
ವಿಜಾಪುರ: `ಅಂಗನವಾಡಿ ಮತ್ತು ಬಿಸಿಯೂಟದ ನೌಕರರಿಗೆ ಸೇವಾ ನಿಯಮ ರೂಪಿಸಿ ಕೆಲಸದ ಭದ್ರತೆ ಒದಗಿಸಬೇಕು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆ ಗಳನ್ನು ಭರ್ತಿ ಮಾಡಬೇಕು' ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ (ಸಿಐಟಿಯು) ಜಿಲ್ಲಾ ಸಮಿತಿಯವರು ಶುಕ್ರವಾರ  ಪ್ರತಿಭಟನೆ ನಡೆಸಿದರು.
 
 ಎಪಿಎಲ್ ಮತ್ತು ಬಿಪಿಎಲ್ ಎಂಬ ವ್ಯತ್ಯಾಸ ಮಾಡದೆ ಎಲ್ಲ ಕುಟುಂಬಗಳಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ಪೂರೈಸಬೇಕು. ಕಾರ್ಮಿಕರಿಗೆ ಕನಿಷ್ಠ ರೂ.10,000 ವೇತನ ಜಾರಿಮಾಡಬೇಕು. ರಾಜ್ಯ ಸರ್ಕಾರದ ಒಡೆತನದ ಕೈಗಾರಿಕೆಗಳ ಪುನಶ್ಚೇತನಗೊಳಿಸಬೇಕು ಎಂದು ಮುಖಂಡ ಭೀಮಶಿ ಕಲಾದಗಿ ಆಗ್ರಹಿಸಿದರು.
 
 ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚಿಸಲು ಮತ್ತು ಸೂಕ್ತ ಶಿಫಾರಸ್ಸು ಮಾಡಲು ತ್ರಿಪಕ್ಷೀಯ ರಾಜ್ಯ ಮಟ್ಟದ ಕಾರ್ಮಿಕ ಸಮ್ಮೇಳನವನ್ನು ವರ್ಷಕ್ಕೊಮ್ಮೆಯಾದರೂ ಏರ್ಪಡಿಸ ಬೇಕು.
 
 ಜನಶ್ರೀ ಬಿಮಾ ಯೋಜನೆ ಮತ್ತು ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಗಳನ್ನು ಅಸಂಘಟಿತ ಕಾರ್ಮಿಕರಿಗೆ ಅನ್ವಯಿಸುವ ಜವಾಬ್ದಾರಿಯನ್ನು ಕಾರ್ಮಿಕ ಇಲಾಖೆಗೆ ನೀಡಬೇಕು. ಲಾರಿ ಹಮಾಲರಿಗೆ ನಿವೇಶನ ವಿತರಿಸಲು ಸರ್ಕಾರಕ್ಕೆ ಸಲ್ಲಿಸಿರುವ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಬೇಕು.
 
 ಅಸಂಘಟಿತ ಕಾರ್ಮಿಕರಿಗೆ ನಿವೇಶನ ನೀಡಬೇಕು ಎಂದು ಲಾರಿ ಹಮಾಲರ ಸಂಘದ ಗೌರವಾಧ್ಯಕ್ಷ ಮನ್ನುಸಾಬ ಕಲಾದಗಿ, ಮುನ್ಸಿಪಲ್ ಕಾಮಗಾರ ಯೂನಿಯನ್ ಅಧ್ಯಕ್ಷ ವಿ.ಎಂ. ಸೊನ್ನದ ಒತ್ತಾಯಿಸಿದರು.
 
 ಗುತ್ತಿಗೆ ಆಧಾರದ ಮೇಲೆ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ರೂ.10,000 ವೇತನ ಹಾಗೂ ಅವರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
 
 ಲಕ್ಷ್ಮಣ ದೊಡಮನಿ, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಸುನಂದ ನಾಯಕ, ಬಿಸಿಯೂಟ ಕಾರ್ಯಕರ್ತೆಯರ ಸಂಘದ ಮಾಲಾ ಪಿ.ಶಿವಣಗಿ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.