ADVERTISEMENT

ತುಂಗಭದ್ರೆ ಸೆರಗಿನ ತಾಲ್ಲೂಕಿಗೆ ನೀರಿನ ಸಂಕಟ

ಎಂಟು ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳಿಗೆ ಮೊರೆ–40 ಗ್ರಾಮಗಳಲ್ಲಿ ನೀರಿನ ಅಭಾವ ಭೀತಿ

ಎಂ.ಜಿ.ಬಾಲಕೃಷ್ಣ
Published 19 ಮಾರ್ಚ್ 2024, 4:49 IST
Last Updated 19 ಮಾರ್ಚ್ 2024, 4:49 IST
<div class="paragraphs"><p>ಹೊಸಪೇಟೆ ತಾಲ್ಲೂಕಿನ ದರೋಜಿ ಕರಡಿಧಾಮದ ನೀರಿನ ಹೊಂಡವೊಂದಕ್ಕೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿರುವುದು</p></div>

ಹೊಸಪೇಟೆ ತಾಲ್ಲೂಕಿನ ದರೋಜಿ ಕರಡಿಧಾಮದ ನೀರಿನ ಹೊಂಡವೊಂದಕ್ಕೆ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿರುವುದು

   

ಹೊಸಪೇಟೆ : ತುಂಗಭದ್ರಾ ಜಲಾಶಯದ ಸೆರಗಿನಲ್ಲೇ ಇರುವ ಹೊಸಪೇಟೆ ನಗರ ಮತ್ತು ಹೊಸಪೇಟೆ ತಾಲ್ಲೂಕಿನ ಉದ್ದಗಲಕ್ಕೆ ನೀರಿನ ಸಮಸ್ಯೆ ಇರಲೇಬಾರದಿತ್ತು. ಆದರೆ ರಾಜಕಾರಣಿಗಳ ಅಗ್ಗದ ಪ್ರಚಾರ ಬಯಕೆ, ದೂರದೃಷ್ಟಿ ಯೋಜನೆಗಳ ಕೊರತೆಯಿಂದಾಗಿ ನೀರಿನ ಸಮಸ್ಯೆ ತಾಲ್ಲೂಕನ್ನು ದಟ್ಟವಾಗಿ ಕಾಡಲಾರಂಭಿಸಿದೆ.

ತಾಲ್ಲೂಕಿನ ಪಾಪಿನಾಯಕನಹಳ್ಳಿ, ಗಾದಿಗನೂರು, ಬೈಲವದ್ದಿಗೇರಿ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಈ ಭಾಗದಲ್ಲಿ ಎಂಟು ಕೊಳವೆಬಾವಿಗಳನ್ನು ಖಾಸಗಿಯವರಿಂದ ಬಾಡಿಗೆಗೆ ಪಡೆಯಲಾಗಿದೆ. ಇನ್ನೂ 40 ಗ್ರಾಮಗಳಲ್ಲಿ ನೀರಿನ ಕೊರತೆ ಆಗುವುದನ್ನು ತಾಲ್ಲೂಕು ಪಂಚಾಯಿತಿ ಅಂದಾಜಿಸಿದ್ದು, ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಇಟ್ಟುಕೊಳ್ಳಲಾಗಿದೆ.

ADVERTISEMENT

‘ತುಂಗಭದ್ರಾ ಜಲಾಶಯ ಹೊಸಪೇಟೆಯ ಮಗ್ಗುಲಲ್ಲೇ ಇದೆ. ವಿಜಯನಗರ ಅರಸರ ಕಾಲದಲ್ಲೇ ನಿರ್ಮಾಣವಾಗಿದ್ದ ಕಾಲುವೆಗಳು ತಾಲ್ಲೂಕಿನ ಕೆಲವು ಗ್ರಾಮಗಳಿಗೆ ಈಗಲೂ ನೀರು ಉಣಿಸುತ್ತಿರುವುದು ಸುಳ್ಳಲ್ಲ. ಆದರೆ ಸ್ಥಳೀಯ ನಾಯಕರು ದೂರದೃಷ್ಟಿಯಿಂದ ಕೆಲಸ ಮಾಡಿದ್ದರೆ, ಪಾವಗಡ ಯೋಜನೆಯಂತಹ ಯೋಜನೆಯನ್ನು ರೂಪಿಸಿ ಜಲಾಶಯದಿಂದ ನೇರವಾಗಿ ತಾಲ್ಲೂಕಿನ ಬರಪೀಡಿತ ಪ್ರದೇಶಗಳಿಗೆ ನೀರು ಹರಿಸಬಹುದಿತ್ತು. ಇನ್ನಾದರೂ ಅದರತ್ತ ಗಮನ ಹರಿಸುವುದು ಸೂಕ್ತ’ ಎಂದು ಪಾಪಿನಾಯಕನಹಳ್ಳಿಯ ರೈತ ಮುಖಂಡ ಮಹಾಂತೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪಾಪಿನಾಯಕನಹಳ್ಳಿ ಏತ ನೀರಾವರಿ ಯೋಜನೆ ಮೊದಲೇ ಕುಂಟುತ್ತ ಸಾಗಿದೆ. ಈ ವರ್ಷ ಮಳೆ ಕಡಿಮೆ ಸುರಿದ ಕಾರಣ ತಳವಾರಘಟ್ಟದ ಪಂಪ್‌ಹೌಸ್‌ನಿಂದ ನೀರು ಎತ್ತುವುದೇ ಅಸಾಧ್ಯವಾಗಿದೆ. ಹೀಗಿರುವಾಗ ಬರಗಾಲದ ಸಮಯದಲ್ಲಿ ನೆರವಿಗೆ ಬರಬೇಕಾಗಿದ್ದ ಏತ ನೀರಾವರಿ ಯೋಜನೆ ನಿಷ್ಪ್ರಯೋಜಕ ಎಂಬುದು ಸಾಬೀತಾಗಿದೆ. ಪಿ.ಕೆ.ಹಳ್ಳಿಗೆ ಸಂಪರ್ಕ ಕಲ್ಪಿಸಿರುವ ಪೈಪ್‌ಲೈನ್‌ನಲ್ಲಿ ಹಲವೆಡೆ ಸೋರಿಕೆ ಆಗುತ್ತಿರುವ ಕಾರಣ ನಾಲ್ಕೈದು ಸಾವಿರ ಜನಸಂಖ್ಯೆ ಇರುವ ಈ ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ. ಇನ್ನಾದರೂ ಪಾವಗಡ ಯೋಜನೆ ಮಾದರಿಯಲ್ಲಿ ಹೊಸಪೇಟೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಒತ್ತಾಯಿಸಿದರು.

ಅವಲಂಬನೆ ಅನಿವಾರ್ಯ: ‘ಮಳೆ ಕೊರತೆಯಿಂದ ಅಂತರ್ಜಲ ಕೊರತೆ ಉಂಟಾಗಿದೆ. ಹೀಗಾಗಿ ಕೆಲವು ಕಡೆಗಳಲ್ಲಿ ಖಾಸಗಿ ಕೊಳವೆಬಾವಿಗಳಿಗೆ ಅವಲಂಬನೆ ಅನಿವಾರ್ಯವಾಗಿದೆ. ನಾಗೇನಹಳ್ಳಿ, ಮಲಪನಗುಡಿ, ಹಂಪಿ, ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಹುಗ್ರಾಮ ಕುಡಿಯುವ ಯೋಜನೆ ಇರುವ ಕಾರಣ ಯಾವ ಚಿಂತೆಯೂ ಇಲ್ಲ. ಉಳಿದ ಕಡೆಗಳಿಗೆ ನೀರು ಪೂರೈಸುವಲ್ಲಿ ಸ್ಪಲ್ಲ ತೊಡಕಾಗಿದೆ. ಈ ಹಿಂದೆ 4, 5 ಗಂಟೆ ನೀರು ಪೂರೈಸುತ್ತಿದ್ದ ಕಡೆಗಳಲ್ಲಿ ಇದೀಗ 3 ಗಂಟೆ ಮಾತ್ರ ನೀರು ಪೂರೈಸಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಉಮೇಶ್ ಎಂ. ತಿಳಿಸಿದರು.

ಮೇವಿಗೆ ಕೊರತೆ ಇಲ್ಲ:

‘ತಾಲ್ಲೂಕಿನಲ್ಲಿ ಮೇವಿಗೆ ಕೊರತೆ ಇಲ್ಲ, 21 ವಾರಕ್ಕೆ ಸಾಕಾಗುವಷ್ಟು ಮೇವು ಸಂಗ್ರಹ ಇದೆ. ಅಗತ್ಯ ಇದ್ದಾಗ ಮೇವು ಒದಗಿಸಲು ಆರು ಮಂದಿ ಮುಂದೆ ಬಂದಿದ್ದಾರೆ. ಬುಕ್ಕಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಮೇವು ಬೆಳೆಸಲಾಗಿದೆ’ ಎಂದು ತಹಶೀಲ್ದಾರ್‌ ಶ್ರುತಿ ಎಂ.ಎಂ.ತಿಳಿಸಿದರು.

ನೀರು ಒದಗಿಸಲು ದುಡ್ಡಿನ ಕೊರತೆ ಇಲ್ಲ. ತಹಶೀಲ್ದಾರರ ಪಿ.ಡಿ ಖಾತೆಯಲ್ಲಿ ₹65 ಲಕ್ಷ ಹಣ ಇದೆ. ಸದ್ಯ ಟ್ಯಾಂಕರ್‌ನಲ್ಲಿ ನೀರು ಪೂರೈಸುವ ಸ್ಥಿತಿ ಬಂದಿಲ್ಲ

-ಶ್ರುತಿ ಎಂ.ಎಂ. ತಹಶೀಲ್ದಾರ್‌

15ನೇ ಹಣಕಾಸು ಅನುದಾನದ ₹6 ಕೋಟಿಯ ಪೈಕಿ ₹3 ಕೋಟಿ ಬಿಡುಗಡೆಯಾಗಿದ್ದು ಅದರಲ್ಲಿ ಶೇ 25ರಷ್ಟನ್ನು ನೀರಿಗಾಗಿ ತೆಗೆದಿರಿಸಲಾಗಿದೆ

-ಉಮೇಶ್ ಎಂ. ಇಒ ಹೊಸಪೇಟೆ ತಾಲ್ಲೂಕು ಪಂಚಾಯಿತಿ

ಕಾಡುಪ್ರಾಣಿಗಳಿಗೂ ಸಂಕಟ

‘ದರೋಜಿ ಕರಡಿಧಾಮದಲ್ಲಿ 30ಕ್ಕೂ ಅಧಿಕ ಕೃತಕ ನೀರಿನ ಹೊಂಡಗಳನ್ನು ನಿರ್ಮಿಸಿ ಅವುಗಳಿಗೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್‌ ತಿಳಿಸಿದರು. ಬಿಸಿಲಿನ ಝಳ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ನೀರಿನ ಅಭಾವ ಹೆಚ್ಚುತ್ತಿದೆ. ಜನ ಜಾನುವಾರುಗಳು ಇನ್ನೂ ಮೂರು ತಿಂಗಳ ಕಾಲ ಇದೇ ಪರಿಸ್ಥಿತಿಯಲ್ಲಿ ಬದುಕುವ ಅನಿವಾರ್ಯತೆ ನೆಲೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.