ADVERTISEMENT

ಕೃಷಿ ಹೊಂಡಕ್ಕೆ ಬಿದ್ದು ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2017, 8:52 IST
Last Updated 6 ಅಕ್ಟೋಬರ್ 2017, 8:52 IST
ಲಲಿತಾ ಬಿರಗೊಂಡ
ಲಲಿತಾ ಬಿರಗೊಂಡ   

ಮುದ್ದೇಬಿಹಾಳ: ದನ ಕಾಯಲು ತೆರಳಿದ್ದಾಗ, ತನಗಾದ ಬಾಯಾರಿಕೆ ಇಂಗಿಸಿಕೊಳ್ಳಲು ಕೃಷಿ ಹೊಂಡದ ಬಳಿ ತೆರಳಿದ್ದ ಶಾಲಾ ಬಾಲಕಿ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ತಾಲ್ಲೂಕಿನ ಢವಳಗಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಆರನೇ ತರಗತಿ ವಿದ್ಯಾರ್ಥಿನಿ ಲಲಿತಾ ನಡಗೇರಪ್ಪ ಬಿರಗೊಂಡ (12) ಮೃತ ಬಾಲಕಿ.

ವಾಲ್ಮೀಕಿ ಜಯಂತಿ ಅಂಗವಾಗಿ ಶಾಲೆಗೆ ರಜೆ ಇದ್ದುದರಿಂದ ಲಲಿತಾ ತಮ್ಮನ ಜತೆ ದನ ಮೇಯಿಸಲು ಹೊಲಕ್ಕೆ ಹೋಗಿದ್ದಳು. ಬಾಯಾರಿದ್ದರಿಂದ ಸಮೀಪದಲ್ಲೇ ಇದ್ದ ಪಾವಡೆಪ್ಪ ಸಜ್ಜನ ಎಂಬುವರ ಹೊಲದಲ್ಲಿನ ಕೃಷಿ ಹೊಂಡಕ್ಕೆ ನೀರು ಕುಡಿಯಲು ಹೋಗಿದ್ದಾಳೆ.

ಈ ಸಂದರ್ಭ ಕಾಲು ಜಾರಿ ಹೊಂಡದೊಳಕ್ಕೆ ಬಿದ್ದಿದ್ದಾಳೆ. ಘಟನೆಯಿಂದ ಗಾಬರಿಗೊಂಡ ತಮ್ಮ ಮನೆಗೆ ಓಡಿ ಹೋಗಿ ತಾಯಿಗೆ ವಿಷಯ ತಿಳಿಸಿದ್ದಾನೆ. ಸ್ಥಳಕ್ಕೆ ಬರುವಷ್ಟರಲ್ಲಿ ಬಾಲಕಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಳು ಎಂದು ಢವಳಗಿ ಗ್ರಾಮಸ್ಥರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಲಲಿತಾಳ ತಂದೆ ನಡಗೇರಪ್ಪ ಅನಾರೋಗ್ಯದಿಂದ ಸೆಪ್ಟೆಂಬರ್‌ನಲ್ಲಿ ಮೃತಪಟ್ಟಿದ್ದರು. ಇವರಿಗೆ ಆರು ಮಕ್ಕಳಿದ್ದು, ಈಕೆ ಐದನೇಯವಳು ಎಂದು ಮುದ್ದೇಬಿಹಾಳ ಪೊಲೀಸರು ಹೇಳಿದರು.

ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ
ಸಿಂದಗಿ(ವಿಜಯಪುರ): ತಾಯಿ ತನ್ನಿಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಯರಗಲ್ ಬಿ.ಕೆ ಗ್ರಾಮದಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ನಾಗಮ್ಮ ಬೀರಪ್ಪ ಇದ್ದಲಿ(40) ತನ್ನ ಮಕ್ಕಳಾದ ಪ್ರಜ್ವಲ್ (05) ಹಾಗೂ ರಾಹುಲ್(04) ಈ ಮೂವರ ಶವಗಳು ಗುರುವಾರ ಬಾವಿಯಲ್ಲಿ ಪತ್ತೆಯಾಗಿವೆ. ನಾಗಮ್ಮ ಳಿಗೆ ಹೊಟ್ಟೆ ಕಡಿತ ಇತ್ತು. ಆಸ್ಪತ್ರೆಗೆ ತೋರಿಸಿದರೂ ಕಡಿಮೆಯಾಗಿರಲಿಲ್ಲ. ನೋವು ಸಹಿಸಲಾಗದೇ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆಕೆಯ ಪತಿ ಬೀರಪ್ಪ ಪೋಲಿಸರ ವಿಚಾರಣೆಯಲ್ಲಿ ತಿಳಿಸಿದ್ದಾನೆ ಎಂದು ಗೊತ್ತಾಗಿದೆ.

10 ಕೆ.ಜಿ. ಗಾಂಜಾ ವಶ
ಇಂಡಿ: ತಾಲ್ಲೂಕಿನ ಮಾರ್ಸನಳ್ಳಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ₹ 1.5 ಲಕ್ಷ ಮೌಲ್ಯದ 10 ಕೆ.ಜಿ. ಗಾಂಜಾ, ಇಂಡಿಕಾ ಕಾರನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಳಂದ ತಾಲ್ಲೂಕಿನ ಜಿರೊಳ್ಳಿ ಗ್ರಾಮದ ಸಂತೋಷ ಗೋಪಿನಾಥ ಚವ್ಹಾಣ ಬಂಧಿತ ಆರೋಪಿ ಎಂದು ಅಬಕಾರಿ ನಿರೀಕ್ಷಕ ಜಿ.ಎಸ್.ಪಾಟೀಲ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.