
ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ‘ಪಟ್ಟಣದಲ್ಲಿ ಗುರುವಾರ ರಾತ್ರಿ ಬಂಗಾರಿ ಮಂಜುನಾಥ (28) ಎಂಬುವವರ ಕೊಲೆಗೆ ‘ದಾಯಾದಿ ಕಲಹ’ ಕಾರಣವೆಂಬುದು ಮೇಲ್ನೋಟಕ್ಕೆ ಕಾಣಿಸುತ್ತಿದೆ, ಈ ಸಂಬಂಧ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.
ಪಟ್ಟಣದ ಉಪ್ಪಾರ ಬಸಪ್ಪ, ಹನುಮಂತರಾಯ, ಬಂಗಾರಿ ನಾಗರಾಜ, ಬಂಗಾರಿ ಯಮನೂರಿ, ಬಂಗಾರಿ ಉದಯಕುಮಾರ್, ಅವಿನಾಶ ಬಂಧಿತರು ಎಂದು ಅವರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದವರಿಗೆ ತಿಳಿಸಿದರು.
‘ಆರ್ಥಿಕವಾಗಿ ಸದೃಢರಾಗಿದ್ದ ಮಂಜುನಾಥನ ಬಗ್ಗೆ ಆರೋಪಿಗಳು ಅಸೂಯೆ ಹೊಂದಿದ್ದರು. ಮೃತನ ಪತ್ನಿ ಸುಷ್ಮಾ ಅವರನ್ನು ಆರೋಪಿಗಳು ದೂರವಾಣಿಯಲ್ಲಿ ಅಶ್ಲೀಲವಾಗಿ ನಿಂದಿಸಿದ್ದರು ಮತ್ತು ಬ್ಯಾಲಹಾಳು ಗ್ರಾಮದಲ್ಲಿರುವ ಮೃತನ ಮನೆಯ ಬಳಿ ಹೋಗಿ ಗಲಾಟೆ ಮಾಡಿದ್ದರು. ಇದರಿಂದ ಸಿಟ್ಟಾಗಿದ್ದ ಮಂಜುನಾಥ ಅವರು, ಪಟ್ಟಣದ ಜೆಸ್ಕಾಂ ಕಚೇರಿ ಬಳಿ ಇರುವ ಮನೆಯಲ್ಲಿದ್ದ ಆರೋಪಿಗಳನ್ನು ಪ್ರಶ್ನಿಸಲು ಬಂದಿದ್ದರು. ಆಗ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿದರು. ತಪ್ಪಿಸಿಕೊಳ್ಳಲು ಯತ್ನಿಸಿದಾಗ ರಾಡು ಮತ್ತು ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾರೆ’ ಎಂದು ಮೃತನ ಸಹೋದರ ಬಿ.ಸಂದೀಪ್ ಪೊಲೀಸ್ ಠಾಣೆಯಲ್ಲಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಕೂಡ್ಲಿಗಿ ಡಿವೈಎಸ್‌ಪಿಯಿಂದ ತನಿಖೆ: ಶೀಘ್ರ ಸಮಗ್ರ ವರದಿ ನೀಡುವಂತೆ ಬೆರಳಚ್ಚು ತಜ್ಞನರಿಗೆ ಸೂಚನೆ ನೀಡಿರುವ ಎಸ್‌ಪಿ ಶ್ರೀಹರಿಬಾಬು, ತನಿಖೆಗೆ ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶಪ್ಪ ಅವರನ್ನು ನಿಯೋಜಿಸಿದ್ದಾರೆ.
ಕೊಲೆಯಾದ ಬಂಗಾರಿ ಮಂಜುನಾಥ ವಿರುದ್ಧ ಹೊಸಪೇಟೆಯ ನಗರ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದ್ದು, ತನಿಖೆ ನಡೆಯುತ್ತಿತ್ತು ಎಂದು ಎಸ್‌ಪಿ ಮಾಹಿತಿ ನೀಡಿದರು. ಸರ್ಕಲ್ ಇನ್ಸ್‍ಪೆಕ್ಟರ್ ವಿಕಾಸ್ ಲಮಾಣಿ, ಪಿಎಸ್‍ಐ ಬಸವರಾಜ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.