ADVERTISEMENT

ಆಲಮಟ್ಟಿಯಲ್ಲಿ ಗುತ್ತಿಗೆದಾರರ ಧರಣಿ ಆರಂಭ

​ಪ್ರಜಾವಾಣಿ ವಾರ್ತೆ
Published 27 ಮೇ 2017, 9:10 IST
Last Updated 27 ಮೇ 2017, 9:10 IST

ಆಲಮಟ್ಟಿ(ನಿಡಗುಂದಿ): ಕಾಲುವೆಗಳ ದುರಸ್ತಿಯ ಕ್ಲೋಸರ್ ಕಾಮಗಾರಿಯನ್ನು ಇ–ಪ್ರೊಕ್ಯೂರ್‌ಮೆಂಟ್‌ ಟೆಂಡರ್ ಕರೆಯದೇ ಮ್ಯಾನುವಲ್‌ ಟೆಂಡರ್ ಕರೆಯಬೇಕು, ವಿವಿಧ ಕಾಮಗಾರಿ ಗಳನ್ನು ಒಟ್ಟುಗೂಡಿಸುವ ಪ್ಯಾಕೇಜ್‌ ಟೆಂಡರ್‌ನ್ನು ಕೈಬಿಡಬೇಕೆಂದು ಆಗ್ರಹಿಸಿ ಆಲಮಟ್ಟಿ ಗುತ್ತಿಗೆದಾರರ ಸಂಘದ ಸದಸ್ಯರು ಗುರುವಾರದಿಂದ ಇಲ್ಲಿನ ಮುಖ್ಯ ಎಂಜಿನಿಯರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ಆರಂಭಿಸಿದರು.

ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಆಲಮಟ್ಟಿಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ಗುತ್ತಿಗೆದಾರರು ನಡೆಸಿದರು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಗೋಪಾಲ ವಡ್ಡರ ಮಾತನಾಡಿ, ಕೆಬಿಜೆಎನ್ಎಲ್‌ ಅಧಿಕಾರಿಗಳು ತಮಗೆ ಬೇಕಾದ ಗುತ್ತಿಗೆದಾರರಿಗೆ ಅನುಕೂಲ ವಾಗುವಂತೆ ಕಾಮಗಾರಿ ಗಳಿಗೆ ಕರೆಯುತ್ತಿರುವ ಟೆಂಡರ್‌ಗಳಲ್ಲಿ ಅನಗತ್ಯ ಷರತ್ತುಗಳನ್ನು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರತಿ ಬೇಸಿಗೆಯಲ್ಲಿ ನಡೆಸುವ ಕಾಲುವೆಗಳ ದುರಸ್ತಿಯ ಕ್ಲೋಸರ್ ಕಾಮಗಾರಿ ಇನ್ನೂ ಆರಂಭಿಸಿಲ್ಲ, ಭೀಕರ ಬರಗಾಲದಿಂದ ಅವಳಿ ಜಿಲ್ಲೆಯ ಜನ ಉದ್ಯೋಗವಿಲ್ಲದೇ ಪರದಾ ಡುವಂತಾಗಿದೆ, ಇನ್ನೂ ಕೆಬಿಜೆಎನ್‌ಎಲ್‌ 10 ಕೆಲಸಗಳನ್ನು ಸೇರಿಸಿ ಪ್ಯಾಕೇಜ್‌ ಗುತ್ತಿಗೆ ಆರಂಭಿಸಿರುವುದರಿಂದ ಬೇರೆ ರಾಜ್ಯ ಹಾಗೂ ಬೇರೆ ಜಿಲ್ಲೆಗಳಿಂದ ಬಂದಿರುವ ಗುತ್ತಿಗೆದಾರರು ಅತಿ ಕಡಿಮೆ ದರದಲ್ಲಿ ಗುತ್ತಿಗೆ ಪಡೆಯುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಇದರಿಂದ ಸ್ಥಳೀಯ ಗುತ್ತಿಗೆ ದಾರರಿಗೆ ಕೆಲಸವಿಲ್ಲವಾಗಿದೆ. ಅತಿ ಕಡಿಮೆ ಬೆಲೆಯಲ್ಲಿ ಕಾಮಗಾರಿ ನಿರ್ವಹಿ ಸುವುದರಿಂದ ಕಾಮಗಾರಿ ಗುಣಮಟ್ಟ ದಿಂದ ಇರುವುದಿಲ್ಲ, ಜಿಲ್ಲೆಯವರೇ ಜಲಸಂಪನ್ಮೂಲ ಸಚಿವರಾಗಿದ್ದರಿಂದ ಈ ಬಾರಿಗೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಮ್ಯಾನ್ಯುಯಲ್‌ ಪದ್ಧತಿಯಲ್ಲಿ ಟೆಂಡರ್ ಕರೆಯುವಂತೆ ಹಲವಾರು ಬಾರಿ ಮನವಿ ಅರ್ಪಿಸಿದರೂ, ಅಧಿಕಾರಿ ಗಳು ಸ್ಪಂದಿಸಿಲ್ಲ, ಅದಕ್ಕಾಗಿ ಅನಿರ್ದಿಷ್ಟ ಧರಣಿ ನಡೆಸಲಾಗುತ್ತಿದೆ ಎಂದರು.

ಮನವಿ ಅರ್ಪಣೆ: ಧರಣಿ ಸ್ಥಳಕ್ಕೆ ಕೆಬಿಜೆಎನ್‌ಎಲ್‌ ಉಪಮುಖ್ಯ ಎಂಜಿನಿ ಯರ್‌ ಶಶಿಕಾಂತ ಹೊನವಾಡಕರ ಭೇಟಿ ನೀಡಿ ಧರಣಿ ಹಿಂಪಡೆಯುವಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದ ಗುತ್ತಿಗೆದಾರರು ಬೇಡಿಕೆ ಈಡೇರಿಸುವವರೆಗೆ ಧರಣಿ ಮುಂದುವರಿಸಲಾಗುವುದು ಎಂದರು. ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ವಿ.ಎಂ. ಹಿರೇಮಠ, ಪ್ರಧಾನ ಕಾರ್ಯದರ್ಶಿ ಗಿರೀಶ ಮರೋಳ, ವೈ.ವೈ. ಬಿರಾದಾರ, ಎಂ.ಎಸ್. ಮಕಾನದಾರ, ಜಕ್ಕಪ್ಪ ಮಾಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.