ADVERTISEMENT

ಅಂಜುಮನ್‌ನಲ್ಲಿ ಹೃದಯಸ್ಪರ್ಶಿ ಗುರುವಂದನೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 3:50 IST
Last Updated 11 ಫೆಬ್ರುವರಿ 2012, 3:50 IST

ಸಿಂದಗಿ: ಪಟ್ಟಣದ ಅಂಜುಮನ್- ಎ-ಇಸ್ಲಾಂ ಶಿಕ್ಷಣ ಸಂಸ್ಥೆಯ ಪ್ರೌಢಶಾಲಾ ವಿಭಾಗದಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಸಹ- ಶಿಕ್ಷಕರಾದ ಎಚ್.ಎಚ್. ತಾಶಾಗೋಳ, ಎಂ.ಜಿ. ಕಟ್ಟಿ, ಆರ್.ಜಿ.ಕಾಚೂರ ಹಾಗೂ ಎಂ.ಎಸ್. ಸಿಕ್ಕಲಗಾರ (ಸಿಪಾಯಿ) ಇವರಿಗೆ ಸಮಸ್ತ ಶಿಕ್ಷಕ-ವಿದ್ಯಾರ್ಥಿಗಳಿಂದ ಹೃದಯ ಸ್ಪರ್ಶಿ ಗುರುವಂದನೆ ಸಮಾರಂಭ ಗುರುವಾರ ನಡೆಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ, ಅಧ್ಯಾಪಕ ವೃಂದ ನಿವೃತ್ತರ ಸೇವಾ ಕಾರ್ಯ ವೈಖರಿಯನ್ನು ಮುಕ್ತ ಕಂಠದಿಂದ ಗುಣಗಾನ ಮಾಡಿದರು.

ಇದೇ ಸಂದರ್ಭದಲ್ಲಿ ವಿಜಾಪುರ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಬಿ.ಎನ್.ಹಕೀಮ ಅವರನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಪಾಟೀಲ ಗಣಿಹಾರ ಸನ್ಮಾನಿಸಿದರು.
ಸನ್ಮಾನಕ್ಕೆ ಉತ್ತರವಾಗಿ ಅಧ್ಯಾಪಕರು `ಕರ್ತವ್ಯವೇ ದೇವರು~ ಎಂದು ಭಾವಿಸಿ ತೃಪ್ತಿದಾಯಕ ಸೇವೆ ಸಲ್ಲಿಸಿದ್ದಾಗಿ ಮಾತನಾಡಿದರು.

ಉಪನಿರ್ದೇಶಕ ಬಿ.ಎನ್. ಹಕೀಮ್ ಮಾತನಾಡಿ, ಇಂದಿನ ಯುವ ಪೀಳಿಗೆಯಲ್ಲಿ ಶಿಸ್ತಿನ ಕೊರತೆ ಎದ್ದು ಕಾಣುತ್ತಲಿದೆ. ಶಿಸ್ತು ಜೀವನದ ಸಫಲತೆಗೆ ಕಾರಣವಾಗುತ್ತದೆ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅಂಜುಮನ್-ಎ-ಇಸ್ಲಾಂ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಮಾತನಾಡಿ, ಮೌಲ್ಯಗಳು ಕುಸಿಯುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮೌಲ್ಯಗಳ ಪುನರ್ ಸ್ಥಾಪನೆಗಾಗಿ ಯುವ ಪೀಳಿಗೆ ಮುಂದಾಗಬೇಕಿದೆ ಎಂದು ಸಲಹೆ ನೀಡಿದರು.

ಉಪನ್ಯಾಸಕ ಮಹಾದೇವ ರೆಬಿನಾಳ ಉಪನ್ಯಾಸ ನೀಡುತ್ತ ವ್ಯಕ್ತಿ ಪೂಜೆ ಬೇಡ, ವ್ಯಕ್ತಿತ್ವ ಆರಾಧನೆ ಅಗತ್ಯ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬಿರಾದಾರ ವಿದ್ಯಾರ್ಥಿಗಳು ಸದ್ವಿಚಾರ, ಉತ್ತಮ ಹವ್ಯಾಸ ಮೈಗೂಡಿಸಿಕೊಳ್ಳ ಬೇಕು ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಅಂಜುಮನ್-ಎ-ಇಸ್ಲಾಂ ಅಧ್ಯಕ್ಷ ಎ.ಎ. ದುಧನಿ, ಆಡಳಿತ ಮಂಡಳಿ ಸದಸ್ಯರಾದ ಎ.ಐ. ಮುಲ್ಲಾ, ಬಸೀರ್ ನಾಟೀಕಾರ, ಪ್ರಾಚಾರ್ಯರಾದ ಎಂ.ಡಿ. ಬಳಗಾನೂರ, ಝಡ್.ಐ.ಅಂಗಡಿ, ಹಾಫೀಜ್ ಗಿರಿಗಾಂವ ಹಾಗೂ ಮಹಿಬೂಬ ಹಸರಗುಂಡಗಿ, ವಿ.ಬಿ. ಮೂಲಿಮನಿ, ವಿದ್ಯಾರ್ಥಿ ಪ್ರತಿನಿಧಿ ಗಳಾದ ಎಂ.ಎಂ. ಮಲಘಾಣ, ಎನ್.ಎಲ್. ಗುಂದಗಿ ಉಪಸ್ಥಿತರಿದ್ದರು.

ಉಪಪ್ರಾಚಾರ್ಯ ಆರ್.ಎ. ಹೊಸಗೌಡರ ಸ್ವಾಗತಿಸಿದರು. ಪ್ರಭುಲಿಂಗ ಲೋಣಿ ನಿರೂಪಿಸಿದರು. ಎಂ.ಎಚ್. ಪಾನಫರೋಷ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.