ADVERTISEMENT

ಕೆಪಿಎಸ್‌ಸಿ ವಿರುದ್ಧ ಎಐಡಿವೈಒ ಕಿಡಿ

ವಿಜಯಪುರದ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ; ಮೊಳಗಿದ ಧಿಕ್ಕಾರ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 19:30 IST
Last Updated 10 ಮಾರ್ಚ್ 2018, 19:30 IST
ವಿಜಯಪುರದಲ್ಲಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಕೆಪಿಎಸ್‌ಸಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು
ವಿಜಯಪುರದಲ್ಲಿ ಎಐಡಿವೈಒ ಸಂಘಟನೆ ನೇತೃತ್ವದಲ್ಲಿ ಶುಕ್ರವಾರ ಕೆಪಿಎಸ್‌ಸಿ ವಿರುದ್ಧ ಪ್ರತಿಭಟನೆ ನಡೆಸಲಾಯಿತು   

ವಿಜಯಪುರ: ಕೆಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ಮಿತಿ ಮೀರಿದೆ. ಈಚೆಗಷ್ಟೇ ನಡೆಸಿದ ಎಫ್‌ಡಿಎ, ಎಸ್‌ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಹಿರಂಗಗೊಂಡಿವೆ ಎಂಬ ಮಾಹಿತಿ ಉದ್ಯೋಗಾಕಾಂಕ್ಷಿಗಳಲ್ಲಿ ಆತಂಕ ಹುಟ್ಟಿಸಿದೆ.

ಕೆಪಿಎಸ್‌ಸಿಯಲ್ಲಿನ ಭ್ರಷ್ಟಾಚಾರದ ಕರ್ಮಕಾಂಡಕ್ಕೆ ಇತಿಶ್ರೀ ಹಾಕಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿ ಎಐಡಿವೈಒ ಸಂಘಟನೆ ಕಾರ್ಯಕರ್ತರು, ನಗರದ ಗಾಂಧಿಚೌಕ್‌ನಲ್ಲಿ ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆ ಮೊಳಗಿಸಿದರು.

ನಗರದ ಹುತಾತ್ಮ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಜಾಥಾ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು. ಗಾಂಧಿ ವೃತ್ತದಲ್ಲಿ ಜಮಾಯಿಸಿ, ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.

ADVERTISEMENT

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧಲಿಂಗ ಬಾಗೇವಾಡಿ ಮಾತನಾಡಿ ‘ಕೆಪಿಎಸ್‌ಸಿಯಿಂದ ನಡೆದ ಪ್ರಥಮ ದರ್ಜೆ ಸಹಾಯಕ, ದ್ವಿತೀಯ ದರ್ಜೆ ಸಹಾಯಕ, ಹಾಸ್ಟೆಲ್ ವಾರ್ಡನ್, ಸ್ಟೆನೋಗ್ರಾಫರ್ ಸೇರಿದಂತೆ ಹಲವು ಹುದ್ದೆಗಳಿಗೆ ನಡೆಯುವ ವಿವಿಧ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿ ಗಳಿಂದ ಈಗಾಗಲೇ ಹಣ ಪಡೆದು ಪ್ರಶ್ನೆ ಪತ್ರಿಕೆಯನ್ನು ಬಹಿರಂಗಗೊಳಿಸಲಾಗಿದೆ ಎಂಬ ಆರೋಪಗಳು ಪ್ರಬಲವಾಗಿ ಕೇಳಿ ಬರುತ್ತಿವೆ.

ಈ ಆರೋಪಗಳು ಪ್ರತಿ ಭಾನ್ವಿತ ವಿದ್ಯಾರ್ಥಿಗಳನ್ನು ಚಿಂತಾಕ್ರಾಂತ ವನ್ನಾಗಿಸಿದೆ. ಕೆಲ ಸರ್ಕಾರಿ ಉದ್ಯೋಗಿ ಗಳೂ ಸೇರಿರುವ ಈ ಅಕ್ರಮ ಜಾಲದಲ್ಲಿ ಕಲಬುರ್ಗಿಯಲ್ಲಿ ಪರೀಕ್ಷಾ ಕೇಂದ್ರ ಹೊಂದಿದ್ದ ಕಾಲೇಜುಗಳ ಇಬ್ಬರು ಪ್ರಾಂಶುಪಾಲರು ಭಾಗಿಯಾಗಿದ್ದಾರೆ. ಅಭ್ಯರ್ಥಿಗಳಿಂದ ಲಕ್ಷ, ಲಕ್ಷ ಹಣ ಪಡೆದು ವಾಟ್ಸ್ಆ್ಯಪ್ ಮೂಲಕ ಪ್ರಶ್ನೆಗಳಿಗೆ ಮೈಕ್ರೋ ಇಯರ್ ಫೋನ್ ಮೂಲಕ ಉತ್ತರಗಳನ್ನು ನೀಡಿರುವುದು ಅತ್ಯಂತ ಆತಂಕಕಾರಿಯಾದ’ ವಿಷಯ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಭಾಗವಹಿಸಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸುವುದು, ಅಕ್ರಮ ಮಾಡಿ ನೇಮಕವಾದವರನ್ನು ಸೇವೆಯಿಂದ ವಜಾಗೊಳಿಸುವುದು, ಎಲ್ಲ ರೀತಿಯ ಪರೀಕ್ಷಾ ಅಕ್ರಮ ತಡೆಗಟ್ಟಲು ಸೂಕ್ತ ಕ್ರಮ ತೆಗೆದುಕೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನಾಕಾರರು ಇದೇ ಸಂದರ್ಭ ಹಕ್ಕೊತ್ತಾಯ ಮಂಡಿಸಿದರು.
***
ಕೆಪಿಎಸ್‌ಸಿಯ ಪ್ರಶ್ನೆ ಪತ್ರಿಕೆ ಬಹಿರಂಗ ಪ್ರಕರಣದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗಿಯಾಗಿರುವ ಎಲ್ಲರನ್ನೂ ಬಂಧಿಸಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು – ಸಿದ್ಧಲಿಂಗ ಬಾಗೇವಾಡಿ, ಎಐಡಿವೈಒ ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.