ADVERTISEMENT

ಮತದಾರರಾಗಿ ಸೂಕ್ತ ವ್ಯಕ್ತಿಗೆ ಮತ ಹಾಕಿ: ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2022, 10:28 IST
Last Updated 1 ಆಗಸ್ಟ್ 2022, 10:28 IST
 ‘ಚುನಾವಣೆ ಸುಧಾರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್
‘ಚುನಾವಣೆ ಸುಧಾರಣೆ’ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್   

ಹೊಸಪೇಟೆ (ವಿಜಯನಗರ): ‘18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿ, ಮತದಾರರಾಗಿ ಬರುವ ಚುನಾವಣೆಯಲ್ಲಿ ಸೂಕ್ತ ವ್ಯಕ್ತಿಗೆ ಮತ ಹಾಕಿ ಆರಿಸಬೇಕು’ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ತಿಳಿಸಿದರು.

ಜಿಲ್ಲಾಡಳಿತದಿಂದ ಸೋಮವಾರ ನಗರದ ವಿಜಯನಗರ ಕಾಲೇಜಿನಲ್ಲಿ ಏರ್ಪಡಿಸಿದ್ದ ‘ಚುನಾವಣೆ ಸುಧಾರಣೆಗಳು ಮತ್ತು ಮತದಾರರ ಗುರುತಿನ ಚೀಟಿಗೆ ಆಧಾರ್‌ ಸಂಖ್ಯೆ ಸ್ವಯಂ ಜೋಡಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತದಾರರ ಗುರುತಿನ ಚೀಟಿಗೆ ಆಧಾರ್‌ ಕಾರ್ಡ್‌ ಸಂಖ್ಯೆ ಜೋಡಿಸಬೇಕು. ಒಂದುವೇಳೆ ಆಧಾರ್‌ ಕಾರ್ಡ್‌ ಇರದಿದ್ದರೆ ಇತರೆ 11 ಗುರುತಿನ ಚೀಟಿ ವಿವರ ದಾಖಲಿಸಬಹುದು. ತಂತ್ರಜ್ಞಾನದ ಬಗ್ಗೆ ಗೊತ್ತಿದ್ದರೆ ಆನ್‌ಲೈನ್‌ನಲ್ಲಿ ಫಾರಂ 6ಬಿ ಮೂಲಕ ಭರ್ತಿ ಮಾಡಬೇಕು. ಒಂದುವೇಳೆ ಗೊತ್ತಿರದಿದ್ದರೆ ನೇರವಾಗಿ ಬೂತ್‌ ಮಟ್ಟದ ಅಧಿಕಾರಿಗೆ ಭೇಟಿಯಾಗಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿದರು.

ADVERTISEMENT

ಒಂದೇ ರಾಜ್ಯದಲ್ಲಿ ಒಬ್ಬ ವ್ಯಕ್ತಿ ಎರಡ್ಮೂರು ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಅದನ್ನು ತೆಗೆಯಲು ಸುಲಭವಾಗುತ್ತದೆ ಎನ್ನುವ ಕಾರಣಕ್ಕಾಗಿ ಆಧಾರ್‌ ಸಂಖ್ಯೆ ಜೋಡಣೆ ಮಾಡಲಾಗುತ್ತಿದೆ. ಈ ಹಿಂದೆ ಬಳ್ಳಾರಿಯಲ್ಲಿ ಆಂಧ್ರದ ಗಡಿ ಭಾಗದವರ ಅನೇಕರ ಹೆಸರು ಎರಡೆರಡು ಮತದಾರರ ಪಟ್ಟಿಯಲ್ಲಿದ್ದವು. ಆ ರೀತಿ ಆಗಬಾರದು ಎನ್ನುವ ಕಾರಣಕ್ಕಾಗಿ ಈ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಇತರೆ ಮುಂದುವರೆದ ದೇಶಗಳಿಗಿಂತಲೂ ನಮ್ಮಲ್ಲಿ ಚುನಾವಣೆ ವ್ಯವಸ್ಥೆ ಬಹಳ ಉತ್ತಮವಾಗಿದೆ. ಹೋದ ವರ್ಷ ಅಮೆರಿಕದಲ್ಲಿ ನಡೆದ ಚುನಾವಣೆ ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ನಮ್ಮ ದೇಶದಲ್ಲಿ ವ್ಯವಸ್ಥೆ ಉತ್ತಮವಾಗಿದ್ದು, ಅದರ ಬಗ್ಗೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎನ್‌. ಮಹೇಶ್‌ ಬಾಬು ಮಾತನಾಡಿ, ಮತದಾರರ ಪಟ್ಟಿ ಚುನಾವಣೆ ವ್ಯವಸ್ಥೆಗೆ ಅಸ್ತ್ರವಿದ್ದಂತೆ. ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿ, ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಪಾಲುದಾರರಾಗಬೇಕು. ಮತದಾರರ ಗುರುತಿನ ಚೀಟಿಯೊಂದಿಗೆ ಆಧಾರ್‌ ಸಂಖ್ಯೆ ಜೋಡಿಸಬೇಕು. ಅದು ಇಲ್ಲದಿದ್ದರೆ ಚಾಲನಾ ಪರವಾನಗಿ, ಪಾಸ್‌ಪೋರ್ಟ್‌, ಕಾರ್ಮಿಕರ ಆರೋಗ್ಯ ವಿಮೆ ಕಾರ್ಡ್‌ ಸಂಖ್ಯೆ, ನರೇಗಾ ಜಾಬ್‌ ಕಾರ್ಡ್‌ ಸಂಖ್ಯೆ ಸೇರಿದಂತೆ ಇತರೆ 11 ದಾಖಲೆಗಳ ವಿವರ ನಮೂದಿಸಬಹುದು ಎಂದು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ., ತಹಶೀಲ್ದಾರ್‌ ವಿಶ್ವಜೀತ್‌ ಮೆಹ್ತಾ, ವಿಜಯನಗರ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಅಸುಂಡಿ ನಾಗರಾಜ್‌, ಪ್ರಾಚಾರ್ಯ ವಿ.ಎಸ್‌. ಪ್ರಭಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.