ಹೊಸಪೇಟೆ (ವಿಜಯನಗರ): ಕೇವಲ ಪದವಿಗಳಿಸುವುದೊಂದೇ ಮುಖ್ಯವಲ್ಲ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೌಶಲ ಬೆಳೆಸಿಕೊಳ್ಳುವುದು ಮುಖ್ಯ ಎಂದು ತುಮಕೂರಿನ ಡಿಬಿಸನ್ಸ್ ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನಲ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯ ಸಿಇಒ ಶಿವಾನಂದ ಡಿ.ವಿ. ಹೇಳಿದರು.
ಇಲ್ಲಿಗೆ ಪ್ರೌಢದೇವರಾಯ ಎಂಜಿನಿಯರಿಂಗ್ ಕಾಲೇಜ್‌ನಲ್ಲಿ (ಪಿಡಿಐಟಿ) ಸೋಮವಾರ ವಿದ್ಯುತ್ ವಿಭಾಗದ ವತಿಯಿಂದ ಐಕ್ಯೂಎಸಿಯ ಸಹಯೋಗದಲ್ಲಿ ‘ಎಲೆಕ್ಟ್ರಿಕಲ್ ಸ್ವಿಚ್‌ಗೇರ್‌ನ ಸುರಕ್ಷತೆ, ರಕ್ಷಣೆ ಮತ್ತು ಅನ್ವಯಿಕೆಗಳು’ ಎಂಬ ಕೌಶಲಾಭಿವೃದ್ಧಿ ಕಾರ್ಯಕ್ರಮದ ಐದು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಸ್ನಾತಕೋತ್ತರ ಪದವಿ ಹಾಗೂ ಎಂಜಿನಿಯರಿಂಗ್ ಡಾಕ್ಟರೇಟ್ ಗಳಿಸಿದ್ದರೂ ಇಂದಿನ ಎಲೆಕ್ಟ್ರಿಕಲ್ ಎಂಜಿನಿಯರ್‌ಗಳಿಗೆ ಮನೆಯಲ್ಲಿ ಕೆಟ್ಟುಹೋದ ಮೋಟರ್ ಅನ್ನು ಸರಿಪಡಿಸಲು ಬರುವುದಿಲ್ಲ. ಇಂತಹ ಎಂಜಿನಿಯರ್‌ಗಳು ಕೈಗಾರಿಕಾ ಉದ್ಯಮಗಳಲ್ಲಿ ಕೌಶಲದ ಕೊರತೆಯಿಂದ ಉದ್ಯೋಗಗಳಿಂದ ವಂಚಿತರಾಗುತ್ತಾರೆ. ಇದರಿಂದ ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕ್ಷೇತ್ರ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ಸರಿದೂಗಿಸಲು ಇಂತಹ ತರಬೇತಿಗಳು ಪಠ್ಯದಲ್ಲಿ ಸೇರ್ಪಡೆಯಾಗಬೇಕು’ ಎಂದರು.
ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿ ಬಸವೇಶ ಶೆಟ್ಟಿ ಎಸ್. ಮಾತನಾಡಿ, ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಕೌಶಲ ಅಭಿವೃದ್ಧಿಯನ್ನು ಹೊಂದಿದ್ದರೆ ಕೈಗಾರಿಕಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದರು.
ಕಾರ್ಯಕ್ರಮದ ಸಂಚಾಲಕ ಪ್ರೊ.ಮಧ್ವರಾಜ್ ಕೆ. ಮಾತನಾಡಿ, ‘ವಿದ್ಯುತ್ ಉತ್ಪಾದನೆ ಎಂಬುದು ಆಹಾರ ತಯಾರಿಕೆ ಇದ್ದಂತೆ, ಆಹಾರವನ್ನು ಅಗತ್ಯಕ್ಕಿಂತ ಹೆಚ್ಚಿಗೆ ತಯಾರಿಸಿದರೆ ಅದು ವ್ಯರ್ಥವಾಗುತ್ತದೆ. ಕಡಿಮೆ ತಯಾರಿಸಿದರೆ ಸಾಕಾಗುವುದಿಲ್ಲ, ವಿದ್ಯುತ್‍ನ ಉತ್ಪಾದನೆ ಮತ್ತು ಬೇಡಿಕೆಗಳನ್ನು ಏಕ ಕಾಲದಲ್ಲಿ ಸರಿದೂಗಿಸಬೇಕಾಗುತ್ತದೆ’ ಎಂದರು.
ಪಿಡಿಐಟಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ಮಂಜುನಾಥ್ ಮಾತನಾಡಿ, ಪ್ರಾಂಶುಪಾಲ ಪ್ರೊ.ಯು.ಎಂ.ರೋಹಿತ್, ವಿದ್ಯುತ್ ವಿಭಾಗದ ಮುಖ್ಯಸ್ಥ ಪ್ರೊ.ಎಸ್ ಪ್ರಕಾಶ್ ಮತನಾಡಿದರು.
ಉಪಪ್ರಾಂಶುಪಾಲರಾದ ಪ್ರೊ.ಪಾರ್ವತಿ ಕಡ್ಲಿ, ಪ್ರೊ.ಸುಮಾ ಜಿ.ಸಿ, ಡೀನ್ ಪ್ರೊ.ಮಂಜುಳಾ ಎಸ್.ಡಿ. ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.