ADVERTISEMENT

ಜಂಪ್‍ರೋಪ್ ಡಬಲ್ ಡಚ್‌: ನೂತನ ದಾಖಲೆ

ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ವಿಶ್ವದಾಖಲೆ ಬರೆದ ವಿಕಾಸ ಬ್ಯಾಂಕ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2023, 13:48 IST
Last Updated 21 ಸೆಪ್ಟೆಂಬರ್ 2023, 13:48 IST
ಹೊಸಪೇಟೆಯಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ನ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅವರಿಗೆ ಹಸ್ತಾಂತರಿಸಲಾಯಿತು
ಹೊಸಪೇಟೆಯಲ್ಲಿ ಇಂಟರ್‌ನ್ಯಾಷನಲ್ ಬುಕ್ ಆಫ್ ರೆಕಾರ್ಡ್‍ನ ವಿಶ್ವದಾಖಲೆಯ ಪ್ರಮಾಣ ಪತ್ರವನ್ನು ವಿಕಾಸ ಬ್ಯಾಂಕ್ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅವರಿಗೆ ಹಸ್ತಾಂತರಿಸಲಾಯಿತು   

ಹೊಸಪೇಟೆ (ವಿಜಯನಗರ): ಇಲ್ಲಿನ ವಿಕಾಸ ಬ್ಯಾಂಕ್ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕಳೆದ ವರ್ಷದ ಜುಲೈನಲ್ಲಿ ಏರ್ಪಡಿಸಲಾಗಿದ್ದ ಜಂಪ್‍ರೋಪ್‍ನ ಡಬಲ್ ಡಚ್ ಕ್ರೀಡೆಯಲ್ಲಿ ನೂತನ ವಿಶ್ವ ದಾಖಲೆ ಸೃಷ್ಟಿಯಾಗಿದ್ದು, ಇಂಟರ್‌ನ್ಯಾಷನಲ್‌ ಬುಕ್‌ ಆಫ್ ರೆಕಾರ್ಡ್‌ ವತಿಯಿಂದ ಪ್ರಮಾಣಪತ್ರ ದೊರೆತಿದೆ.

ಗುರುವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಂಪ್‍ರೋಪ್ ಫೆಡರೇಷನ್ ಆಫ್‌ ಇಂಡಿಯಾದ ನಿರ್ದೇಶಕ ಅನಂತ ಜೋಶಿ ಅವರು ವಿಕಾಸ ಬ್ಯಾಂಕ್‌ನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ಅವರಿಗೆ ಪ್ರಮಾಣಪತ್ರ ಹಸ್ತಾಂತರಿಸಿದರು.

ಕಳೆದ ವರ್ಷ ಜುಲೈ 27 ರಂದು ಹೊಸಪೇಟೆಯಲ್ಲಿ ವಿಕಾಸ ಬ್ಯಾಂಕ್ ತನ್ನ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಹಮ್ಮಿಕೊಂಡಿದ್ದ ಜಂಪ್‌ರೋಪ್‌ ಡಬಲ್‌ ಡಚ್‌ನಲ್ಲಿ 9 ರಾಜ್ಯಗಳ 178 ಕ್ರೀಡಾಪಟುಗಳು ನಿರಂತರ 36 ಗಂಟೆ 35 ನಿಮಿಷ ಸ್ಕಿಪ್ಪಿಂಗ್‌ ಮಾಡಿದ್ದರು. ಈ ಹಿಂದೆ 24 ಗಂಟೆಗಳ ಡಬಲ್ ಡಚ್ ಮಾಡಿದ್ದು ವಿಶ್ವದಾಖಲೆಯಾಗಿತ್ತು.

ADVERTISEMENT

‘ರಾಜ್ಯದ 8 ಜಿಲ್ಲೆಗಳ 111 ಕ್ರೀಡಾಪಟುಗಳು ಅದರಲ್ಲೂ ಮುಖ್ಯವಾಗಿ ವಿಜಯನಗರ, ಕೊಪ್ಪಳ, ರಾಯಚೂರು, ಧಾರವಾಡ, ಬಾಲಗಕೋಟೆ ಹಾಗೂ ಬೆಂಗಳೂರು ಜಿಲ್ಲೆಗಳು ಸೇರಿದಂತೆ 111 ಕ್ರೀಡಾಪಟುಗಳು ಇದರಲ್ಲಿ ಭಾಗಿಯಾಗಿದ್ದರು. ಯಾದಗಿರಿಯಲ್ಲಿ ಇಂದು ರೋಪ್‌ಜಂಪ್‌ ಶಾಲಾ ಕ್ರೀಡೆಯಲ್ಲಿ ಅಡಕವಾಗಿದೆ. ಇತರ ಜಿಲ್ಲೆಗಳಲ್ಲಿ ಸಹ ಈ ಕ್ರೀಡೆಗೆ ಬೆಂಬಲ ದೊರಕತೊಡಗಿದೆ. ಕೊಪ್ಪಳದಲ್ಲಿ ಸಂಘದ ರಾಜ್ಯ ಮಟ್ಟದ ಕಚೇರಿ ಇದ್ದು, ಕ್ರೀಡೆಗೆ ಸರ್ಕಾರದಿಂದ ಉತ್ತೇಜನ ಸಿಗುವ ವಿಶ್ವಾಸ ಇದೆ’ ಎಂದು ಅನಂತ ಜೋಶಿ ಹೇಳಿದರು.

ವಿಶ್ವನಾಥ ಚ. ಹಿರೇಮಠ ಮಾತನಾಡಿ, ‘ವಿಕಾಸ ಯುವಕ ಮಂಡಳಿ, ವಿಕಾಸ ಪರಿವಾರ ಆತ್ಮೀಯರು, ಹಿತೈಷಿಗಳು, ಸಿಬ್ಬಂದಿಯ ಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ಬ್ಯಾಂಕ್‌ನ ಬೆಳ್ಳಿ ಹಬ್ಬ ಇದರಿಂದ ಸ್ಮರಣೀಯವಾಗಿದೆ. ಇದು ಈಗ ನಾಡಿನ ಹೆಮ್ಮೆಯ ವಿಚಾರವೂ ಆಗಿದೆ’ ಎಂದರು.

ರಾಜ್ಯ ಅಸೋಶಿಯೇಷನ್ ಕಾರ್ಯಾಧ್ಯಕ್ಷ ರಾಘವೇಂದ್ರ ಜಮಖಂಡಿಕರ್, ನಿರ್ದೇಶಕರಾದ ಕೆ. ದಿವಾಕರ, ರಮೇಶ ಪುರೋಹಿತ್, ಅಸೋಶಿಯೇಷನ್ ಪ್ರಧಾನ ಕಾರ್ಯದರ್ಶಿ ಅಬ್ಬುಲ್ ರಜಾಕ್ ಟೇಲರ್, ವಿಕಾಸ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಪ್ರಸನ್ನ ಹಿರೇಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.