ADVERTISEMENT

ಉದ್ಯೋಗ ತರಬೇತಿಗೆ ಸಿಕ್ಯಾಬ್ ಒಡಂಬಡಿಕೆ

​ಪ್ರಜಾವಾಣಿ ವಾರ್ತೆ
Published 27 ಜುಲೈ 2012, 7:35 IST
Last Updated 27 ಜುಲೈ 2012, 7:35 IST
ಉದ್ಯೋಗ ತರಬೇತಿಗೆ ಸಿಕ್ಯಾಬ್ ಒಡಂಬಡಿಕೆ
ಉದ್ಯೋಗ ತರಬೇತಿಗೆ ಸಿಕ್ಯಾಬ್ ಒಡಂಬಡಿಕೆ   

ವಿಜಾಪುರ: ಇಲ್ಲಿಯ ಸಿಕ್ಯಾಬ್ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಬೆಂಗಳೂರಿನ ಪೀಯರಸನ್-ಎಜುಕಾಮ್ ಕಂಪನಿಯ ಅಂಗ ಸಂಸ್ಥೆ ಪರ್ಪಲ್ ಸಂಸ್ಥೆಗಳು ಜಂಟಿ ಒಡಂಬಡಿಕೆ ಮಾಡಿಕೊಂಡಿವೆ.
`ಪರ್ಪಲ್‌ಲೀಪ್ ಸಂಸ್ಥೆಯ ಪರಿಣಿತ ತಂತ್ರಜ್ಞರು ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ನೀಡಿ, ಅವರನ್ನು ಉದ್ದಿಮೆಗಳಲ್ಲಿ ನೇರವಾಗಿ ಕಾರ್ಯನಿರ್ವಹಿಸಲು ಸಿದ್ಧಗೊಳಿಸುತ್ತಾರೆ.
 
ಈ ಒಪ್ಪಂದವು ಸದ್ಯಕ್ಕೆ ನಾಲ್ಕು ವರ್ಷಗಳವರೆಗೆ ಇದ್ದು, ಇದರಿಂದ ಸಿಕ್ಯಾಬ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಪರ್ಪಲ್‌ಲೀಪ್‌ನಿಂದ ತಾಂತ್ರಿಕ ನೈಪುಣ್ಯತೆ ಹೊಂದಿ ಉದ್ದಿಮೆಗಳಲ್ಲಿ ಕೆಲಸಕ್ಕೆ ಅರ್ಹತೆ ಪಡೆದುಕೊಳ್ಳುತ್ತಾರೆ~ ಎಂದು ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್.ಎ. ಪುಣೇಕರ ಹೇಳಿದರು.

ಈ ತರಬೇತಿ ಕಾರ್ಯಕ್ರಮವು ಆಗಸ್ಟ್ 1ರಿಂದ ಆರಂಭವಾಗುವುದಕ್ಕೆ ಎರಡೂ ಸಂಸ್ಥೆಗಳು ಸಂಪೂರ್ಣ ಸಿದ್ಧತೆ ಮಾಡಿಕೊಂಡಿವೆ. ವಿದ್ಯಾರ್ಥಿಗಳು ಮೈಕ್ರೋಸಾಫ್ಟ್, ಸೀಮನ್ಸ್, ಓರೆಕಲ್ ಮತ್ತು ಸ್ಯಾಪ್ ಸಂಸ್ಥೆಗಳಲ್ಲಿ ಪ್ರಮಾಣಿಕೃತ ಕೊರ್ಸ್‌ಗಳ ತರಬೇತಿ ಪಡೆದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಉದ್ಯೋಗಕ್ಕೆ ಅರ್ಹತೆ ಪಡೆಯುತ್ತಾರೆ ಎಂದರು.

ಪೀಯರಸನ್-ಎಜುಕಾಮ್ ಕಂಪೆನಿಯು 8 ಶತಕೋಟಿ ಡಾಲರ್ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ. ರಾಜ್ಯದ 10 ಕಾಲೇಜುಗಳಲ್ಲಿ, ದೇಶದ 180 ಕಾಲೇಜುಗಳಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತರಬೇತಿ ಹಾಗೂ ನೇಮಕಾತಿಗಾಗಿ ಸಿದ್ಧಪಡಿಸುತ್ತಿದ್ದಾರೆ. ತರಬೇತಿ ಪಡೆದ ವಿದ್ಯಾರ್ಥಿಗಳು 300ಕ್ಕೂ ಅಧಿಕ ಕಂಪನಿಗಳಲ್ಲಿ ಉದ್ಯೋಗ ಪಡೆದು ಕೊಳ್ಳಲಿದ್ದಾರೆ. ಉಪಗ್ರಹ ತಂತ್ರಜ್ಞಾನದ ಮೂಲಕ ಮತ್ತು ವರ್ಗ ಕೊಠಡಿಯಲ್ಲಿ ಕಂಪನಿಯ 500ಕ್ಕೂ ಹೆಚ್ಚು ಪರಿಣಿತ ತಂತ್ರಜ್ಞರು ವಿವಿಧ ಸೆಮಿಸ್ಟರ್‌ಗಳ ವಿದ್ಯಾರ್ಥಿಗಳಿಗ ತರಬೇತಿ ನೀಡುತ್ತಾರೆ ಎಂದು ವಿವರಿಸಿದರು.

ಎಂಜಿನಿಯರಿಂಗ್ ಕಲಿಯುವ ವಿವಿಧ ವಿಭಾಗಗಳ ವಿದ್ಯಾರ್ಥಿಗಳ ಅವಶ್ಯಕತೆಗಳಿಗೆ ಅನುಸಾರವಾಗಿ ತರಬೇತಿಯಲ್ಲಿ ಬದಲಾವಣೆ ಮಾಡಲಾಗುವುದು. ಈ ತರಬೇತಿ ಕಾರ್ಯಕ್ರಮ ಯಶಸ್ಸಿನ ಪ್ರಮಾಣವು ಶೇ.60 ಕ್ಕಿಂತ ಹೆಚ್ಚಾಗಿದೆ ಎಂದು ಪರ್ಪಲ್‌ಲೀಪ್ ಸಂಸ್ಥೆಯ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಸತೀಶ್ ಬಿ.ಕೆ ಹೇಳಿದರು.

ಸಿಕ್ಯಾಬ್ ಸಂಸ್ಥೆಯ ಗೌರವ ಕಾರ್ಯದರ್ಶಿ ಎ.ಎಸ್. ಪಾಟೀಲ, ಕಾಲೇಜಿನ ಪ್ರಾಚಾರ್ಯ ಡಾ.ಜಮೀಲ್ ದಾವೂದ್, ಪೀಯರಸನ್-ಎಜುಕಾಮ್ ಕಂಪನಿಯ ಜಸ್ಪಾಲ್ ಸಿಂಗ್, ರವಿ ಪುರೋಹಿತ, ಸಿಕ್ಯಾಬ ಕಾಲೇಜಿನ ಪ್ರೊ.ಅರುಣಕುಮಾರ, ಪ್ರೊ.ಸಲಾವುದ್ದೀನ್ ಇತರರು ಇದ್ದರು.

ಕೃತಕ ಕಾಲು ಜೋಡಣಾ ಶಿಬಿರ ಇಂದಿನಿಂದ
ವಿಜಾಪುರ:ಇಲ್ಲಿಯ ಜೈನ ಸೋಷಿಯಲ್ ಗ್ರೂಪ್‌ನಿಂದ ಕೃತಕ ಜೈಪುರ ಕಾಲು ಜೋಡಣಾ ಶಿಬಿರವನ್ನು ಇದೇ 27ರಿಂದ 29ರ ವರೆಗೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ.ಇಲ್ಲಿಯ ಎಪಿಎಂಸಿಯ ವ್ಯಾಪಾರಸ್ಥರ ಸಂಘದ ಕಚೇರಿಯ ಸಭಾಂಗಣದಲ್ಲಿ ನಡೆಯುವ ಶಿಬಿರವನ್ನು ಇದೇ 27ರಂದು ಬೆಳಿಗ್ಗೆ 10.30ಕ್ಕೆ ಸಿದ್ಧೇಶ್ವರ ಸ್ವಾಮೀಜಿ ಉದ್ಘಾಟಿಸುವರು.

ಈ ಶಿಬಿರದಲ್ಲಿ ಪಾಲ್ಗೊಂಡು ಕೃತಕ ಕಾಲು ಜೋಡಿಸಿಕೊಳ್ಳುವವರು ಹೆಚ್ಚಿನ ಮಾಹಿತಿಗಾಗಿ ಮೊ.9448360938 ಸಂಪರ್ಕಿಸಬೇಕು ಎಂದು ರಾಜೇಂದ್ರ ಪೋರವಾಲ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.