ADVERTISEMENT

ಆಲಮಟ್ಟಿಯಲ್ಲಿ ವಿಶ್ವೇಶ್ವರಯ್ಯ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 6:57 IST
Last Updated 16 ಸೆಪ್ಟೆಂಬರ್ 2013, 6:57 IST

ಆಲಮಟ್ಟಿಡ್ಯಾಂಸೈಟ್: ‘ಜಾಗತೀಕರಣದ ಫಲವಾಗಿ ಬಹುತೇಕ ಎಂಜಿನಿಯರ್‌­ಗಳು ನಾನಾ ವಿಧವಾದ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಹೊರ ಬಂದು, ಎಂಜಿನಿಯರ್‌ಗಳಿಗೆ  ಸೂಕ್ತ ಪ್ರೋತ್ಸಾಹ ಪೂರಕ ವಾತಾವರಣ ದೊರೆಯುವುದು ಅಗತ್ಯವಾಗಿದೆ’ ಎಂದು ಕೆಬಿಜೆಎನ್ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಸಿ. ಅನಂತರಾಮು ಹೇಳಿದರು.

ಆಲಮಟ್ಟಿಯ ಮುಖ್ಯ ಎಂಜಿನಿಯರ್ ಕಚೇರಿಯಲ್ಲಿ ಭಾನುವಾರ ನಡೆದ ಎಂಜಿನಿಯರ್‌ಗಳ ದಿನಾಚರಣೆ ಉದ್ಘಾ­ಟಿಸಿ  ಹಾಗೂ ಪುತ್ಥಳಿ ಅನಾವರಣ­ಮಾಡಿ ಮಾತನಾಡಿದರು. ಇಲ್ಲಿಯ­ವರೆಗೆ ನಾವು ಎಂಜಿನಿಯರಿಂಗ್ ಕ್ಷೇತ್ರ­ದಲ್ಲಿ ನೀಡಿದ ಕೊಡುಗೆ ಏನು? ಎಂಬು­ದರ ಕುರಿತು ಸ್ವಯಂ ಮೌಲ್ಯಮಾಪನ ಮಾಡಿಕೊಂಡು, ಗುಣಮಟ್ಟದ ಕಾಮಗಾರಿ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಾಗಿದೆ.

ರಾಜ್ಯದ ಮಹತ್ವಾಕಾಂಕ್ಷೆಯ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-–3 ರ ಅನುಷ್ಠಾನದಲ್ಲಿ ಎಂಜಿನಿಯರ್‌ಗಳ ಪಾತ್ರ ಹೆಚ್ಚಿದ್ದು, ಈ ಭಾಗದ ಜೀವನಾಡಿಯಾಗಿರುವ ಕೃಷ್ಣೆಯ ಹನಿ ನೀರು ಸಮರ್ಪಕವಾಗಿ ಬಳಕೆಯಾಗು­ವಂತ ಯೋಜನೆಯನ್ನು ಅನುಷ್ಠಾನ­ಗೊಳಿ­ಸುವ ನಿಟ್ಟಿನಲ್ಲಿ ಎಲ್ಲ ಎಂಜಿನಿಯರ್‌­ಗಳು ಅರ್ಪಣಾ ಮನೋಭಾವದಿಂದ ಕಾರ್ಯೋನ್ಮುಖಗೊಳ್ಳಬೇಕು, ಸದಾ ಕ್ರಿಯಾಶೀಲತೆಯಿಂದ ಕಾರ್ಯನಿರ್ವ­ಹಿಸ­ಬೇಕು ಎಂದರು.

ಭೀಮರಾಯನ­ಗುಡಿ ಗುಣನಿಯಂ­ತ್ರಣ ವಿಭಾಗದ ಅಧೀಕ್ಷಕ ಎಂಜಿನಿಯರ್ ವಿ.ಕೆ. ಪೋತದಾರ ಮಾತನಾಡಿ,  ‘ಸರ್ ಎಂ. ವಿಶ್ವೇಶ್ವರಯ್ಯನವರು ಎಂಜಿನಿಯ­ರಿಂಗ್ ವಿಭಾಗದ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಿದರ ಪರಿಣಾಮವಾಗಿ ಎಂಜಿನಿಯ­ರ್‌­ಗಳನ್ನು ಸದಾಕಾಲ ಗೌರವಿಸುವ ಭಾವನೆ ಸಮಾಜದಲ್ಲಿ ಮೂಡಿದೆ, ಎಂಜಿನಿಯರ್‌ಗಳು ಧನಾ­ತ್ಮಕ ಚಿಂತನೆಯೊಂದಿಗೆ ಕಾರ್ಯನಿರ್ವ­ಹಿಸ­­ಬೇಕಾಗಿದೆ’ ಎಂದರು.

ಮುಳವಾಡ ಏತ ನೀರಾವರಿ ಯೋಜನೆಯ ಅಧೀಕ್ಷಕ ಎಂಜಿನಿಯರ್ ಕೆ.ಎಸ್‌. ಹುಲಕುಂದ, ಕಾರ್ಯ­ಪಾಲಕ ಎಂಜಿನಿಯರ್‌­ಗಳಾದ ಎಸ್.ಎಂ. ಕೊಲ್ಹಾರ,  ಎನ್.ಡಿ. ಪಾಟೀಲ, ಎಸ್.ಬಿ. ಪಾಟೀಲ, ಎಂ.ಜಿ. ಸಜ್ಜನರ, ಎಂ.ಕೆ. ಯತ್ನಟ್ಟಿ, ಪಿ.ಕೆ. ಶಂಕರ, ಪ್ರಕಾಶ ಕಾತರಕಿ, ಅಬುಲ್‌ಹಸನ ಉಪಸ್ಥಿತರಿದ್ದರು. ಎಚ್.ಸಿ. ನರೇಂದ್ರ ಸ್ವಾಗತಿಸಿದರು.

ಅನಾವರಣಗೊಂಡ ಸರ್‌. ಎಂ. ವಿಶ್ವೇಶ್ವರರಯ್ಯ ಅವರ ಪುತ್ಥಳಿಯನ್ನು ಅಂದಾಜು ಮೂರು ಲಕ್ಷ ವೆಚ್ಚದ ಈ ಕಂಚಿನ ಪುತ್ಥಳಿ 2 ಅಡಿ ಎತ್ತರವಿದ್ದು, 2 ಮೀಟರ್ ಎತ್ತರದ ಪ್ಲಾಟ್‌ಫಾರ್ಮ ಮೇಲೆ ಪ್ರತಿಷ್ಠಾಪಿಸಲಾಗಿದೆ. ಶಿವಮೊಗ್ಗದ ಕಿಶನ್ ಫ್ಯಾಬ್ರಿಕೇಷನ್ ಅವರು ಈ ಕಂಚಿನ ಪುತ್ಥಳಿಯನ್ನು ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT