ADVERTISEMENT

ವಿಜಯನಗರ | ಹತ್ತಾರು ವರ್ಷಗಳ ಸಮಸ್ಯೆ: ಇಲ್ಲಿ ಮೃತದೇಹಗಳ ಜಲಸಮಾಧಿ!

ಎಂ.ಜಿ.ಬಾಲಕೃಷ್ಣ
Published 8 ನವೆಂಬರ್ 2025, 5:02 IST
Last Updated 8 ನವೆಂಬರ್ 2025, 5:02 IST
<div class="paragraphs"><p>ಹೊಸಪೇಟೆಯ ಬಳ್ಳಾರಿ ರಸ್ತೆ ಅಂಬಾಭವಾನಿ ದೇವಸ್ಥಾನ ಹಿಂಭಾಗದ ಸ್ಮಶಾನದಲ್ಲಿ ನೀರಿರುವ ಗುಂಡಿಯಲ್ಲೇ ಹೆಣ ಹೂಳಲು ನಡೆದಿರುವ ಸಿದ್ಧತೆ&nbsp;</p></div>

ಹೊಸಪೇಟೆಯ ಬಳ್ಳಾರಿ ರಸ್ತೆ ಅಂಬಾಭವಾನಿ ದೇವಸ್ಥಾನ ಹಿಂಭಾಗದ ಸ್ಮಶಾನದಲ್ಲಿ ನೀರಿರುವ ಗುಂಡಿಯಲ್ಲೇ ಹೆಣ ಹೂಳಲು ನಡೆದಿರುವ ಸಿದ್ಧತೆ 

   

–ಪ್ರಜಾವಾಣಿ ಚಿತ್ರ/ ಲವ ಕೆ.

ಹೊಸಪೇಟೆ (ವಿಜಯನಗರ): ನಗರದ ಬಳ್ಳಾರಿ ರಸ್ತೆಯ ಅಂಬಾಭವಾನಿ ದೇವಸ್ಥಾನದ ಹಿಂಭಾಗದಲ್ಲಿ ಸಾರ್ವಜನಿಕ ಸ್ಮಶಾನ ಇದೆ, ಆದರೆ ಇಲ್ಲಿ ಶವ ಹೂಳಬೇಕಾದರೆ ಬಕೆಟ್‌ನಲ್ಲಿ ನೀರು ಹೊರಹಾಕಲೇಬೇಕು, ಮತ್ತೆ ನೀರು ತುಂಬಿಕೊಳ್ಳುತ್ತದೆ. ಕೊನೆಗೆ ಜಲಸಮಾಧಿ ರೀತಿಯಲ್ಲೇ ನೀರಲ್ಲೇ ಹೆಣ ಹೂತು ಅಂತ್ಯಸಂಸ್ಕಾರ ನೆರವೇರಿಸುವ ದುಃಸ್ಥಿತಿ ಇದೆ.

ADVERTISEMENT

ಹತ್ತಾರು ವರ್ಷಗಳಿಂದ ಈ ಸಮಸ್ಯೆ ಇಲ್ಲಿ ಇದ್ದು, ಶಾಸಕರು, ನಗರಸಭೆ ಸದಸ್ಯರು, ಅಧಿಕಾರಿಗಳ ಸಹಿತ ಎಲ್ಲರಿಗೂ ಈ ವಿಷಯ ಗೊತ್ತಿದೆ. ಆದರೂ ಯಾರೊಬ್ಬರೂ ಇದಕ್ಕೊಂದು ಪರಿಹಾರ ಕಂಡುಕೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

‘ಹೆಣ ಹೂಳಲು ಮಣ್ಣಿದ್ದರೇನು, ನೀರಿದ್ದರೇನು ಎಂಬ ಧೋರಣೆ ಎಲ್ಲರಲ್ಲೂ ಇದ್ದಂತಿದೆ. ಬದುಕಿದ್ದಾಗ ಗೌರವಯುತ ಜೀವನ ನಡೆಸಿದ್ದಾರೋ, ಇಲ್ಲವೋ, ಸತ್ತ ನಂತರವಾದರೂ ಮಣ್ಣು ಮಾಡುವಾಗ ಗೌರವಯುತವಾಗಿ ಕಳುಹಿಸಿಕೊಡಬೇಡವೇ? ಹೆಣ ಹೂಳಲು ಗುಂಡಿ ತೋಡುವಾಗ ವರ್ಷದ ಹತ್ತು ತಿಂಗಳೂ ಇಲ್ಲಿ ನೀರು ಸಿಕ್ಕೇ ಸಿಗುತ್ತದೆ. ಎರಡು ಅಡಿಯಷ್ಟು ನೀರನ್ನು ಬೇಗ ಬೇಗ ತೆಗೆದು ಹೆಣ ಹೂಳಬೇಕು. ಹೆಣವನ್ನು ಗುಂಡಿಯಲ್ಲಿ ಇಡುವಾಗಲೂ ನೀರು ತುಂಬುತ್ತಲೇ ಇರುತ್ತದೆ. ವಿಧಿ ಇಲ್ಲದೆ ಅದಕ್ಕೆ ಮಣ್ಣು ಹಾಕಿ ಮುಚ್ಚುವುದು ಇಲ್ಲಿನ ನಿತ್ಯ ಪರಿಪಾಠ’ ಎಂದು ಈ ಸ್ಮಶಾನದ ಸಮಸ್ಯೆ ಕುರಿತು ಹಲವು ಬಾರಿ ಹೋರಾಟ ನಡೆಸಿದ ಓಬಳೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶೇಷವೆಂದರೆ ಜನತಾ ಕ್ವಾರ್ಟರ್ಸ್‌, ಸಿಸಿರಿನಕಲ್‌, ಊರಮ್ಮನಬೈಲ್‌, ಸಿದ್ದಲಿಂಗಪ್ಪ ಚೌಕಿ, ಬಸ್ ಡಿಪೊ, ವಿಜಯ ಟಾಕೀಸ್‌, ಜಂಬುನಾಥ ರೋಡ್‌, ಮೆಹಬೂಬ್‌ನಗರ ಮೊದಲಾದ ಕಡೆಗಳಲ್ಲಿನ ಮೃತದೇಹಗಳನ್ನು ತಂದು ಹೂಳುವುದು ಇಲ್ಲೇ. ಅಂದರೆ ನಾಲ್ಕಾರು ನಗರಸಭೆ ಸದಸ್ಯರ ವ್ಯಾಪ್ತಿಗೆ ಇದು ಒಳಪಡುವ ಸ್ಮಶಾನ. ಆದರೆ ಇದುವರೆಗೂ ಈ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.

2.75 ಎಕರೆ ವಿಸ್ತೀರ್ಣದ ಈ ಸ್ಮಶಾನವನ್ನು ಮುಚ್ಚಿ, ಇಲ್ಲೇ ಸಮೀಪದಲ್ಲಿ ಜೌಗು ಪ್ರದೇಶವಲ್ಲದ ಕಡೆ ಇಷ್ಟೇ ದೊಡ್ಡ ಸ್ಮಶಾನದ ವ್ಯವಸ್ಥೆ ಮಾಡುವುದಷ್ಟೇ ಈ ಸಮಸ್ಯೆಗೆ ಇರುವ ಪರಿಹಾರ. ಅದು ಸಾಕಾರಗೊಳ್ಳುತ್ತದೆಯೇ ಎಂಬ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.

ಜೌಗು ಪ್ರದೇಶವಾಗಿದ್ದು ಭೂಮಿಯೊಳಗಿನಿಂದ ನೀರು ಜಿನುಗುತ್ತಿದ್ದರೆ ಅದನ್ನು ನಿಯಂತ್ರಿಸುವುದು ಕಷ್ಟ ಆದರೂ ಸ್ಥಳ ಪರಿಶೀಲಿಸಿ ಮಾಡಿ ಏನು ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ವಿಚಾರ ಮಾಡಲಾಗುವುದು
–ಎ.ಶಿವಕುಮಾರ್, ಆಯುಕ್ತರು ನಗರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.