ADVERTISEMENT

‘ಸರ್ಕಾರದ ನೀತಿಗಳಿಂದ ಕಾರ್ಮಿಕರ ಬದುಕು ಹಾಳು’

ವಿವಿಧ ಸಂಘಟನೆಗಳಿಂದ ವಿಶ್ವ ಕಾರ್ಮಿಕರ ದಿನ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2022, 12:19 IST
Last Updated 1 ಮೇ 2022, 12:19 IST
ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಎಐಯುಟಿಯುಸಿ ಕಾರ್ಯಕರ್ತೆಯರು ಭಾನುವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು
ವಿಶ್ವ ಕಾರ್ಮಿಕರ ದಿನದ ಪ್ರಯುಕ್ತ ಎಐಯುಟಿಯುಸಿ ಕಾರ್ಯಕರ್ತೆಯರು ಭಾನುವಾರ ಹೊಸಪೇಟೆ ತಹಶೀಲ್ದಾರ್‌ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ವಿವಿಧ ಸಂಘಟನೆಗಳಿಂದ ಭಾನುವಾರ ನಗರದಲ್ಲಿ ಕಾರ್ಮಿಕರ ದಿನ ಆಚರಿಸಲಾಯಿತು. ಅದರ ವಿವರ ಇಂತಿದೆ.

ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್:

ಸಂಘಟನೆಯ ಕಾರ್ಯಕರ್ತೆಯರು ನಗರದ ತಹಶೀಲ್ದಾರ್‌ ಕಚೇರಿ ಎದುರು ಸಾಂಕೇತಿಕ ಪ್ರತಿಭಟನೆ ನಡೆಸಿದರು. ಸರ್ಕಾರದ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಘೋಷಣೆಗಳನ್ನು ಕೂಗಿದರು.

ADVERTISEMENT

ಎಐಯುಟಿಯುಸಿ ರಾಜ್ಯ ಸಮಿತಿ ಸದಸ್ಯೆ ಎ.ಶಾಂತಾ ಮಾತನಾಡಿ, ‘ಲೇಬರ್ ಕೋಡ್ ಹೆಸರಿನಲ್ಲಿ ಕಾರ್ಮಿಕ ವರ್ಗದ ಹಕ್ಕುಗಳ ಮೇಲೆ ಕೇಂದ್ರ ಸರ್ಕಾರ ನೇರ ದಾಳಿ ನಡೆಸಿದೆ. ಈ ಲೇಬರ್ ಕೋಡ್‍ಗಳ ಪ್ರಕಾರ, ಕಾರ್ಮಿಕರು ಮುಷ್ಕರ ಮಾಡುವುದೇ ಅಪರಾಧ’ ಎಂದು ಹೇಳಿದರು.

ಕೇಂದ್ರ ಸರ್ಕಾರವು ಕಾರ್ಪೊರೇಟ್ ತೆರಿಗೆಗಳನ್ನು ಇಳಿಸಿದೆ. ಅವರ ಸಾಲಗಳನ್ನು ಮನ್ನಾ ಮಾಡಿದೆ. ರೈಲ್ವೆ, ವಿಮೆ, ಬ್ಯಾಂಕ್‌, ಸಾರಿಗೆ, ಬಿಎಸ್‍ಎನ್‍ಎಲ್, ವಿಮಾನ ನಿಲ್ದಾಣಗಳು, ರಸ್ತೆಗಳು, ಹೆದ್ದಾರಿಗಳು, ಇತ್ಯಾದಿ ರಾಷ್ಟ್ರೀಯ ಸ್ವತ್ತುಗಳನ್ನು ಇದೇ ಕಾರ್ಪೊರೇಟ್ ಕುಳಗಳಿಗೆ ಬಿಡಿಗಾಸಿಗೆ ಮಾರಾಟ ಮಾಡುತ್ತಿದೆ. ಒಟ್ಟಾರೆ ಕೇಂದ್ರ ಬಿಜೆಪಿ ಸರ್ಕಾರ ಕಾರ್ಮಿಕರ ಬದುಕನ್ನು ಹಾಳುಗೆಡವಿದೆ ಎಂದರು.

ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಮಂಜುಳಾ ಎಂ.ಎನ್, ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದಂತೆಯೇ ಇಂದಿನ ಬಿಜೆಪಿ ನೇತೃತ್ವದ ಎನ್‍ಡಿಎ ಸರ್ಕಾರವೂ ಸಹ ಜನವಿರೋಧಿ ಬಂಡವಾಳಷಾಹಿಪರ ನೀತಿಗಳನ್ನು ಜಾರಿಗೆ ತಂದಿದೆ ಎಂದರು. ಉರಕುಂದಮ್ಮ, ಲಕ್ಷ್ಮಿ ಇದ್ದರು.

ಸಿಐಟಿಯು:

ನಗರದ ಶ್ರಮಿಕ ಭವನದಲ್ಲಿ ಸಂಘಟನೆಯ ಜಿಲ್ಲಾ ಅಧ್ಯಕ್ಷ ಆರ್. ಭಾಸ್ಕರ್ ರೆಡ್ಡಿ ಧ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ಬಂದ ದಿನದಿಂದಲೂ ನಿರಂತರವಾಗಿ ಕಾರ್ಮಿಕರ ಮೇಲೆ ಶೋಷಣೆಗಳು ನಡೆಯುತ್ತಿವೆ. ಕಳೆದ ಎಂಟು ವರ್ಷಗಳ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮತ್ತಷ್ಟು ಹೆಚ್ಚಾಗಿದೆ ಎಂದರು.

ಕಾರ್ಯದರ್ಶಿ ಎಂ.ಗೋಪಾಲ, ಕೆ. ನಾಗರತ್ನಮ್ಮ, ಎನ್. ಯಲ್ಲಾಲಿಂಗ, ಜೆ. ಪ್ರಕಾಶ್, ಹೇಮಂತ ನಾಯ್ಕ, ಕರೆ ಹನುಮಂತ, ರಾಮಾಂಜಿನಿ, ಎಲ್.ಮಂಜುನಾಥ, ಬಿ.ಮಹೇಶ್, ಈ. ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.