ADVERTISEMENT

ಕಠಾರಿವೀರ: ದೃಶ್ಯಕ್ಕೆ ಕತ್ತರಿ ಪ್ರಯೋಗ ಬೇಡ

​ಪ್ರಜಾವಾಣಿ ವಾರ್ತೆ
Published 14 ಮೇ 2012, 9:55 IST
Last Updated 14 ಮೇ 2012, 9:55 IST

ಸಿಂದಗಿ: `ಕಠಾರಿವೀರ ಸುರಸುಂದ ರಾಂಗಿ~  ಚಿತ್ರದ ಯಾವುದೇ ದೃಶ್ಯವನ್ನು ತೆಗೆದು ಹಾಕಬಾರದು~ ಎಂದು ಬಹುಜನ ಸಮಾಜ ಪಾರ್ಟಿ, ಜಾತ್ಯತೀತ ಜನಾದಳ ಅಲ್ಪಸಂಖ್ಯಾತರ ಘಟಕ, ಮುಸ್ಲಿಂ ಮುತ್ತಹಿದಾ ಕೌನ್ಸಿಲ್, ಟಿಪ್ಪು ಕಮೀಟಿ ಪದಾಧಿಕಾರಿಗಳು ಒತ್ತಾಯಿಸಿದರು.

ಭಾನುವಾರ ಪಟ್ಟಣದ ಚಿತ್ರಮಂದಿರದಲ್ಲಿ ಪದಾಧಿಕಾರಿಗಳು `ಕಠಾರಿವೀರ~ ಚಿತ್ರದ ಪೋಸ್ಟರ್‌ಗೆ ಹಾಲಿನ ಅಭಿಷೇಕ ಮಾಡಿ ಪ್ರೇಕ್ಷಕರಿಗೆ ಸಿಹಿ ಹಂಚಿದರು.

ನಂತರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಬಿಎಸ್‌ಪಿ ಉಪಾಧ್ಯಕ್ಷ ಮಹಿಬೂಬ ಸಿಂದಗಿಕರ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಡಾ.ದಸ್ತಗೀರ, ರಾಜೂ ಗುಬ್ಬೇವಾಡ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ತಾಲ್ಲೂಕು ಅಧ್ಯಕ್ಷ ನೂರಹ್ಮದ ಅತ್ತಾರ, ಮುನ್ನಾ ಶೇಟ್ ಮಾತನಾಡಿ, ಕಠಾರಿವೀರ,,,ಚಿತ್ರದಲ್ಲಿ ಹಿಂದೂ ಸಂಸ್ಕೃತಿಗೆ ಅವಮಾನಕರ ದೃಶ್ಯ, ಸಂಭಾಷಣೆಗಳಿವೆ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ ಆರೋಪಿಸಿ ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದನ್ನು ತಾವು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ಚಿತ್ರ ಪ್ರದರ್ಶನಕ್ಕೂ ಮುನ್ನ ಸೆನ್ಸಾರ್ ಮಂಡಳಿ ಚಿತ್ರವನ್ನು ವೀಕ್ಷಿಸಿಯೇ ಅನುಮತಿ ನೀಡಿರುತ್ತದೆ. ಈಗ ಮುತಾಲಿಕನಂತಹ ಕೋಮುವಾದಿ ವ್ಯಕ್ತಿಯ ಸಲಹೆ, ಅಭಿಪ್ರಾಯಕ್ಕೆ ಯಾವುದೇ ರೀತಿಯಲ್ಲಿ ಬೆಲೆಯಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದರು.

ಒಂದು ವೇಳೆ ಕೋಮುವಾದಿ ಸಂಘಟನೆಗಳು ಚಿತ್ರಪ್ರದರ್ಶನಕ್ಕೆ ಅಡ್ಡಿ ಪಡಿಸಲು ಮುಂದಾದರೆ ಪ್ರಗತಿಪರ, ಮುಸ್ಲಿಂ ಸಂಘಟನೆಗಳು ಚಿತ್ರ ಪ್ರದರ್ಶನಗೊಳ್ಳಲು ಸಹಕಾರಿಯಾಗಿ ನಿಲ್ಲುತ್ತವೆ ಎಂದು ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುತ್ತಹಿದಾ ಕೌನ್ಸಿಲ್ ಸಂಘಟನೆ ಅಧ್ಯಕ್ಷ ರಜಾಕ ನಾಟೀಕಾರ, ಟಿಪ್ಪು ಕಮೀಟಿ ಅಧ್ಯಕ್ಷ ರಜಾಕ ಮುಜಾವರ, ಮುಸ್ತಫಾ ಮಂದೇವಾಲಿ, ರುಕುಮಪಟೇಲ್, ಹಸನ್ ಮಂದೇವಾಲಿ, ಶಬ್ಬೀರ ಮರ್ತೂರ, ಮೈಬೂಬ ಬಾಗವಾನ, ದಸ್ತಗೀರ ನರಸಣಗಿ, ಅಶೋಕ ಗುಬ್ಬೇವಾಡ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.