ADVERTISEMENT

ಕೂಡ್ಲಿಗಿ ಪಟ್ಟಣದಲ್ಲಿ ಮತದಾನ ಜಾಗೃತಿ ಜಾಥಾ; ಶಾಲಾ ಮಕ್ಕಳಿಂದ ಅರಿವು

ಮತ ಹಾಕಿ ಪ್ರಜಾಪ್ರಭುತ್ವ ಉಳಿಸಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2023, 11:51 IST
Last Updated 24 ಫೆಬ್ರುವರಿ 2023, 11:51 IST
   

ಕೂಡ್ಲಿಗಿ (ವಿಜಯನಗರ ಜಿಲ್ಲೆ): ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಪಟ್ಟಣದಲ್ಲಿ ಶುಕ್ರವಾರ ಮತದಾನ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿತ್ತು.

ಪಟ್ಟಣದ ಮಹಾತ್ಮ ಗಾಂಧಿ ಚಿತಾ ಭಸ್ಮವಿರುವ ಹುತಾತ್ಮರ ಸ್ಮಾರಕದಿಂದ ಆರಂಭವಾದ ಜಾಥಾ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ, ಪಾದಗಟ್ಟೆ, ಮದಕರಿ ನಾಯಕ ವೃತ್ತ, ಕೊತ್ತಲಾಂಜನೇಯ ದೇವಸ್ಥಾನ ಮುಂಭಾಗದಿಂದ ಹೊಸಪೇಟೆ ರಸ್ತೆಯ ಮೂಲಕ ಮದಕರಿ ನಾಯಕ ವೃತ್ತದಿಂದ ಹಾದು ತಾಲ್ಲೂಕು ಆಡಳಿತ ಭವನದ ಎದುರು ಕೊನೆಗೊಂಡಿತು.

‘ಮತ ಹಾಕಿ ಪ್ರಜಾಪ್ರಭುತ್ವ ಉಳಿಸಿ’, ‘ಹಣಕ್ಕಾಗಿ ಮತ ಮಾರಿಕೊಳ್ಳಬೇಡಿ’, ‘ತಪ್ಪದೇ ಮತ ಚಲಾಯಿಸಿ’ ಎಂದು ಮಾರ್ಗದುದ್ದಕ್ಕೂ ವಿದ್ಯಾರ್ಥಿಗಳು ಮತದಾನದ ಮಹತ್ವ ಸಾರುವ ಘೋಷಣೆಗಳನ್ನು ಹಾಕಿ ಸಾರ್ವಜನಿಕರ ಗಮನ ಸೆಳೆದರು.

ADVERTISEMENT

ಇದಕ್ಕೂ ಮುನ್ನ ಜಾಗೃತಿ ಜಾಥಾಕ್ಕೆ ತಹಶೀಲ್ದಾರ್ ಟಿ. ಜಗದೀಶ್ ಹುತಾತ್ಮರ ಸ್ಮಾರಕದ ಬಳಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ 100ಕ್ಕೂ ಹೆಚ್ಚು ಮತ ಕೇಂದ್ರಗಳಲ್ಲಿ ಹಿಂದಿನ ಚುನಾವಣೆಯಲ್ಲಿ ಶೇ 70ಕ್ಕಿಂತ ಕಡಿಮೆ ಮತದಾನವಾಗಿದೆ. ಹಿಂದುಳಿದ ತಾಲ್ಲೂಕಿನ ಬಹುತೇಕ ಮತದಾರರು ಕೂಲಿ ಅರಸಿ ವಲಸೆ ಹೋಗುತ್ತಾರೆ. ಇಂತಹವರು ವಿಧಾನಸಭಾ, ಲೋಕಸಭಾ ಚುನಾವಣಾ ಸಂದರ್ಭದಲ್ಲಿ ಮರಳಿ ಬಂದು ಮತದಾನದಲ್ಲಿ ಭಾಗಿಯಾಗುವುದಿಲ್ಲ. ಪಟ್ಟಣದ ವ್ಯಾಪ್ತಿಯಲ್ಲಿಯೂ ಸಹ ಮತದಾನ ಕುಂಠಿತವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಅವರಲ್ಲಿ ಜಾಗೃತಿ ಇಲ್ಲದೆ ಇರುವುದು. ‘ಪ್ರಜಾವಾಣಿ’ ಅಮೃತ ಮಹೋತ್ಸವದ ಆಂಗವಾಗಿ ಪ್ರಜಾವಾಣಿ ಬಳಗದಿಂದ ಮತದಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನಾರ್ಹ ಎಂದು ಹೇಳಿದರು.

ಸಿಪಿಐ ವಸಂತ ಎಸ್.ಅಸೋದೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ. ರವಿಕುಮಾರ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಫಿರೋಜ್ ಖಾನ್, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಎಸ್. ಜಗದೀಶ್, ಬಿಸಿಯೂಟ ಯೋಜನಾಧಿಕಾರಿ ಆಂಜನೇಯ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ನಾಗರಾಜ ಕನ್ನೀಹಳ್ಳಿ, ಪಿಎಸ್‌ಐ ಧನಂಜಯ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ಶಿಕ್ಷಕ ಕೆ.ಪಿ.ಎಂ. ಸ್ವಾಮಿ, ಕಂದಾಯ ನಿರೀಕ್ಷಕ ಕುಮಾರಸ್ವಾಮಿ, ಚುನಾವಣಾ ವಿಭಾಗದ ಶಿವಕುಮಾರ್ ಗೌಡ ಇದ್ದರು.

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗ ಹಾಗೂ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಜಾಥಾದಲ್ಲಿ ಪಾಲ್ಗೊಂಡಿದ್ದರು. ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.