ADVERTISEMENT

ಆರೋಗ್ಯ ಯೋಜನೆ: ಜಾಗೃತಿ ಅವಶ್ಯ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 5:45 IST
Last Updated 23 ಸೆಪ್ಟೆಂಬರ್ 2011, 5:45 IST

ಮುದ್ದೇಬಿಹಾಳ: ಸರ್ಕಾರ ಗ್ರಾಮೀಣ ಪ್ರದೇಶದ ಜನತೆಯ ಆರೋಗ್ಯವರ್ಧನೆಗೆಂದು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು ಎಂದು ತಂಗಡಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮನೋಜ ಗಿಡಗಂಟಿ ಹೇಳಿದರು.

ಅವರು ಸೋಮವಾರ ಕೇಂದ್ರದಲ್ಲಿ ನಡೆದ ಸಮುದಾಯ ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರದ ಯೋಜನೆಗಳಾದ ಬಡವರಿಗೆ ಹೆರಿಗೆ ಆದರೆ ಮಡಿಲು ಕಿಟ್ ವಿತರಣೆ, ಪ್ರಸೂತಿ ಆರೈಕೆಗೆಂದು ಮಹಿಳೆಯರಿಗೆ ಹೆರಿಗೆಗೆ ಮೊದಲು ರೂ. 1000, ನಂತರ ರೂ.1000 ಚೆಕ್ ನೀಡುವುದು,  ಜನನಿ ಸುರಕ್ಷಾ ಯೋಜನೆಯಡಿ, ಮನೆಯಲ್ಲಿ ಹೆರಿಗೆ ಆದರೆ ರೂ.
 
500, ಆಸ್ಪತ್ರೆಯಲ್ಲಿ ಹೆರಿಗೆ ಆದರೆ ರೂ. 700, ಸಿಜೇರಿಯನ್ ಆದರೆ ರೂ. 1500 ಹಣ ನೀಡಲಾಗುತ್ತಿದೆ. ಇದರೊಂದಿಗೆ ಸ್ಥಳೀಯವಾಗಿ  ಆಶಾ ಕಾರ್ಯಕರ್ತೆಯರ ನೇಮಕ ಮಾಡಿ ಸಮುದಾಯದ ಆರೋಗ್ಯ ಸುಧಾರಣೆಗೆ ಸರ್ಕಾರ ಶಕ್ತಿ ಮೀರಿ ಕೆಲಸ ಮಾಡುತ್ತಿದೆ, ಈ ಎಲ್ಲ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ಜನತೆಗೆ ಮಾಹಿತಿ ನೀಡಿದರೆ ಸರ್ಕಾರದ ಪ್ರಯತ್ನ ಯಶಸ್ಸು ಕಾಣುತ್ತದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ ಪಟ್ಟಣಶೆಟ್ಟಿ, ಈ ವರ್ಷದ ಘೋಷಣೆಯಂತೆ `ಯಾವುದೇ ಮಗು ಏಳು ಮಾರಕ ರೋಗಗಳ ಲಸಿಕೆಯಿಂದ ವಂಚಿತವಾಗಬಾರದು~ ಸಣ್ಣ ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ರೋಗಮುಕ್ತ ಸಮಾಜ ನಿರ್ಮಿಸುವಂತೆ ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆ ಹಾಗೂ ಸಾಂಕ್ರಾಮಿಕ ರೋಗ ನಿಯಂತ್ರಣ ಕುರಿತು ಎಂ.ಎಸ್. ಗೌಡರ ಮಾತನಾಡಿದರು.  ಶಿಕ್ಷಕ ಕೆ.ಬಿ. ಕೊಂಗಲ ಮಾತನಾಡಿದರು. ವೇದಿಕೆಯಲ್ಲಿ  ಗ್ರಾ.ಪಂ. ಅಧ್ಯಕ್ಷ ಸಂಗಪ್ಪ ಹಗರಿ, ಉಪಾಧ್ಯಕ್ಷೆ ಶಾರದಾ ರೇವಣೆಪ್ಪ ವಾಲಿಕಾರ, ಡಾ.ಆರ್.ಕೆ. ರಜಪೂತ, ಗ್ರಾ.ಪಂ. ಸದಸ್ಯರು, ಅಂಗನವಾಡಿ, ಆಶಾ, ಸ್ತ್ರೀಶಕ್ತಿ ಸಂಘದ ಕಾರ್ಯಕರ್ತೆಯರು  ಉಪಸ್ಥಿತರಿದ್ದರು.
ಡಿ.ಐ.ಮೈತ್ರಿ ಸ್ವಾಗತಿಸಿದರು. ಎಂ.ಎಸ್. ಗೌಡರ ನಿರೂಪಿಸಿದರು. ಎ.ಪಿ.ಶಾಸ್ತ್ರಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.