ADVERTISEMENT

ಅಂತಿಮ ಹಂತಕ್ಕೆ ತಲುಪಿದ ಸ್ಮಾರಕ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:20 IST
Last Updated 18 ಫೆಬ್ರುವರಿ 2012, 6:20 IST

ಆಲಮಟ್ಟಿ: `ಕರ್ನಾಟಕ ಗಾಂಧಿ~ ಎಂದೇ ಖ್ಯಾತರಾಗಿದ್ದ ಹರ್ಡೇಕರ ಮಂಜಪ್ಪನವರ 126ನೇ ಜನ್ಮ ದಿನಾಚರಣೆ ತಾ.18ರಂದು ನಡೆಯಲಿದ್ದು, ಇದರ ಅಂಗವಾಗಿ ಇಲ್ಲಿಯ ಎಮ್.ಎಚ್.ಎಮ್. ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.

ಆಲಮಟ್ಟಿಯನ್ನು ತಮ್ಮ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ರಾಜ್ಯಾದ್ಯಂತ ಗಾಂಧೀಜಿಯವರ ತತ್ವ- ಸಿದ್ಧಾಂತಗಳನ್ನು ಪಸರಿಸಿದರು. ಬ್ರಹ್ಮಚಾರಿಯಾಗಿ ಬುದುಕು ಸಾಗಿಸಿ, ಇಲ್ಲಿಯೇ ಕಾಯಕ ತತ್ವದ ತಳಹದಿಯಲ್ಲಿ ಶಾಲೆ ಸ್ಥಾಪಿಸಿದ ಹರ್ಡೇಕರ ಮಂಜಪ್ಪನವರು ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬನವಾಸಿಯಲ್ಲಿ (ಫೆ.18, 1886).

ಸುಮಾರು 80ಕ್ಕೂ ಅಧಿಕ ಪುಸ್ತಕ ರಚಿಸಿರುವ ಮಂಜಪ್ಪನವರು ಆ ಕಾಲದಲ್ಲಿಯೇ ಶರಣ ಸಂದೇಶ, ದೇಶ ಪ್ರೇಮ ಸಾರುವ 10ಕ್ಕೂ ಹೆಚ್ಚು ಪತ್ರಿಕೆಗಳನ್ನು ಪ್ರಾರಂಭಿಸಿದವರು. ಕಾಯಕಯೋಗಿ ಮಂಜಪ್ಪ 1947ರ ಜನವರಿ 3 ರಂದು ಆಲಮಟ್ಟಿಯಲ್ಲಿ ಲಿಂಗೈಕ್ಯರಾದರು.

ಹರ್ಡೇಕರ ಮಂಜಪ್ಪನವರ ಸಮಾಧಿಯು ಕೃಷ್ಣಾ ನದಿಯಲ್ಲಿ ಮುಳುಗಡೆಯಾಗಿತ್ತು. ನಂತರ ಅಲ್ಲಿಂದ 1997 ರಲ್ಲಿ ಸಮಾಧಿಯನ್ನು ಇಲ್ಲಿಯ ಎಮ್.ಎಚ್.ಎಮ್. ಕಾಲೇಜ್ ಬಳಿ ಸ್ಥಳಾಂತರಿಸಲಾಯಿತು. ಅಲ್ಲಿ ಸ್ಮಾರಕ ನಿರ್ಮಿಸಬೇಕೆನ್ನುವುದು ಎಲ್ಲರ ಆಶಯವಾಗಿತ್ತು.

ಆ ಆಶಯಕ್ಕೆ ಪೂರಕವೆಂಬಂತೆ ವಿವಿಧ ಮಠಾಧೀಶರು ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ, ವಿಜಾಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರನ್ನು ಒತ್ತಾಯಿಸಿದ್ದರ ಫಲವಾಗಿ ರಾಜ್ಯ ಸರಕಾರ ಒಂದು ಕೋಟಿ ರೂ ಬಿಡುಗಡೆ ಮಾಡಿತ್ತು. ಈಗ ಮತ್ತೆ  50 ಲಕ್ಷ ರೂ.ಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಇತ್ತೀಚಿಗೆ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ್ದ ಡಾ.ಎಸ್.ಎಮ್. ಜಾಮದಾರ ಹೇಳಿದ್ದಾರೆ.

ಪ್ರಸ್ತುತ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದಿಂದ ಕಳೆದ ಮೇ 2011ರಲ್ಲಿ ಸುಮಾರು ಒಂದು ಕೋಟಿ ರೂ ವೆಚ್ಚದಲ್ಲಿ ಪ್ರಾರಂಭಗೊಂಡ ಸ್ಮಾರಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಅಂತಿಮ ಹಂತಕ್ಕೆ ತಲುಪಿದೆ.
ಈ ಸ್ಮಾರಕವನ್ನು ಜಪಾನಿ ಶೈಲಿಯಲ್ಲಿ ಅಷ್ಟಕೋನಾಕೃತಿಯಲ್ಲಿ ನಿರ್ಮಿಸಲಾಗುತ್ತಿದೆ.
 
ಸ್ಮಾರಕ ಮೂರು ಹಂತ ಗಳನ್ನುಹೊಂದಿದ್ದು, ಮೊದಲ ಅಂತಸ್ತು ಅಷ್ಟಕೋನಾಕೃತಿ ಆಕಾರದಲ್ಲಿ, ಎರಡನೇ ಅಂತಸ್ತು ಚತುರ್ಥ ಕೋನಾಕೃತಿಯಲ್ಲಿ ಅದರ ಮೇಲೆ ಅರ್ಧ ಗೋಲಾಕೃತಿ ಗುಮ್ಮಟ ನಿರ್ಮಾಣ ಮಾಡಲಾಗುತ್ತದೆ. ಈಗಾಗಲೇ ಎರಡು ಅಂತಸ್ತಿನವರೆಗೆ ನಿರ್ಮಿಸಲಾಗಿದ್ದು, ಅಲ್ಲಿಂದ ಮುಂದೆ ಎರಡು ಅಂತಸ್ತಿನವರೆಗೆ ಚತುರ್ಭುಜ ಆಕಾರದಲ್ಲಿ ನಿರ್ಮಿಸುವ ಕಾರ್ಯ ಪ್ರಾರಂಭಿಸಲಾಗಿದೆ. ನಂತರ ಅದರ ಮೇಲೆ ವೃತ್ತಾಕಾರದ ಗುಮ್ಮಟ ನಿರ್ಮಿಸಲಾಗುತ್ತದೆ.

ಒಟ್ಟು 25 ಅಡಿ ಎತ್ತರದ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಸ್ಮಾರಕದ ಉತ್ತರ ಭಾಗದಲ್ಲಿ ಒಂದು ದೊಡ್ಡ ಸಭಾಭವನ ನಿರ್ಮಿಸಲಾದೆ. ಈ ಸಭಾಭವನದಲ್ಲಿ ಪ್ರಾರ್ಥನೆ, ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮಗಳು ನಡೆಸಲು ಉದ್ದೇಶಿಸಲಾಗಿದೆ. ಸ್ಮಾರಕದ ಸುತ್ತಲೂ ಉದ್ಯಾನವನ ಸಹ ನಿರ್ಮಿಸಲು ಉದ್ದೇಶಿಸಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.