ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ ಕೆಂಚಗಾರಪೇಟೆಗೆ ಹೋಗುವ ಮಾರ್ಗದ ಎಡಬದಿಯಲ್ಲಿರುವ ಕೋಟ್ಯಂತರ ಬೆಲೆ ಬಾಳುವ ಸುಮಾರು 23 ಸೆಂಟ್ಸ್ ನಿವೇಶನವನ್ನು ವಕ್ಫ್‌ಬೋರ್ಡ್ ವತಿಯಿಂದ ಸರ್ವೇ ನಡೆಸುವ ಕೆಲಸ ಶನಿವಾರ ನಡೆದಿದ್ದು, ಇದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದರು.
25-1-12-156 ಸರ್ವೆ ನಂಬರ್‌ನ ಆಸ್ತಿ ತನ್ನದು ಎಂದು ವಕ್ಫ್ ಬೋರ್ಡ್ ಹೇಳಿಕೊಂಡಿದ್ದು, ನಗರಸಭೆಯಲ್ಲಿ ಠರಾವು ಆಗಿ ‘ಇಸ್ಲಾಮಿ ಬೈತುಲ್ಲಾ ಮಾಲ್’ಗೆ ಮಂಜೂರಾದ ಆಸ್ತಿ ಇದು. ಇದನ್ನು ವಕ್ಫ್‌ಗೆ ಹಸ್ತಾಂತರಿಸಿದ ಮೇರೆಗೆ ಸರ್ವೇ ನಡೆಸಲಾಗಿದೆ, ಇದರಲ್ಲಿ ಯಾವುದೇ ವಿವಾದ ಇಲ್ಲ ಎಂದು ವಕ್ಫ್ ಬೋರ್ಡ್ ಹೇಳಿಕೊಂಡಿದೆ.
‘ವಕ್ಬ್ ಬೋರ್ಡ್ ಸರ್ಕಾರಕ್ಕೆ ಒಳಪಟ್ಟ ಸ್ವಾಯತ್ತ ಸಂಸ್ಥೆಯಾಗಿದ್ದು, ಇಲ್ಲಿನ ನಿವೇಶದ ನಗರಸಭೆಯಿಂದ (ಸರ್ಕಾರ) ಮತ್ತೊಂದು ಸರ್ಕಾರಿ ಸಂಸ್ಥೆಗೆ ಹಸ್ತಾಂತರ ಆಗಿದೆ ಅಷ್ಟೇ, ಯಾವುದೇ ಖಾಸಗಿ ವ್ಯಕ್ತಿಗೆ ಪರಭಾರೆ ಆಗಿಲ್ಲ. ಈಗ ಮಂಡಳಿಯಿಂದ ಸರ್ವೇಗೆ ಮುಂದಾಗಿದ್ದೇವೆ, ಸರ್ಕಾರ ಅದನ್ನು ನಡೆಸಿಕೊಟ್ಟಿದೆ’ ಎಂದು ವಕ್ಫ್ ಬೋರ್ಡ್ ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಎಸ್.ದಾದಾಪೀರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರತಿಭಟನೆ: ಸರ್ವೇಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು ಶನಿವಾರ ಪ್ರತಿಭಟನೆ ನಡೆಸಿದರು. ಪೊಲೀಸರು ಸಹ ಸ್ಥಳಕ್ಕೆ ಆಗಮಿಸಿ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸುವ ಯತ್ನ ಮಾಡಿದರು. ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ನಗರಸಭೆ ಆಯುಕ್ತ ಎ.ಶಿವಕುಮಾರ್ ಸಹ ಸ್ಥಳಕ್ಕೆ ಭೇಟಿ ನೀಡಿದರು.
ಹಿನ್ನೆಲೆ: 1992ರಲ್ಲಿ ಅಂದಿನ ಶಾಸಕ ರತನ್‍ಸಿಂಗ್ ಅವರ ಮೌಖಿಕ ಆದೇಶದಂತೆ ನಗರಸಭೆ ನಿರ್ಣಯ ಕೈಗೊಂಡು ಇಸ್ಲಾಮೀ ಬೈತುಲ್ಲಾ ಮಾಲ್ ಸಂಸ್ಥೆಗೆ ಪರಭಾರೆ ನೀಡಿದ ಸ್ಥಳ ಇದು ಎಂದು ಹೇಳಲಾಗುತ್ತಿದೆ. ಇಲ್ಲಿ ಸಾರ್ವಜನಿಕ ಶೌಚಾಲಯ ಮತ್ತು ಗ್ರಂಥಾಲಯ ಇತ್ತು. ಕ್ರಮೇಣ ಗ್ರಂಥಾಲಯ ನೆಲಸಮವಾಗಿದ್ದು, ಶೌಚಾಲಯದ ಕುರುಹು ಈಗಲೂ ಇದೆ. ಉಳಿದಂತೆ ಜಾಗ ಖಾಲಿ ಇದ್ದು, ಮುಖ್ಯ ರಸ್ತೆಗೆ ತಾಗಿಕೊಂಡಂತೆ ಪೆಟ್ಟಿಗೆ ಅಂಗಡಿ, ನೀರಿನ ಶುದ್ಧೀಕರಣ ಘಟಕಗಳಿವೆ. ಆದರೆ ಈ ಜಾಗವನ್ನು ಈ ಹಿಂದೆ ಬೈತುಲ್ಲಾ ಮಾಲ್ ಸ್ವಾಧೀನಪಡಿಸಿಕೊಳ್ಳಲು ಯತ್ನಿಸಿದಾಗಲೆಲ್ಲಾ ಸ್ವತಃ ಮುಸ್ಲಿಂ ಸಮುದಾಯದವರಿಂದಲೇ ಇಲ್ಲಿ ವಿರೋಧ ವ್ಯಕ್ತವಾಗಿತ್ತು, ಹೀಗಾಗಿ ಇದುವರೆಗೂ ಸ್ಥಳ ಖಾಲಿ ನಿವೇಶನವಾಗಿಯೇ ಉಳಿದಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಕಾನೂನು ಪ್ರಕಾರ ಆಸ್ತಿ ಯಾರ ಹೆಸರಲ್ಲಿದೆ ಎಂಬುದನ್ನು ಪರಿಶೀಲನೆ ನಡೆಸಲಿದ್ದೇನೆ. ಆ ಬಳಿಕವಷ್ಟೇ ಯಾವುದೇ ಹೇಳಿಕೆ ನೀಡಲು ಸಾಧ್ಯ.– ಎ.ಶಿವಕುಮಾರ್, ಆಯುಕ್ತರು ಹೊಸಪೇಟೆ ನಗರಸಭೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.