
ಹೊಸಪೇಟೆ (ವಿಜಯನಗರ): 1974ಕ್ಕಿಂತ ಮೊದಲು ಅಸ್ತಿತ್ವದಲ್ಲಿದ್ದ ಅಮರಾವತಿ ಪುರಸಭೆ ವ್ಯಾಪ್ತಿಯ ಆಸ್ತಿಗಳ ಖಾತಾ ವರ್ಗಾವಣೆಗೆ ಅವಕಾಶ ನೀಡಬೇಕೆಂದು ನಗರಸಭೆಯಲ್ಲಿ ನಿರ್ಣಯ ಕೈಗೊಂಡು ಏಳು ತಿಂಗಳ ಬಳಿಕ ಠರಾವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ ಅಧಿಕಾರಿಗಳ ವರ್ತನೆಗೆ ಗುರುವಾರ ಇಲ್ಲಿ ನಡೆದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಯಿತು.
ಎನ್.ರೂಪೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸದಸ್ಯ ಎಲ್.ಎಸ್.ಆನಂದ್, ನಿರ್ಣಯ ಕಾರ್ಯರೂಪಕ್ಕೆ ಬಂತೇ, ಯಾವ ಹಂತದಲ್ಲಿದೆ ಎಂದು ಪ್ರಶ್ನಿಸಿದರು. ಕಂದಾಯ ಅಧಿಕಾರಿ ನಾಗರಾಜ್ ಅವರು ಕಡತ ತರಿಸಿಕೊಂಡು, ನ.19ರಂದಷ್ಟೇ ಈ ಠರಾವನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಲಾಗಿದೆ ಎಂಬುದನ್ನು ಸಭೆಯ ಗಮನಕ್ಕೆ ತಂದರು.
ಇದರಿಂದ ಸಿಟ್ಟಿಗೆದ್ದ ಅಧ್ಯಕ್ಷ ಮತ್ತು ಇತರ ಹಲವು ಸದಸ್ಯರು ಪಕ್ಷಾತೀತವಾಗಿ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿದರು. ‘ನಿವೃತ್ತ ಪೊಲೀಸ್ ಅಧಿಕಾರಿಯೊಬ್ಬರು ತಮಗೆ ಮನೆ ನಿರ್ಮಿಸಲು ಸಾಲ ಸಿಗುತ್ತಿಲ್ಲ ಎಂದು ಗೋಳಿಡುತ್ತಿದ್ದಾರೆ, ಇನ್ನೂ ಹಲವರು ಇಂತಹದೇ ಸಂಕಷ್ಟದಲ್ಲಿದ್ದಾರೆ, ಬಹುಶಃ ಇವರು ಹಿಂದಿನ ಖಾತಾಗಳನ್ನು ಕಳೆದು ಹಾಕಿರುವ ಶಂಕೆಯೂ ಇದೆ. ಇದರ ಬಗ್ಗೆ ಸಮಗ್ರ ತನಿಖೆ ಆಗಬೇಕು, ತಕ್ಷಣ ಖಾತಾ ಬದಲಾವಣೆ ಮಾಡಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ನೋಟಿಸ್: ‘ನಗರಸಭೆ ನಿರ್ಣಯಕ್ಕೇ ಅಧಿಕಾರಿಗಳು ಬೆಲೆ ನೀಡುತ್ತಿಲ್ಲ ಎಂಬುದು ಸಾಬೀತಾಗಿದೆ, ತಪ್ಪು ಎಸಗಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಅಧ್ಯಕ್ಷ ರೂಪೇಶ್ ಕುಮಾರ್ ಸಭೆಗೆ ಭರವಸೆ ನೀಡಿದರು.
ಪಟಾಪಟ್ ಒಪ್ಪಿಗೆ: ನಗರದ ಹಲವು ವಾರ್ಡ್‌ಗಳಲ್ಲಿ 2025–26ನೇ ಸಾಲಿನ 15ನೇ ಹಣಕಾಸು ನಿರ್ಬಂಧಿತ ಅನುದಾನದಡಿಯಲ್ಲಿ ಹಲವು ಕುಡಿಯವು ನೀರಿನ ಪೈಪ್‌ಲೈನ್ ಅಳವಡಿಕೆ ಸಹಿತ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಸಭೆಯಲ್ಲಿ ಪಟಾಪಟ್ ಒಪ್ಪಿಗೆ ನೀಡಲಾಯಿತು.
ಇದೇ ವೇಳೆ ಸ್ಥಾಯಿ ಸಮಿತಿಗೆ 10 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷ ಬಿ.ಜೀವರತ್ನಂ, ಹಂಗಾಮಿ ಪೌರಾಯುಕ್ತರಾಗಿದ್ದ ಎಇಇ ಮೊಹಮ್ಮದ್ ಮನ್ಸೂರ್ ಅಲಿ ಇದ್ದರು.
ಏನಾಗಿತ್ತು ಠರಾವು
ಅಮರಾವತಿ ಸಹಿತ ನಗರದ ಕೆಲವು ವಾರ್ಡ್‌ಗಳಲ್ಲಿ ಆಸ್ತಿಗೆ ಸೂಕ್ತ ದಾಖಲೆ ಇಲ್ಲ ಇಂತಲ್ಲಿ ದಂಡ ಸಹಿತ ತೆರಿಗೆ ಪಾವತಿಸಿ ಖಾತಾ ಮಾಡಿಕೊಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಅಂದು ಎಲ್.ಎಸ್.ಆನಂದ್ ಅವರೇ ಈ ವಿಷಯ ಪ್ರಸ್ತಾಪಿಸಿದ್ದರು. ರಾಘವೇಂದ್ರ ಗುಜ್ಜಲ್ ಮತ್ತಿತರರು ಮಾತನಾಡಿ ನಗರದ ಚಿತ್ತವಾಡಗಿ ಸೇರಿದಂತೆ ಹಲವು ವಾರ್ಡ್‌ಗಳಲ್ಲಿ ಈ ಸಮಸ್ಯೆಯಿದೆ ಎಂದರು.
ಪರಿಹಾರ ಕಡತಕ್ಕೂ ದೂಳು
ಅನಂತಶಯನಗುಡಿ ಪ್ರದೇಶದ ಮಳೆ ನೀರಿನ ಗುಂಡಿಗೆ ಬಿದ್ದು ಮೃತಪಟ್ಟ ಬಾಲಕ ವಿರಾಟನ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಕಡತದ ಬಗ್ಗೆಯೂ ಅಧಿಕಾರಿಗಳು ಫಾಲೋಅಪ್ ಮಾಡುತ್ತಿಲ್ಲ. ನಗರಸಭೆ ಕಸದ ವಾಹನಗಳ ಎಫ್‌ಸಿ ಮಕ್ತಾಯವಾಗಿದ್ದರಿಂದ ಆರ್‌ಟಿಓ ಜಪ್ತಿ ಮಾಡಿದ್ದಾರೆ. ಎಫ್‌ಸಿ ಮಾಡಿಸಲು ನಗರಸಭೆ ಹಣ ಕೊಡುವುದಿಲ್ಲವೇ? ಅಧಿಕಾರಿಗಳ ಬೇಜವಾಬ್ದಾರಿಯಿಂದ ನಗರಸಭೆಗೆ ತಲೆತಗ್ಗಿಸುವಂತಾಗಿದೆ ಎಂದು ರಾಘವೇಂದ್ರ ದೂರಿದರು. ಇದರಿಂದ ಸಹ ಅಧ್ಯಕ್ಷರು ಸಿಡಿಮಿಡಿಗೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.