ADVERTISEMENT

ಆಡಿನ ಬದಲು ಮರಿ ವಿತರಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 5:10 IST
Last Updated 21 ಮಾರ್ಚ್ 2012, 5:10 IST

ಬಸವನಬಾಗೇವಾಡಿ: ವಿಜಾಪುರದ ಕೃಷಿ ವಿಶ್ವವಿದ್ಯಾಲಯವು ಭೂಚೇತನ ಯೋಜನೆ ಅಡಿಯಲ್ಲಿ ಸ್ಥಳೀಯ ಎಪಿಎಂಸಿ ಆವರಣದಲ್ಲಿ ಸೋಮವಾರ ಆಡುಗಳನ್ನು ವಿತರಣೆ ಮಾಡುವುದರ ಬದಲಿಗೆ ಕಡಿಮೆ ಬೆಲೆಯ ಮರಿಗಳನ್ನು ವಿತರಣೆ ಮಾಡಿದ್ದಾರೆ ಎಂದು ಆರೋ ಪಿಸಿ ತಾಲ್ಲೂಕಿನ ಮುಳವಾಡ ಮತ್ತು ತಳೆವಾಡ  ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು.

ವಿಜಾಪುರದ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ಭೂಚೇತನ ಯೋಜನೆಯಲ್ಲಿ ಆಡುಗಳನ್ನು ವಿತರಣೆ ಮಾಡಲಾಗುವುದು ಎಂದು ತಿಳಿಸಲಾಗಿತ್ತು. ಅದರಂತೆ ಮುಳವಾಡ ಮತ್ತು ತಳೆವಾಡದ ಹಾಗೂ ಇತರ ಗ್ರಾಮಗಳ ಸುಮಾರು 300 ಫಲಾನುಭವಿಗಳು ಆಗಮಿಸಿದ್ದರು.
 
ಆದರೆ 4500 ಮೌಲ್ಯದ ಆಡುಗಳನ್ನು ವಿತರಣೆ ಮಾಡುವ ಬದಲಿಗೆ ಕಡಿಮೆ ಬೆಲೆಯ ಆಡಿನ ಮರಿಗಳನ್ನು ವಿತರಿಸಲಾಗಿದೆ ಎಂದು ಫಲಾನುಭವಿ ರೈತರು ಆಕ್ರೋಶಗೊಂಡು  ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ಚಂದ್ರಶೇಖರ ಐಹೋಳಿ, ಭೂಚೇತನ ಯೋಜನೆ ಅಡಿಯಲ್ಲಿ ತೋಗರಿ ಬೆಳೆಗೆ ಬೀಜ ಮತ್ತು ಗೊಬ್ಬರ ವಿತರಣೆ ಮಾಡಬೇಕಾಗಿತ್ತು. ಅದರೆ ಬರಗಾಲ ಬಿದ್ದ ಕಾರಣ 4500 ಬೆಲೆಯ ಆಡುಗಳ ವಿತರಣೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಇಂದು ಕಡಿಮೆ ಬೆಲೆಯ ಆಡಿನ ಮರಿಗಳನ್ನು ವಿತರಣೆ ಮಾಡುವ ಮೂಲಕ ರೈತರಿಗೆ ಮೋಸ ಮಾಡಲಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಪರಸಪ್ಪ ಮಾದರ, ಬಾಷಾಸಾಬ್, ಸೈಯ್ಯದ್, ಯಂಕಣ್ಣ ಸೂಳಿಬಾವಿ, ಗೂಳಪ್ಪ ಬೆಲ್ಲದ, ಬಸಪ್ಪ ಐಹೋಳಿ, ಗಂಗಾಧರ ಹಂಚಿನಾಳ, ಅಡಿವೆಪ್ಪ ಬೀಳಗಿ, ಚಂದ್ರಶೇಖರ ಮಂಟೂರ, ಬಾಬು ಕಳಸಗೊಂಡ, ಬಾಬು ಚವ್ಹಾಣ, ಸುರೇಶ ಐಹೋಳಿ ಮುಂತಾದವರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.