ADVERTISEMENT

ಅನಾಥ ಬಸ್ ತಂಗುದಾಣಗಳು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2011, 5:35 IST
Last Updated 8 ಆಗಸ್ಟ್ 2011, 5:35 IST
ಅನಾಥ ಬಸ್ ತಂಗುದಾಣಗಳು
ಅನಾಥ ಬಸ್ ತಂಗುದಾಣಗಳು   

ವಿಜಾಪುರ: ಪ್ರಯಾಣಿಕರ ಅನುಕೂಲಕ್ಕಾಗಿ ನಗರದ ವಿವಿಧೆಡೆ ನಿರ್ಮಿಸಿರುವ ಬಸ್ ತಂಗುದಾಣಗಳು ಈಗ ಅಕ್ಷರಶಃ ಅನಾಥವಾಗಿವೆ. ನಿರ್ವಹಣೆ  ಕೊರತೆ, ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಪಾಳು ಬಿದ್ದಿವೆ. ಮಾನಸಿಕ ಅಸ್ವಸ್ಥರು, ಬಿಡಾಡಿ ದನ-ಹಂದಿಗಳ ಆಶ್ರಯ ತಾಣಗಳಾಗಿಯೂ ಮಾರ್ಪಟ್ಟಿವೆ.

ವಿಜಾಪುರದ ರೈಲ್ವೆ ನಿಲ್ದಾಣದಿಂದ ಗಾಂಧಿ ಚೌಕದವರೆಗೆ ಆರು ಸ್ಥಳಗಳಲ್ಲಿ ಪ್ರಯಾಣಿಕರ ತಂಗುದಾಣಗಳಿವೆ. ಇವೂ ಸೇರಿದಂತೆ ನಗರದ ವಿವಿಧೆಡೆ ಇಂಥ ತಂಗುದಾಣ ನಿರ್ಮಿಸಲಾಗಿದೆ. ಕೆಲವೆಡೆ ವಿಜಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಇನ್ನು ಕೆಲವೆಡೆ ಶಾಸಕರು-ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಲ್ಲಿ ಇವುಗಳನ್ನು ನಿರ್ಮಿಸಲಾಗಿದೆ. ಆದರೆ, ಅವುಗಳ ನಿರ್ವಹಣೆಯೇ ಇಲ್ಲ. ಹೀಗಾಗಿ ಅವೆಲ್ಲ ಹಾಳಾಗುತ್ತಿವೆ.

ಗಾಂಧಿಚೌಕ್ ಪೊಲೀಸ್ ಠಾಣೆಯ ಪಕ್ಕ, ಬಿಎಸ್‌ಎನ್‌ಎಲ್ ಕಚೇರಿ, ಜಲನಗರ ಸೇರಿದಂತೆ ಕೆಲವೇ ಕೆಲವು ಬಸ್ ತಂಗುದಾಣಗಳನ್ನು ಪ್ರಯಾಣಿಕರು ಉಪಯೋಗಿಸುತ್ತಿದ್ದಾರೆ. ಆದರೆ, ಅಲ್ಲಿ ಶುಚಿತ್ವ ಎಂಬುದು ಇರುವುದೇ ಇಲ್ಲ ಎಂಬುದು ಅವರೆಲ್ಲರ ದೂರು.

ವಿಜಾಪುರ ರೈಲ್ವೆ ನಿಲ್ದಾಣದ ಪಕ್ಕದಲ್ಲಿ ಒಂದು ಬಸ್ ತಂಗುದಾಣ ನಿರ್ಮಿಸಲಾಗಿದೆ. `ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಟಿ ಬಸ್ ಸ್ಟ್ಯಾಂಡ್~ ಎಂದು ಅದಕ್ಕೆ ಫಲಕ ಹಾಕಲಾಗಿದೆ. ತಗಡಿನ ಛಾವಣಿ ಹೊರತು ಪಡಿಸಿದರೆ ಅಲ್ಲೇನೂ ಇಲ್ಲ!

`ಇಲ್ಲಿ ಹಾಕಿದ್ದ ಕಾಂಕ್ರಿಟ್ ಕಟ್ಟೆ ಕಿತ್ತು ಹೋಗಿದೆ. ಅದರ ಸುತ್ತಲೂ ಕೊಳಚೆ ಇರುವುದರಿಂದ ಸಹಜವಾಗಿಯೇ ಅಲ್ಲಿ ಸದಾ ಹಂದಿಗಳು ಬಿಡಾರು ಹೂಡಿರುತ್ತವೆ. ಜನ ಮೂತ್ರವಿಸರ್ಜನೆ ಮಾಡುತ್ತಿರುತ್ತಾರೆ. ಅಂಥದರಲ್ಲಿಯೇ ಮೂಗುಮುಚ್ಚಿಕೊಂಡು ಬಸ್‌ಗಾಗಿ ಕಾಯುತ್ತ ನಿಂತರೆ ಮುಗಿಯಿತು. ಅಲ್ಲೇ ನಿಲ್ಲಬೇಕಾದ ಸ್ಥಿತಿ. ಏಕೆಂದರೆ ಅಲ್ಲಿಗೆ ಬಸ್‌ಗಳೇ ಬರುವುದಿಲ್ಲ~ ಎಂಬುದು ಪ್ರಯಾಣಿಕ ವೆಂಕಟೇಶ ಭೈರಾಮಡಗಿ ಅವರ ದೂರು.

`ಬಸ್ ತಂಗುದಾಣ ಇದೆ. ಅದರಲ್ಲಿ ಪ್ರಯಾಣಿಕರು ನಿಂತು ಬಸ್‌ಗಾಗಿ ಕಾಯುತ್ತಿರುತ್ತಾರೆ. ಅಲ್ಲಿಗೆ ಹೋಗಿ ಪ್ರಯಾಣಿಕರನ್ನು ಕರೆತರಬೇಕು ಎಂಬ ದೊಡ್ಡ ಮನಸ್ಸನ್ನು ನಗರ ಸಾರಿಗೆ ಬಸ್‌ಗಳವರು ಮಾಡುವುದಿಲ್ಲ. ನಗರ ಸಾರಿಗೆ ಬಸ್‌ಗಳವರು ಬಸ್‌ಗಳನ್ನು ಎಲ್ಲಿ ನಿಲ್ಲಿಸುತ್ತಾರೆ ಎಂಬುದೇ ಗೊತ್ತಾಗುವುದಿಲ್ಲ. ಹೀಗಾಗಿ ತಂಗುದಾಣಗಳಲ್ಲಿ ನಿಂತು ಬಸ್ ತಪ್ಪಿಸಿಕೊಳ್ಳುವುದಕ್ಕಿಂತ ರಸ್ತೆಯ ಬದಿಗೇ ನಿಲ್ಲುತ್ತೇವೆ~ ಎನ್ನುತ್ತಾರೆ ಸುಧಾಕರ ಬಿರಾದಾರ ಮತ್ತಿತರರು.

`ನಮಗೆ ಆಟೊ ರಿಕ್ಷಾಗಳವರೇ ದೊಡ್ಡ ಸವಾಲು. ರಸ್ತೆಯಲ್ಲಿಯೇ ತಮ್ಮ ವಾಹನ ನಿಲ್ಲಿಸಿಬಿಡುತ್ತಾರೆ.  ಪ್ರಯಾಣಿಕರನ್ನು ತುಂಬಿಸಿಕೊಳ್ಳಲಿಕ್ಕಾಗಿ ಬಸ್ ತಂಗುದಾಣಗಳಲ್ಲಿಯೇ ನಿಂತಿರುತ್ತಾರೆ. ನಮ್ಮ ಬಸ್ ನಿಲುಗಡೆಗೆ ಅಲ್ಲಿ ಸ್ಥಳಾವಕಾಶವೇ ಇಲ್ಲದಂತೆ ಮಾಡಿರುತ್ತಾರೆ. ಕೇಳಿದರೆ ಜಗಳಕ್ಕೆ ಬರುತ್ತಾರೆ~ ಎಂದು ನಗರ ಸಾರಿಗೆ ಬಸ್‌ನ ಚಾಲಕರೊಬ್ಬರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಬಸ್ ತಂಗುದಾಣದ ಸ್ಥಿತಿ ಇದಾದರೆ ಇನ್ನು ಜಾಹೀರಾತು ಫಲಕಗಳ ಹಾವಳಿ ಇನ್ನೊಂದು. ಹೀಗೆ ಪಾಳು ಬಿದ್ದ ಬಸ್‌ಸೆಲ್ಟರ್‌ಗಳ ಮೇಲೆ ಜಾಹೀರಾತು ಫಲಕಗಳು ರಾರಾಜಿಸುತ್ತಿವೆ.

ಜಾಹೀರಾತು ಪ್ರದರ್ಶಕರಿಂದ ತೆರಿಗೆ ಪಡೆಯುವ ನಗರಸಭೆಯವರು ಆ ಸ್ಥಳವನ್ನು ಸ್ವಚ್ಛವಾಗಿ ಇಡುವ ಬಗ್ಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾಮಾನ್ಯ ಪ್ರಯಾಣಿಕರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.