ADVERTISEMENT

ಒಂದೇ ಕಡೆಗೆ ಜಿಲ್ಲಾಮಟ್ಟದ ಕಚೇರಿ: ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2021, 12:09 IST
Last Updated 12 ಮಾರ್ಚ್ 2021, 12:09 IST
ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಶುಕ್ರವಾರ ಹೊಸಪೇಟೆ ಹೊರವಲಯದ ಕಾರಿಗನೂರಿನ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು
ವಿಜಯನಗರ ಜಿಲ್ಲೆ ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರು ಶುಕ್ರವಾರ ಹೊಸಪೇಟೆ ಹೊರವಲಯದ ಕಾರಿಗನೂರಿನ ಇಎಸ್‌ಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ವಿಜಯನಗರ (ಹೊಸಪೇಟೆ): ‘ಯಾದಗಿರಿ, ಚಿಕ್ಕಬಳ್ಳಾಪುರದಂತೆ ನೂತನ ವಿಜಯನಗರ ಜಿಲ್ಲೆಯಲ್ಲೂ ಎಲ್ಲ ಜಿಲ್ಲಾಮಟ್ಟದ ಸರ್ಕಾರಿ ಕಚೇರಿಗಳನ್ನು ಒಂದೇ ಕಡೆ ನಿರ್ಮಿಸಲು ಯೋಚಿಸಲಾಗುತ್ತಿದೆ’ ಎಂದು ವಿಶೇಷ ಅಧಿಕಾರಿ ಪಿ. ಅನಿರುದ್ಧ ಶ್ರವಣ್‌ ತಿಳಿಸಿದರು.

ನಗರ ಹೊರವಲಯದ ಕಾರಿಗನೂರಿನ ಇ.ಎಸ್.ಐ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ ಕಟ್ಟಡ ಪರಿಶೀಲನೆ ನಡೆಸಿ, ಅಲ್ಲಿನ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎಲ್ಲ ಕಚೇರಿಗಳು ಒಂದೇ ಕಡೆ ಇದ್ದರೆ ಸಾರ್ವಜನಿಕರಿಗೆ ಪ್ರಯೋಜನ. ಹೀಗಾಗಿಯೇ ಒಂದೇ ಜಿಲ್ಲಾಮಟ್ಟದ ಸಂಕೀರ್ಣ ನಿರ್ಮಿಸುವ ಯೋಜನೆ ಇದೆ’ ಎಂದರು.

‘1975-76ನೇ ಇಸವಿಯಲ್ಲಿ ಇ.ಎಸ್‌.ಐ. ಆಸ್ಪತ್ರೆಯನ್ನು ಕಟ್ಟಿದ್ದಾರೆ, ಸದ್ಯ ಆಸ್ಪತ್ರೆ ಮೊಬೈಲ್ ಮೆಡಿಕಲ್ ಯುನಿಟ್ ಆಗಿ ಕೆಲಸ ನಿರ್ವಹಿಸುತ್ತಿದೆ. ಕಟ್ಟಡದ ಪರಿಶೀಲನೆ ನಡೆಸಿ, ದುರಸ್ತಿ ಕಾರ್ಯಕ್ಕೆ ಪ್ರಸ್ತಾವ ಸಲ್ಲಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಬರುವ ದಿನಗಳಲ್ಲಿ ಈ ಕಟ್ಟಡವನ್ನು ಜಿಲ್ಲಾ ಪಂಚಾಯತಿ ಕಚೇರಿಗೆ ಉಪಯೋಗಿಸಿಕೊಳ್ಳಲು ಚಿಂತನೆ ನಡೆದಿದೆ’ ಎಂದು ಹೇಳಿದರು.

ADVERTISEMENT

‘ನಗರದ ತುಂಗಭದ್ರಾ ಸ್ಟೀಲ್ಸ್‌ ಪ್ರಾಡಕ್ಟ್ಸ್‌ (ಟಿಎಸ್‌ಪಿ) ಹಾಗೂ ಎಪಿಎಂಸಿಯಲ್ಲಿನ ಕಟ್ಟಡಗಳನ್ನು ಜಿಲ್ಲಾ ಮಟ್ಟದ ಸರ್ಕಾರಿ ಕಚೇರಿಗಳಿಗೆ ಬಳಸಿಕೊಳ್ಳಲು ಪರಿಶೀಲನೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.
ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ, ತಹಶೀಲ್ದಾರ್ ಎಚ್.ವಿಶ್ವನಾಥ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.