ ಹಕ್ಕುಪತ್ರ ನೀಡಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.