
ಹೊಸಪೇಟೆ (ವಿಜಯನಗರ): ‘ನಾವೆಲ್ಲ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು, ಪಕ್ಷಕ್ಕಾಗಿಯೇ ದುಡಿಯುತ್ತಿರುವವರು. ಆದರೆ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಿರಾಜ್ ಶೇಖ್ ಅವರೇ ವೋಟ್ ಚೋರ್ ಕೆಲಸ ಮಾಡಿದವರು, ಅವರಿಗೆ ವೋಟ್ ಚೋರಿ ಅಭಿಯಾನದಲ್ಲಿ ಪಾಲ್ಗೊಂಡಿಲ್ಲ ಎಂದು ಹೇಳುವ ನೈತಿಕತೆಯೇ ಇಲ್ಲ’ ಎಂದು ಮಾಜಿ ಶಾಸಕ ಎಲ್.ಬಿ.ಪಿ.ಭೀಮಾ ನಾಯ್ಕ್ ಹೇಳಿದ್ದಾರೆ.
‘ಪ್ರಜಾವಾಣಿ’ಯಲ್ಲಿ ಗುರುವಾರ ಪ್ರಕಟವಾದ ‘ಯುವ ಕಾಂಗ್ರೆಸ್‌ನಲ್ಲಿ ಸುಂಟರಗಾಳಿ ಸನ್ನಿಹಿತ?’ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದ ಭೀಮಾ ನಾಯ್ಕ್, ‘ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ 2023ರ ಚುನಾವಣೆಯಲ್ಲಿ ವೋಟ್ ಚೋರ್ ಮಾಡಿ ಜೆಡಿಎಸ್‌ಗೆ ಕಾಂಗ್ರೆಸ್‌ನ ಮತ ಹಾಕಿಸಿದ್ದು, ಎಲ್ಲಾ ಮಸೀದಿಗಳಿಗೆ ಸಂದೇಶ ಕಳುಹಿಸಿ ಕಾಂಗ್ರೆಸ್‌ಗೆ ಮತ ಹಾಕದಂತೆ ಸೂಚಿಸಿದ್ದು ಇದೇ ಸಿರಾಜ್ ಶೇಖ್. ಹೀಗಾಗಿ ಅವರೇ ಪಕ್ಷದ್ರೋಹಿ’ ಎಂದಿದ್ದಾರೆ.
‘ಸಿರಾಜ್ ಶೇಖ್ 2008ರಲ್ಲಿ ಬಿಜೆಪಿಗೆ ಹೋಗಿ ಕಾಂಗ್ರೆಸ್ ಸೋಲಿಸಿದರು. 2013ರಲ್ಲಿ ಬಿಎಸ್‌ಆರ್‌ಗೆ ಹೋಗಿ ಎಂ.ಪಿ.ರವೀಂದ್ರ ಅವರನ್ನು ಸೋಲಿಸುವುದಾಗಿ ತೊಡೆತಟ್ಟಿ ಹರಪನಹಳ್ಳಿಯಿಂದ ಅರ್ಧಕ್ಕೆ ಓಡಿ ಬಂದರು. 2018ರಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದುಕೊಂಡೂ ನನ್ನ ವಿರುದ್ಧ ನಿಂತಿದ್ದ ಪಕ್ಷೇತರ ಅಭ್ಯರ್ಥಿ ಪರಮೇಶ್ವರಪ್ಪ ಅವರಿಗೆ ಬಹಿರಂಗವಾಗಿ ಪ್ರಚಾರ ಮಾಡಿದರು. ಇಂತವರಿಂದ ಪಾಠ ಕಲಿಯುವ ಅಗತ್ಯ ಇಲ್ಲ’ ಎಂದು ಭೀಮಾ ನಾಯ್ಕ್ ಹೇಳಿದ್ದಾರೆ.
‘ದೇಶದಾದ್ಯಂತ ಕಾಂಗ್ರೆಸ್ ವತಿಯಿಂದ ಬಿಜೆಪಿ ವಿರುದ್ಧ ವೋಟ್ ಚೋರ್ ಅಭಿಯಾನ ನಡೆಯುತ್ತಿದ್ದರೆ, ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಸಿರಾಜ್ ಶೇಖ್ ವಿರುದ್ಧವೇ ಈ ಅಭಿಯಾನ ನಡೆಸಬೇಕಾಗಿದೆ’ ಎಂದು ಕುಟುಕಿದ್ದಾರೆ.
ಅಭಿಯಾನ: ‘ವೋಟ್ ಚೋರಿ ವಿರುದ್ಧ ಸಹಿ ಸಂಗ್ರಹ ಅಭಿಯಾನದಲ್ಲಿ ನಾನೂ ಪಾಲ್ಗೊಂಡಿದ್ದೆ, ಸಿರಾಜ್ ಶೇಖ್ ಅವರನ್ನು ಜಿಲ್ಲಾ ಘಟಕದ ಅಧ್ಯಕ್ಷ ಎಂದು ನಾವು ಪರಿಗಣಿಸಿಲ್ಲವಾದ ಕಾರಣ ಸಂಗ್ರಹಿಸಿದ ಸಹಿಯನ್ನು ನೇರವಾಗಿ ಕೆಪಿಸಿಸಿಗೆ ಕೊಟ್ಟಿದ್ದೇವೆ. ಯುವ ಕಾಂಗ್ರೆಸ್ ವಿಚಾರದಲ್ಲಿ ಮಾತನಾಡುವ ಅಧಿಕಾರ ಸಿರಾಜ್ ಶೇಖ್‌ಗೆ ಇಲ್ಲ’ ಎಂದು ಅವರು ಹೇಳಿದ್ದಾರೆ.
‘20 ಸಾವಿರ ಸಹಿ ಸಂಗ್ರಹಿಸಿರುವೆ’
‘ಓಟ್ ಚೋರಿ ಅಭಿಯಾನದಲ್ಲಿ ನಾನು ಹಲವೆಡೆ ಪಾಲ್ಗೊಂಡಿದ್ದೇನೆ ಹಾಗೂ 20 ಸಾವಿರಕ್ಕೂ ಹೆಚ್ಚು ಸಹಿ ಸಂಗ್ರಹಿಸಿ ಕೆಪಿಸಿಸಿಗೆ ಸಲ್ಲಿಸಿರುವೆ. ನಮ್ಮ ಹೋರಾಟದ ಪ್ರತಿ ಮಾಹಿತಿಯನ್ನೂ ನೀಡಲಾಗಿದೆ. ಚುನಾಯಿತ ಅಧ್ಯಕ್ಷನಾದ ನನ್ನ ವಿರುದ್ಧ ಸಿರಾಜ್ ಶೇಖ್ ವಿನಾಕಾರಣ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ. ಈ ಹಿಂದೆ ಬಿಜೆಪಿಯಿಂದಲೇ ಫಲಾನುಭವಿಯಾಗಿದ್ದ ಸಿರಾಜ್‌ಶೇಖ್ ತಮ್ಮ ಪೂರ್ವಾಶ್ರಮದ ವಿಷಯವನ್ನು ಮರೆತಂತಿದೆ. ಈವರೆಗೂ ಕೇವಲ ಪಕ್ಷದವರ ವಿರುದ್ಧ ಆರೋಪ ಮಾಡುವ ಮೂಲಕ ಬಿಟ್ಟಿ ಪ್ರಚಾರ ಪಡೆಯುವುದು ಹೊರತುಪಡಿಸಿದರೆ ಸಿರಾಜ್ ಸಾಧನೆ ದೊಡ್ಡ ಸೊನ್ನೆಯಾಗಿದೆ’ ಎಂದು ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ನಾಯ್ಕ್ ಹೇಳಿದ್ದಾರೆ.
‘ಸಿರಾಜ್ ಶೇಖ್ ಹಗಲು ಹೊತ್ತಿನಲ್ಲಿ ಕಾಂಗ್ರೆಸ್ ಪರ ಮಾತನಾಡಿ ರಾತ್ರಿ ವೇಳೆಯಲ್ಲಿ ಮತಚೋರರ ಜತೆ ನಂಟು ಬೆಳೆಸುವುದು ಕ್ಷೇತ್ರದ ಜನರಿಗೆ ಗೊತ್ತಿರದ ಸಂಗತಿಯಲ್ಲ. ಇತ್ತೀಚೆಗೆ ನಡೆದ ರಾಬಕೋವಿ ಹಾಲು ಒಕ್ಕೂಟದ ಚುನಾವಣೆಯಲ್ಲಿ ಅವರು ಮತಚೋರರ ಜೊತೆಗೆ ಸಭೆ ನಡೆಸಿದ್ದರು. ಈ ಕುರಿತು ಆತ್ಮಸಾಕ್ಷಿ ಇದ್ದರೆ ಒಪ್ಪಿಕೊಳ್ಳಲಿ’ ಎಂದು ಹೇಳಿದ್ದಾರೆ.
‘ನ.16ರ ಬೆಂಗಳೂರು ಸಭೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ಎರಡು ದಿನ ಮೊದಲೇ ತಿಳಿಸಿದ್ದೆ. ನೋಟಿಸ್ ಬರುವುದು ಸಹಜ ಅದಕ್ಕೆ ವಿವರಣೆ ನೀಡುವೆ’ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.