ADVERTISEMENT

ಉತ್ತಮ ತಳಿಯ ಬೀಜಕ್ಕೆ ಆದ್ಯತೆ ಕೊಡಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 10:00 IST
Last Updated 14 ಮಾರ್ಚ್ 2012, 10:00 IST

ವಿಜಾಪುರ: ರೈತರು ಉತ್ತಮ ತಳಿಯ ಬೀಜಗಳನ್ನು ಆಯ್ಕೆ ಮಾಡಬೇಕು. ಇದರಿಂದ ಆರ್ಥಿಕ ಇಳುವರಿಯ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ತಡೆಗಟ್ಟಬಹುದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಎ.ಎಚ್. ಬಂಥನಾಳ ಹೇಳಿದರು.

ನಗರದ ಸಮೀಪದ ಹಿಟ್ನಳ್ಳಿಯ ಪ್ರಾದೇಶಿಕ ಕೃಷಿ ಸಂಶೋಧನಾ ಕೇಂದ್ರದಲ್ಲಿ ಇತ್ತೀಚೆಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯ ಹಾಗೂ ಧಾರವಾಡದ ಕೃಷಿ ವಿಶ್ವ ವಿದ್ಯಾಲಯದ ಬೀಜ ಘಟಕದ ಸಹಯೋಗದಲ್ಲಿ ಶೇಂಗಾ ಬೆಳೆಯ ಬೀಜೋತ್ಪಾದನೆ ಹಾಗೂ ತಾಂತ್ರಿಕತೆ ಕುರಿತು ನಡೆದ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ರೈತರಿಗಾಗಿ ಹಮ್ಮಿಕೊಂಡ ಈ ತರಬೇತಿ ಮುಖಾಂತರ ಕೃಷಿ ತಜ್ಞರು ನೀಡಿದ ಜ್ಞಾನವನ್ನಾಧರಿಸಿ ಉತ್ತಮ ಥಳಿಯ ಬೀಜ ಬೆಳೆದು ಸ್ವಾವಲಂಬಿಗಳಾಗಬೇಕು.

ಉತ್ತಮ ಬೀಜಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳ ಮೂಲಕ ರಿಯಾಯಿತಿ ದರದಲ್ಲಿ ವಿತರಣೆ ಮಾಡಲಾಗುವದು ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಹ ಸಂಶೋಧನಾ ನಿರ್ದೇಶಕ ಡಾ. ಎಸ್.ಎಲ್. ಮಡಿವಾಳರ ಮಾತನಾಡಿ, ರೈತರು ಈ ತರಬೇತಿಯ ಮೂಲಕ ಉತ್ತಮ ಗುಣಮಟ್ಟದ ಥಳಿಯ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಲ್ಲಿ ಪ್ರಮಾಣಿಕೃತ ಬೀಜದ ಅವಶ್ಯಕತೆ ಸುಧಾರಿಸಬಹುದಾಗಿದೆ ಎಂದರು.

ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮದ ಸಂಯೋಜಕ ಡಾ.ಎಸ್. ವೈ. ವಾಲಿ ಮಾತನಾಡಿ, ಈ ಕಾರ್ಯಕ್ರಮದಿಂದ ಮಾಹಿತಿ ಪಡೆದ ರೈತರು ಒಗ್ಗೂಡಿ ಬೀಜೋತ್ಪಾದನೆ ಮಾಡಿದಾಗ ಉತ್ತಮ ಬೀಜಗಳು ರೈತರಿಗೆ ಲಭ್ಯವಾಗಲು ಸಾಧ್ಯ ಎಂದರು.

ಸಹ ವಿಸ್ತರಣಾ ನಿರ್ದೇಶಕ ಡಾ. ಆರ್. ಗುರುಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡ ಕೃಷಿ ವಿಶ್ವವಿದ್ಯಾಲಯ ವ್ಯಾಪ್ತಿಯ ಬೀಜ ಘಟಕವು ತಜ್ಞರ ಮಾರ್ಗದರ್ಶನದಲ್ಲಿ ಉತ್ತಮ ಬೀಜೋತ್ಪಾದನೆ ಮಾಡಿ, ಅದನ್ನು ವಿಶ್ವವಿದ್ಯಾಲಯವೇ ಖರೀದಿಸಿ, ರೈತರಿಗೆ ವಿತರಿಸುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ಎಲ್.ಎಚ್. ಮಲ್ಲಿಗವಾಡ ಹಾಗೂ ಡಾ. ಆರ್.ಬಿ. ಬೆಳ್ಳಿ ಅವರು ಬರೆದ ಶೇಂಗಾ ಬೆಳೆಯ ಬೀಜೋತ್ಪಾದನೆಯ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು.ಜೈನಾಪುರ, ಬೆಳ್ಳುಬ್ಬಿ, ಆಹೇರಿ, ಜುಮನಾಳ ಇನ್ನಿತರ ಗ್ರಾಮಗಳ ಶೇಂಗಾ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.