ADVERTISEMENT

ಕೋರಮಾರ ದೇವಸ್ಥಾನ ರಸ್ತೆ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2018, 12:49 IST
Last Updated 6 ಮಾರ್ಚ್ 2018, 12:49 IST
ಪರವಾನಗಿ ಪಡೆಯದೆ ಪಟ್ಟಣದಿಂದ ಕೋರಮಾರ ದೇವಸ್ಥಾನಕ್ಕೆ ತೆರಳು ರಸ್ತೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊತ್ತ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ರೈತರು ಭಾನುವಾರ ಪ್ರತಿಭಟಿಸಿದರು
ಪರವಾನಗಿ ಪಡೆಯದೆ ಪಟ್ಟಣದಿಂದ ಕೋರಮಾರ ದೇವಸ್ಥಾನಕ್ಕೆ ತೆರಳು ರಸ್ತೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ಭಾರ ಹೊತ್ತ ವಾಹನಗಳ ಸಂಚಾರದಿಂದ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ರೈತರು ಭಾನುವಾರ ಪ್ರತಿಭಟಿಸಿದರು   

ಬಸವನಬಾಗೇವಾಡಿ: ಪುರಸಭೆಯ ಪರವಾನಿಗಿ ಪಡೆಯದೆ ಪಟ್ಟಣದಿಂದ ಕೋರಮಾರ ದೇವಸ್ಥಾನಕ್ಕೆ ತೆರಳು ರಸ್ತೆಯಲ್ಲಿ ಪವನ ವಿದ್ಯುತ್‌ ಕಂಪನಿಗೆ ಸೇರಿದ ವಾಹನಗಳ ಓಡಾಟದಿಂದ ರಸ್ತೆಯನ್ನು ಹಾಳು ಮಾಡಲಾಗಿದೆ ಎಂದು ಆರೋಪಿಸಿ ರೈತರು ಭಾನುವಾರ ಪ್ರತಿಭಟನೆ ನಡೆಸಿದರು.

ಪುರಸಭೆ ಸದಸ್ಯ ನೀಲಪ್ಪ ನಾಯಕ ಮಾತನಾಡಿ, ಪಟ್ಟಣದಿಂದ ಕೊರಮಾರ ದೇವಸ್ಥಾನಕ್ಕೆ ತೆರಳುವ 5 ಕಿ.ಮೀ ದೂರದ ರಸ್ತೆಯನ್ನು ಈಚೆಗೆ ಪುರಸಭೆಯಿಂದ ₹ 40 ಲಕ್ಷ ಖರ್ಚು ಮಾಡಿ ಅಭಿವೃದ್ಧಿಪಡಿಸಿದೆ. ಆದರೆ, ಪವನ ವಿದ್ಯುತ್ ಕಂಪನಿ ಪುರಸಭೆಯಿಂದ ಯಾವುದೇ ಅನುಮತಿ ಪಡೆಯದೆ, 12 ಟನ್ ಭಾರ ಹೊತ್ತ ವಾಹನಗಳು ಸಂಚರಿಸಬಹುದಾದ ಸಾಮರ್ಥ್ಯ ಇರುವ  ರಸ್ತೆಯಲ್ಲಿ 80 ಟನ್‌ ಭಾರದ ವಿದ್ಯುತ್ ಕಂಬಗಳನ್ನು ತರುತ್ತಿದ್ದಾರೆ. ಇದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಕಿಡಿಕಾರಿದರು.

‘ಪುರಸಭೆ ಮುಖ್ಯಾಧಿಕಾರಿ ಬಿ.ಎಸೌದಾಗರ ಅವರಿಗೆ ಕಳೆದ ಸಾಮಾನ್ಯಸಭೆಯಲ್ಲಿ ಸದರಿ ಕಂಪನಿಗಳಿಂದ ತೆರಿಗೆ ವಸೂಲಿ ಹಾಗೂ ಪರವಾನಗಿ ಪಡೆಯದವರ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು. ಈವರೆಗೂ ಕ್ರಮ ಕೈಗೊಳ್ಳದಿರುವುದನ್ನು  ನೋಡಿದರೆ ಆಮಿಷಕ್ಕೆ ಒಳಗಾಗಿದ್ದಾರೆ ಎಂಬ ಸಂಶಯ ಮೂಡುತ್ತಿದೆ. ಪಿಎಸ್‌ಐ ಸಹಕಾರ ಕೂಡ ಇದೆ ಎಂಬುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ’ ಆರೋಪಿಸಿದರು.

ADVERTISEMENT

‘ಸುಗಮ ಸಂಚಾರ ದೃಷ್ಟಿಯಿಂದ ಕಂಪನಿಯವರು ಡಾಂಬರೀಕರಣ ಮಾಡಬೇಕು. ಪರವಾನಗಿ ನಡೆಯದೆ ಪುರಸಭೆಗೆ ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿರುವ ಕಂಪನಿಗಳ ವಿರುದ್ಧ ಮಾ.11 ರೊಳಗಾಗಿ ಕ್ರಮ ಕೈಗೊಳ್ಳದಿದ್ದರೆ 12 ರಂದು ಪುರಸಭೆಗೆ ಬೀಗಹಾಕಿ ಪ್ರತಿಭಟನೆ ನಡೆಸಲಾಗುವುದು’ ಎಚ್ಚರಿಸಿದರು.

ಪುರಸಭೆ ಸದಸ್ಯರಾದ ಪ್ರವೀಣ ಪವಾರ, ಶ್ರೀಕಾಂತ ನಾಯಕ, ಪರಶುರಾಮ ಅಡಗಿಮನಿ, ಬಸನಗೌಡ ಪಾಟೀಲ, ಎಸ್.ಆರ್ ಹೂಗಾರ, ಸಂಗಯ್ಯ ನರಸಲಗಿಮಠ, ಗುರುನಗೌಡ ಪಾಟೀಲ, ಸಂಗಪ್ಪ ಸಂಗಮ, ಭೀಮರಾಯ ಸಂಗಮ, ಮಾನಸಿಂಗ್ ರಜಪೂತ,ಜ ಮೀರ ಮೋಮಿನ, ರವಿ ನಾಯಕ, ಲಕ್ಷ್ಮಣ ಅಗಸರ, ಮುತ್ತು ಬಿರಾದಾರ, ಮಲ್ಲಪ್ಪ ಜಮಖಂಡಿ, ನಿಂಗಪ್ಪ ಅಂಗಡಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.