ADVERTISEMENT

‘ವಿಕಾಸ’ ಬೆಳ್ಳಿಹಬ್ಬ; ವರ್ಷವಿಡೀ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 15:21 IST
Last Updated 17 ಆಗಸ್ಟ್ 2021, 15:21 IST
ವಿಶ್ವನಾಥ ಚ. ಹಿರೇಮಠ
ವಿಶ್ವನಾಥ ಚ. ಹಿರೇಮಠ   

ಹೊಸಪೇಟೆ (ವಿಜಯನಗರ): ‘ವಿಕಾಸ ಸೌಹಾರ್ದ ಕೋ–ಆಪರೇಟಿವ್ ಬ್ಯಾಂಕಿನ ಬೆಳ್ಳಿಹಬ್ಬದ ಪ್ರಯುಕ್ತ ವರ್ಷವಿಡೀ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ ಚ. ಹಿರೇಮಠ ತಿಳಿಸಿದರು.

‘ಆ. 21ರಂದು ಬೆಳಿಗ್ಗೆ 10ಕ್ಕೆ ನಗರದ ಮಲ್ಲಿಗಿ ಹೋಟೆಲ್‌ನಲ್ಲಿ ಬೆಳ್ಳಿಹಬ್ಬ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ಅಧ್ಯಕ್ಷ ಎಚ್‌.ಕೆ. ಪಾಟೀಲ ಉದ್ಘಾಟಿಸುವರು. ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧಿಪತಿ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.

ಸಚಿವ ಆನಂದ್‌ ಸಿಂಗ್‌ ಬ್ಯಾಂಕಿನ ಕಚೇರಿ ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಅಧ್ಯಕ್ಷ ಬಿ.ಎಚ್‌. ಕೃಷ್ಣಾರೆಡ್ಡಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು’ ಎಂದು ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

ADVERTISEMENT

‘ವರ್ಷವಿಡೀ ವಾರದ ಎಲ್ಲ ದಿನಗಳಂದು ಒಂದೊಂದು ಕಾರ್ಯಕ್ರಮ ಏರ್ಪಡಿಸಲಾಗಿದೆ. ಪ್ರತಿ ಸೋಮವಾರ ‘ವಿಕಾಸ ಥಟ್‌ ಅಂತ ಹೇಳಿ’ ಫೇಸ್‌ಬುಕ್‌ ನೇರಪ್ರಸಾರ, ಪ್ರತಿ ಮಂಗಳವಾರ ‘ವಿಕಾಸ ರಸಪ್ರಶ್ನೆ’, ಪ್ರತಿ ಬುಧವಾರ ‘ಯುವ ವಿಕಾಸ’, ಪ್ರತಿ ಗುರುವಾರ ‘ಸಹಕಾರಿಗಳ ವಿಕಾಸ’, ಶುಕ್ರವಾರ ‘ಮಹಿಳಾ ವಿಕಾಸ’, ಶನಿವಾರ ‘ವಿಕಾಸ ಬೆಳ್ಳಿಹಬ್ಬದ ಉಪನ್ಯಾಸ ಮಾಲೆ’, ಭಾನುವಾರ ‘ವಿಕಾಸ ಒಗಟೊಗಟು’ ಕಾರ್ಯಕ್ರಮ ಆಕಾಶವಾಣಿಯಲ್ಲಿ ಮೂಡಿಬರಲಿದೆ’ ಎಂದು ತಿಳಿಸಿದರು.

‘ಆನ್‌ಲೈನ್‌ನಲ್ಲಿ ಕವನ ರಚನೆ, ಕಥೆ ರಚನೆ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಸಾಕ್ಷ್ಯಚಿತ್ರ ನಿರ್ಮಾಣ ಸ್ಪರ್ಧೆ ಆಯೋಜಿಸಲಾಗುವುದು. ನಗರದಲ್ಲಿನ ‘ವಿಕಾಸ ಬಾಲವನ’ ಪುನರುಜ್ಜೀವನಗೊಳಿಸಲಾಗುವುದು. ತಾಲ್ಲೂಕು ವ್ಯಾಪ್ತಿಯ ಒಂದು ಹಳ್ಳಿಯನ್ನು ಸಂಪೂರ್ಣ ಡಿಜಿಟಲ್‌ ಬ್ಯಾಂಕಿಂಗ್‌ಗೊಳಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಜಂಪ್‌ರೋಪ್‌ ಕ್ರೀಡೆಯಲ್ಲಿ ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್‌ಗೆ ಎಲ್ಲ ರೀತಿಯ ಸಹಕಾರ ಸ್ಥಳೀಯ ಕ್ರೀಡಾಪಟುಗಳಿಗೆ ನೀಡಲಾಗುವುದು’ ಎಂದು ವಿವರಿಸಿದರು.

‘ನಗರ ಹೊರವಲಯದಲ್ಲಿ ವೃದ್ಧಾಶ್ರಮ ಆರಂಭಿಸಲು ಚಿಂತಿಸಲಾಗಿದ್ದು, ಜಮೀನು ಕೊಡಲು ದಾನಿಗಳು ಮುಂದೆ ಬಂದಿದ್ದಾರೆ. ಬೆಳ್ಳಿಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಗುವುದು’ ಎಂದು ತಿಳಿಸಿದರು.

‘ಬೆಳ್ಳಿಹಬ್ಬದ ಪ್ರಯುಕ್ತ ವಿಕಾಸ ಕುಂಕುಮ ಸೌಭಾಗ್ಯ ಯೋಜನೆ, ವಿಕಾಸ ಆಸರೆ ಉಳಿತಾಯ ಖಾತೆ, ಯುವ ವಿಕಾಸ ಉಳಿತಾಯ ಖಾತೆ ಠೇವಣಿ ಯೋಜನೆ, ವಿಕಾಸ ಕೃಷಿಕ ಸಾಲ, ಮಹಿಳೆಯರು ಮತ್ತು ಯುವಕರಿಗೆ ವಿಶೇಷ ಸಾಲ ಯೋಜನೆ ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.

ನಿರ್ದೇಶಕರಾದ ಛಾಯಾ ದಿವಾಕರ, ರಮೇಶ ಪುರೋಹಿತ್‌, ಎಂ. ವೆಂಕಪ್ಪ, ಜಿ. ದೊಡ್ಡ ಬೋರಯ್ಯ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಸನ್ನ ಹಿರೇಮಠ, ವಿಭಾಗೀಯ ವ್ಯವಸ್ಥಾಪಕಿ ಮಧುಶ್ರೀ, ಹೊಸಪೇಟೆ ಶಾಖೆ ವ್ಯವಸ್ಥಾಪಕ ಗುರುಸಿದ್ದಯ್ಯ ಹಿರೇಮಠ, ಮಾಧ್ಯಮ ಉಸ್ತುವಾರಿ ಕಾಜಿಂ ಬಾಷಾ, ಮಾಜಿ ನಿರ್ದೇಶಕ ಅನಂತ ಜೋಶಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.