ADVERTISEMENT

ಕುಂಟೋಜಿಯಲ್ಲಿ ಚುನಾವಣೆ ಘರ್ಷಣೆ-ಚೂರಿ ಇರಿತ: ಒಬ್ಬ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 8:51 IST
Last Updated 18 ಡಿಸೆಂಬರ್ 2012, 8:51 IST

ಮುದ್ದೇಬಿಹಾಳ: ತಾಲ್ಲೂಕಿನ ಕುಂಟೋಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಂತರ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಚೂರಿ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ತಲಾ ಎರಡೆರಡು ನಾಮಪತ್ರ ಸಲ್ಲಿಕೆಯಾದ ಕಾರಣ ಗುಪ್ತ ಮತದಾನದ ಮೂಲಕ ಆಯ್ಕೆ ನಡೆಸಲು ಚುನಾವಣಾಧಿಕಾರಿ ಜಿ.ಆರ್.ದೊಡ್ಡಿಹಾಳ ನಿರ್ಧರಿಸಿದರು. ಈ ಸಂದರ್ಭ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಗುರುಲಿಂಗಪ್ಪ ಸುಳ್ಳೊಳ್ಳಿ ಅವರು ತಮ್ಮ ಬೆಂಬಲಿತ ಸದಸ್ಯರೊಂದಿಗೆ ಕೂಡಿಕೊಂಡು “ಕರೆವ್ವ ಕೊಂಗನೂರ ಯಾರಿಗೆ ಮತ ಹಾಕುತ್ತಾರೆಂಬುದನ್ನು ನಮಗೆಲ್ಲ
ತೋರಿಸಿ ಹಾಕಬೇಕು” ಎಂದು ಪಟ್ಟು ಹಿಡಿದರು.

ಹೀಗಾಗಿ ಚುನಾವಣೆಯಲ್ಲಿ ಗದ್ದಲ ಆಗುವುದನ್ನು ಮನಗಂಡ ಚುನಾವಣಾಧಿಕಾರಿಗಳು ಪೊಲೀಸರ ಬೆಂಬಲದೊಂದಿಗೆ ಮತದಾನ ಪ್ರಕ್ರಿಯೆ ನಡೆಸಿದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಶಿವಬಸು ಸಜ್ಜನ 8 ಮತ ಪಡೆದರೆ, ಗುರುಲಿಂಗಪ್ಪ ಸುಳ್ಳೊಳ್ಳಿ 7 ಮತ ಪಡೆದರು. ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕರೆವ್ವ ಕೊಂಗನೂರ 9 ಮತ ಪಡೆದರೆ, ಬಸಲಿಂಗಮ್ಮ ಮಾದರ 6 ಮತ ಪಡೆದರು.

ಹೀಗಾಗಿ ಅಧ್ಯಕ್ಷರಾಗಿ ಶಿವಬಸು ಸಜ್ಜನ ಮತ್ತು ಉಪಾದ್ಯಕ್ಷರಾಗಿ ಕರೆವ್ವ ಕೊಂಗನೂರ ಅವರ ಆಯ್ಕೆಯನ್ನು ಚುನಾವಣಾಧಿಕಾರಿ  ಘೋಷಿಸಿದರು.ಆಯ್ಕೆ ಪ್ರಕ್ರಿಯೆ ಮುಗಿದ ಮೇಲೆ ಯಾವುದೇ ಗೊಂದಲ, ಗಲಾಟೆಗೆ ಆಸ್ಪದ ನೀಡದಿರಲು ಪೊಲೀಸರು ವಿಜಯೋತ್ಸವ ಆಚರಿಸದಂತೆ ನಿಷೇಧ ಹೇರಿದರು.

ಲಾಠಿ ಪ್ರಹಾರ: ಆಯ್ಕೆ ಪ್ರಕ್ರಿಯೆ ಮುಗಿದ ಮೇಲೆ ವಿಜೇತರು ತಮ್ಮ ಬೆಂಬಲಿತ ಸದಸ್ಯರೊಂದಿಗೆ  ಗ್ರಾಮದಲ್ಲಿರುವ  ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ಮೇಲೆ  ಮುದ್ದೇಬಿಹಾಳಕ್ಕೆ ಹೋಗಬೇಕು ಎನ್ನುವ ಸಮಯದಲ್ಲಿ ಅವರಿದ್ದ  ಜೀಪ್ ಮೇಲೆ ಕೆಲವರು ಏಕಾಏಕಿ ಕಲ್ಲು ತೂರತೊಡಗಿದರು.

ADVERTISEMENT

ಈ ಸಂದರ್ಭ ಕೈಗೆ ಸಿಕ್ಕ ಪ್ರಜ್ವಲ್ ಬಸವರಾಜ ಹೂಗಾರ ಎಂಬ ಯುವಕನಿಗೆ ಚೂರಿಯಿಂದ ತಿವಿಯಲು ಪ್ರಯತ್ನ ನಡೆಸಿದಾಗ ಆತ ತಪ್ಪಿಸಿಕೊಂಡ ಕಾರಣ ಎದೆಯ ಮೇಲೆ ಗಾಯವಾಯಿತು. ಕೂಡಲೇ ಜೀಪಿನಲ್ಲಿದ್ದ ಜನರು ಈ ಯುವಕನನ್ನು ಒಳಗೆ ಕರೆದುಕೊಂಡು ಮುಂದಿನ ಅನಾಹುತ ತಪ್ಪಿಸಿದರು.

ಇದೇ ವೇಳೆ ಉಭಯ ಗುಂಪುಗಳ ಮಧ್ಯೆ ಕಲ್ಲು ತೂರಾಟ, ಹೊಡೆದಾಟ ನಡೆಯಿತು.  ಪೊಲೀಸರು ಸ್ಥಳಕ್ಕೆ ಧಾವಿಸಿ ಲಾಠಿ ಪ್ರಹಾರ ನಡೆಸಿ ಉದ್ರಿಕ್ತಗೊಂಡಿದ್ದ ಜನರನ್ನು ಚದುರಿಸಿದರು. ಕೈಗೆ ಸಿಕ್ಕ ಮೂವರು ಯುವಕರನ್ನು ಜೀಪಿನಲ್ಲಿ ಹಾಕಿಕೊಂಡು ಠಾಣೆಗೆ ಕರೆದೊಯ್ದರು.

ದೂರು ದಾಖಲು: ಗ್ರಾಮದಿಂದ ನೇರವಾಗಿ ಜೀಪುಗಳಲ್ಲಿ ಇಲ್ಲಿನ ಪೊಲೀಸ ಠಾಣೆಗೆ ಆಗಮಿಸಿದ ವಿಜೇತ ಅಭ್ಯರ್ಥಿಗಳು, ಅವರ ಬೆಂಬಲಿಗರು ತಮಗೆ ಗ್ರಾಮದ ಕೆಲವರಿಂದ ಜೀವ ಬೆದರಿಕೆ ಇದ್ದು ರಕ್ಷಣೆ ಕೊಡುವಂತೆ ಪೊಲೀಸ್‌ಅಧಿಕಾರಿಗಳನ್ನು ಒತ್ತಾಯಿಸಿದರು.

ಈ ಸಂದರ್ಭ ಚೂರಿ ಇರಿತದಿಂದ ಗಾಯಗೊಂಡಿದ್ದ ಪ್ರಜ್ವಲ್ ಅವರ ತಂದೆ ಬಸವರಾಜ ಹೂಗಾರ ಅವರು ತಮ್ಮ ಮಗನ ಕೊಲೆ ಯತ್ನ ನಡೆದಿದೆ ಎಂದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸೋತ ವ್ಯಕ್ತಿ ಗುರುಲಿಂಗಪ್ಪ ಸುಳ್ಳೊಳ್ಳಿ ಸೇರಿದಂತೆ ಒಟ್ಟು 15 ಜನರ ವಿರುದ್ಧ ದೂರು ದಾಖಲಿಸಿದರು. ಕುಂಟೋಜಿ ಗ್ರಾಮದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಂಟಾಗಿತ್ತು. ಡಿವೈ.ಎಸ್ಪಿ ಎಂ.ವೈ. ಬಾಲದಂಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.