
ಹೊಸಪೇಟೆ (ವಿಜಯನಗರ): ನಗರದ ಮ್ಯಾಸಕೇರಿ ನಿವಾಸಿಯೊಬ್ಬರು ರಾಷ್ಟ್ರೀಯ ಕುಟುಂಬ ನೆರವು ಯೋಜನೆ ಹಾಗೂ ನಿರ್ಗತಿಕ ವಿಧವಾ ವೇತನ ಪಿಂಚಣಿ ಯೋಜನೆಗೆ ಅರ್ಜಿ ಸಲ್ಲಿಸಿದ ಕೇವಲ ಒಂದು ತಾಸಿನಲ್ಲಿ ಮಂಜೂರಾತಿ ಅದೇಶ ಪತ್ರವನ್ನು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಅವರು ಬುಧವಾರ ಫಲಾನುಭವಿಗೆ ವಿತರಿಸಿದರು.
ಬಳಿಕ ಅವರು ಮಾತನಾಡಿ, ನಗರದ ಮ್ಯಾಸಕೇರಿ ನಿವಾಸಿ ಮರಡಿ ಶಾರದಮ್ಮ ಅವರ ಗಂಡ ಮರಡಿ ವೆಂಕಟೇಶ ಅ.13ರಂದು 45ನೇ ವಯಸ್ಸಿನಲ್ಲಿ ಸ್ವಾಭಾವಿಕವಾಗಿ ನಿಧನರಾಗಿದ್ದರು. ಅವರು ಅರ್ಜಿ ಸಲ್ಲಿಸಿದ ಒಂದು ತಾಸಿನಲ್ಲಿ ತಹಶೀಲ್ದಾರ್ ಎಂ.ಎಂ.ಶ್ರುತಿ ಅವರು ಮಂಜೂರಾತಿ ಆದೇಶ ಪತ್ರಗಳನ್ನು ಸಿದ್ದಪಡಿಸಿದ್ದಾರೆ ಎಂದರು.
ನೆರವು ಯೋಜನೆಯಡಿ ₹20 ಸಾವಿರ ಹಾಗೂ ಪಿಂಚಣಿ ಯೋಜನೆಯಡಿ ಮಾಸಿಕ ₹800 ನೀಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿಯೂ ವಿಧವಾ ವೇತನ ಸೇರಿದಂತೆ ರಾಷ್ಟ್ರೀಯ ಕುಟುಂಬ ನೆರವು ಯೋಜನೆ ತ್ವರಿತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಬೇಕು. ಮಧ್ಯವರ್ತಿಗಳನ್ನು ಅವಲಂಬಿಸದೇ ನೇರವಾಗಿ ಫಲಾನುಭವಿಗಳು ಆಯಾ ತಾಲ್ಲೂಕು ಕಚೇರಿ ಹಾಗೂ ತಹಶೀಲ್ದಾರರನ್ನು ಭೇಟಿ ಮಾಡಿದರೆ ಶೀಘ್ರ ಸೇವೆ ಸಿಗಲಿದೆ ಎಂದರು.
ಈ ವೇಳೆ ಎಡಿಸಿ ಇ.ಬಾಲಕೃಷ್ಣಪ್ಪ, ತಹಶೀಲ್ದಾರ್ ಎಂ.ಎಂ.ಶೃತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.