ADVERTISEMENT

ಆಲಮಟ್ಟಿ ಉದ್ಯಾನದಲ್ಲಿ ಪ್ರವಾಸಿಗರ ದಂಡು

ಈದ್‌ ಉಲ್‌ ಫಿತ್ರ್‌ ಮರುದಿನ ಭಾನುವಾರದ ರಜೆ‌ಯ ಸಂಭ್ರಮದಲ್ಲಿ ನಾಗರಿಕರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 9:20 IST
Last Updated 19 ಜೂನ್ 2018, 9:20 IST
ಆಲಮಟ್ಟಿಯ ರಾಕ್‌ ಉದ್ಯಾನದ ಸೂರ್ಯ ಸೆಕ್ಟರ್‌ ಬಳಿ ನಾಗರಿಕರು
ಆಲಮಟ್ಟಿಯ ರಾಕ್‌ ಉದ್ಯಾನದ ಸೂರ್ಯ ಸೆಕ್ಟರ್‌ ಬಳಿ ನಾಗರಿಕರು   

ಆಲಮಟ್ಟಿ(ನಿಡಗುಂದಿ): ಈದ್‌ ಉಲ್‌ ಫಿತ್ರ್‌ ಹಿನ್ನೆಲೆ ಹಾಗೂ ಭಾನುವಾರ ರಜೆಯ ದಿನವಾಗಿದ್ದರಿಂದ ಆಲಮಟ್ಟಿಯ ವಿವಿಧ ಉದ್ಯಾನಗಳಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ರಾಕ್‌ ಉದ್ಯಾನವಂತೂ ಪ್ರವಾಸಿಗರಿಂದ ತುಂಬಿತ್ತು.

ಪ್ರತಿ ವರ್ಷ ಈದ್‌ ಉಲ್‌ ಫಿತ್ರ್‌ ಹಬ್ಬದ ಮರುದಿನ ಮುಸ್ಲಿಮರು ಆಲಮಟ್ಟಿಯ ವಿವಿಧ ಉದ್ಯಾನಕ್ಕೆ ಭೇಟಿ ನೀಡುವುದು ಹೆಚ್ಚು. ಇಲ್ಲಿಯ ರಾಕ್‌, ಕೃಷ್ಣಾ ಹಾಗೂ ಲವಕುಶ ಉದ್ಯಾನಗಳಲ್ಲಿ ಬೆಳಿಗ್ಗೆಯಿಂದಲೇ ಟಿಕೆಟ್‌ ಪಡೆಯಲು ಉದ್ದನೆಯ ಸಾಲು ಇತ್ತು. ಜನ ಟಿಕೆಟ್‌ ಪಡೆದು ಒಳಗೆ ಹೋಗಲು ಹರಸಾಹಸಪಟ್ಟರು. ಮಧ್ಯಾಹ್ನ 2 ಗಂಟೆ ನಂತರ ಪ್ರವಾಸಿಗರ ಸಂಖ್ಯೆ ಇನ್ನೂ ಹೆಚ್ಚಾಯಿತು.

ಬುತ್ತಿ ಕಟ್ಟಿಕೊಂಡು ಕುಟುಂಬ ಸಮೇತರಾಗಿ ಬಂದು ರಾಕ್‌ ಉದ್ಯಾನ ಸೇರಿ ನಾನಾ ಕಡೆ ಊಟ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆ ಮೊಘಲ್‌, ಸಂಗೀತ ಕಾರಂಜಿಯ ಕಡೆ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ರೈಲು ನಿಲ್ದಾಣದಲ್ಲೂ ಪ್ರಯಾಣಿಕರಿಂದ ದಟ್ಟಣೆ ಹೆಚ್ಚಾಗಿತ್ತು.

ADVERTISEMENT

ಟಂಟಂ, ಟ್ರಾಕ್ಸ್‌, ಕಾರ್ ಮೂಲಕ ಉದ್ಯಾನಕ್ಕೆ ಬರುವವರ ಸಂಖ್ಯೆಯೂ ಹೆಚ್ಚಿದ್ದು, ಅದಕ್ಕಾಗಿ ಹೆಲಿಪ್ಯಾಡ್‌ ಬಳಿ ಹೆಚ್ಚುವರಿಯಾಗಿ ವಾಹನಗಳ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿತ್ತು. ಚಕ್ಕಲಿ, ಐಸ್‌ಕ್ರೀಂ ಸೇರಿದಂತೆ ನಾನಾ ವಸ್ತುಗಳ ಮಾರಾಟ ಮಾಡುವವರ ವ್ಯಾಪಾರ ಜೋರಾಗಿತ್ತು. ಜೊತೆಗೆ ‌ಫೋಟೊ ತೆಗೆಯುವವರ ವಹಿವಾಟು ಹೆಚ್ಚಾಗಿತ್ತು. ಮಧ್ಯಾಹ್ನ 3 ಗಂಟೆಯವರೆಗೂ ಮೊಘಲ್‌ ಉದ್ಯಾನ ಬಂದ್ ಮಾಡಿದ್ದರಿಂದ ಪ್ರವಾಸಿಗರು ರಾಕ್‌ ಉದ್ಯಾನದಲ್ಲಿಯೇ ಹೆಚ್ಚು ಕಾಲ ಕಳೆದರು.

₹1.5 ಲಕ್ಷ ಪ್ರವೇಶ ಹಣ ಸಂಗ್ರಹ

‘ರಾಕ್‌ ಉದ್ಯಾನದಲ್ಲಿ ₹1.12 ಲಕ್ಷ , ಕೃಷ್ಣಾ ಉದ್ಯಾನ ₹21 ಸಾವಿರ, ಲವಕುಶ ಉದ್ಯಾನ ₹ 15 ಸಾವಿರ ಪ್ರವೇಶ ದರದ ಹಣ ಸಂಗ್ರಹಗೊಂಡಿದೆ’ ಆರ್‌ಎಫ್‌ಒ ಮಹೇಶ ಪಾಟೀಲ ತಿಳಿಸಿದರು.

ಭಾರಿ ಬಂದೋಬಸ್ತ್‌: ಅರಣ್ಯ ಇಲಾಖೆಯ ಡಿಎಫ್‌ಒ ಪಿ.ಕೆ. ನಾಯಕ ನೇತೃತ್ವದಲ್ಲಿ 10 ಜನ ಅಧಿಕಾರಿಗಳು, 50 ಜನ ದಿನಗೂಲಿಗಳು ಕಾರ್ಯನಿರ್ವಹಿಸಿದರು.

ಕೆಎಸ್‌ಐಎಸ್‌ಎಫ್ ಪಿಎಸ್‌ಐ ಈರಣ್ಣ ವಾಲಿ ನೇತೃತ್ವದಲ್ಲಿ ನಾಲ್ವರು ಪಿಎಸ್‌ಐ 50 ಜನ ಕೆಎಸ್‌ಐಎಸ್‌ಎಫ್‌ ಪೊಲೀಸರು ಭದ್ರತೆಯಲ್ಲಿ ತೊಡಗಿದ್ದರು. ಅವರ ಜೊತೆ ಆಲಮಟ್ಟಿ, ನಿಡಗುಂದಿ, ಬಾಗೇವಾಡಿ, ಮನಗೂಳಿ, ಕೊಲ್ಹಾರ ಠಾಣೆಯ ಪಿಎಸ್‌ಐಗಳು, ಎರಡು ಡಿಎಆರ್‌ ಪೊಲೀಸ್‌ ಪಡೆ, 20 ಜನ ಪೊಲೀಸರು ಬಂದೋಬಸ್ತ್‌ನಲ್ಲಿ ತೊಡಗಿದ್ದರು.

ಹಬ್ಬದ ದಿನ ಮಾಡಿದ ಅಡುಗೆ ಸಾಕಷ್ಟು ಉಳಿದಿರುತ್ತದೆ. ಮರುದಿನ ಅದೇ ಅಡುಗೆ ಕಟ್ಟಿಕೊಂಡು, ಮಕ್ಕಳ ಜೊತೆ ನಾವು ರಂಜನೆ ಮಾಡಲು ಆಲಮಟ್ಟಿಗೆ ಬಂದಿದ್ದೇವೆ
- ಇಸ್ಮಾಯಿಲ್‌ ಬೇಪಾರಿ, ವಿಜಯಪುರ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.