ADVERTISEMENT

ಕ್ರಿಯಾ ಯೋಜನೆ ಪೂರ್ಣಗೊಳಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2012, 7:30 IST
Last Updated 8 ಫೆಬ್ರುವರಿ 2012, 7:30 IST

ಇಂಡಿ: ಬರುವ ಮಾರ್ಚ್ ತಿಂಗಳೊಳಗಾಗಿ ತಮ್ಮ ತಮ್ಮ ಇಲಾಖೆಗಳ ಕ್ರಿಯಾ ಯೋಜನೆಗೆ ಬಿಡುಗಡೆಯಾದ ಹಣವನ್ನು ಭೌತಿಕವಾಗಿ ಮತ್ತು ಆರ್ಥಿಕವಾಗಿ ಖರ್ಚು ಮಾಡಿ ತಮ್ಮ ಇಲಾಖೆಗಳ ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸಬೇಕೆಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಾಲ್ಲೂಕು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದರು.

ಅವರು ಮಂಗಳವಾರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬಂದು ತಹಶೀಲ್ದಾರ ಕಚೇರಿಯ ಸಭಾ ಭವನದಲ್ಲಿ ಕರೆದ ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ತಾಲ್ಲೂಕಿನ ಚಡಚಣ, ಹೋರ್ತಿ, ಇಂಚಗೇರಿ, ಕಾತ್ರಾಳ, ಝಳಕಿ ಮುಂತಾದ ಕಡೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯಯ ಬಗ್ಗೆ ಪರಿಶೀಲನೆ ನಡೆಸಿದ ಅವರು ಈಗಾಗಲೇ 36 ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ  ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಬರುವ ಬೇಸಿಗೆಯಲ್ಲಿ ಇನ್ನೂ ಹೆಚ್ಚಿನ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಯುಂಟಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಕುಡಿಯುವ ನೀರಿನ ಬಗ್ಗೆ ಎಚ್ಚರಿಕೆ ವಹಿಸಲು ಮತ್ತು ಅಗತ್ಯಬಿದ್ದ ಕಡೆ ಕೊಳವೆ ಬಾವಿ ತೋಡಲು ರೂ. 55 ಲಕ್ಷ  ಬಿಡುಗಡೆ ಮಾಡಲಾಗಿದೆ. ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣವನ್ನು ಬಿಡುಗಡೆ ಮಾಡಲಾಗುವದು ಎಂದು ತಿಳಿಸಿದರು.

ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ಹಣವಿದೆ. ಕುಡಿಯುವ ನೀರಿಗಾಗಿ ಹಣ ಖರ್ಚು ಮಾಡಲು ಯಾವುದೇ ಆತಂಕವಿಲ್ಲ. ಯಾವದೇ ಗ್ರಾಮ ಪಂಚಾಯಿತಿಯಲ್ಲಿ ಹಣವಿಲ್ಲದಿದ್ದರೆ, ಹಣವಿದ್ದ ಗ್ರಾಮ ಪಂಚಾಯಿತಿಯಿಂದ ಹಣ ಪಡೆದುಕೊಳ್ಳಲು ಅವಕಾಶವಿದೆ. ಅಂತಹ ಗ್ರಾಮ ಪಂಚಾಯಿತಿಗಳು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ತಿಳಿಸಿದರು.

ಎನ್‌ಆರ್‌ಇಜಿ ಯೋಜನೆಯ ಅಡಿಯಲ್ಲಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ ರೂ. 20 ಕೋಟಿಗಳನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಇಲ್ಲಿಯವರೆಗೆ ಕೇವಲ ರೂ. 3.48 ಕೋಟಿಗಳನ್ನು ಮಾತ್ರ ಖರ್ಚು ಮಾಡಲಾಗಿದೆ. ಇದನ್ನು ಸಮರ್ಥವಾಗಿ ಬಳಸಿಕೊಳ್ಳಬೇಕೆಂದು ಸೂಚನೆ ನೀಡಿದರು.

ವೃದ್ಧಾಪ್ಯ, ಅಂಗವಿಕಲ, ವಿಧವಾ ವೇತನ ಮತ್ತು ಸಂಧ್ಯಾ ಸುರಕ್ಷಾ ಯೋಜನೆಯ ಅಡಿಯಲ್ಲಿ ಇರುವ ಅರ್ಹ ಫಲಾನುಭವಿಗಳನ್ನು ಈ ಕೂಡಲೇ ಮಾಸಾಶನ ಪ್ರಾರಂಭಿಸ ಲಾಗುವುದು. ಹೊಸ ಅರ್ಜಿಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಭರ್ತಿ ಮಾಡಿ ಕೊಡಬೇಕೆಂದು ತಿಳಿಸಿದರು.

ವಿದ್ಯಾರ್ಥಿಗಳ ವಸತಿ ನಿಲಯಗಳಲ್ಲಿ ಕುಡಿಯುವ ನೀರು ಪೂರೈಕೆ, ಅಂಗನವಾಡಿ ಕೇಂದ್ರಗಳಲ್ಲಿಯ ಮಕ್ಕಳಿಗೆ ಅಪೌಷ್ಟಿಕತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಿದರು.

ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎಸ್. ಹತ್ತಳ್ಳಿ, ತಾಲ್ಲೂಕಿನ ಎಲ್ಲಾ ಶಾಲೆಗಳಿಗೆ ಶೌಚಾಲಯದ ವ್ಯವಸ್ಥೆಯಿದೆ. ಬಸವೇಶ್ವರ ವಸ್ತಿ ಶಾಲೆಗೆ ಮಾತ್ರ ಸ್ಥಳವಿಲ್ಲದ ಕಾರಣ ಶೌಚಾಲಯವಿಲ್ಲ, ಇಷ್ಟರಲ್ಲೇ ಮಾಡಲಾಗುವುದು ಎಂದರು.
 
ಚಿಕ್ಕ ನೀರಾವರಿ ಇಲಾಖೆಯಿಂದ 6 ಕೆರೆಗಳ ಹೂಳೆತ್ತುವ ಕೆಲಸ ಮುಗಿದಿದೆ, ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದಿಂದ 37 ಕೆರೆಗಳ ಹೂಳೆತ್ತುವ ಕೆಲಸ ಮುಗಿಸಲಾಗಿದೆ ಎಂದು ಎಂಜಿನಿಯರ್ ಕೆ.ಎಸ್.ಬಿರಾದಾರ ಮತ್ತು ಎಸ್.ಜಿ.ಕಗ್ಗೋಡ ತಿಳಿಸಿದರು.

ಸಭೆಯಲ್ಲಿ ಕಂದಾಯ ಉಪ ವಿಭಾಗಾಧಿಕಾರಿ ಡಾ, ಅಶೋಕ ದುಡಗುಂಟಿ, ತಹಶೀಲ್ದಾರ ಜಿ.ಎಲ್. ಮೇತ್ರಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಂ.ಎ. ಪಾಟೀಲ, ಸಿಇಒ ಸಿ.ಬಿ.ಕುಂಬಾರ, ಕೃಷಿ ಅಧಿಕಾರಿ ಪ್ರಕಾಶ ಚವ್ಹಾಣ, ತೋಟಗಾರಿಕಾ ಇಲಾಖೆಯ ಅಧಿಕಾರಿ ಎಚ್.ಎಸ್. ಪಾಟೀಲ, ಸಹಾಯಕ ನಿಬಂಧಕ ಕಲ್ಲಪ್ಪ ಓಬಣ್ಣಗೋಳ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕೆ.ಕೆ. ಚವ್ಹಾಣ, ಎಂಜಿನಿಯರ್ ಕೆ.ಎಸ್. ಬಿರಾದಾರ ಉಪಸ್ಥಿತರಿದ್ದರು. ತಹಸೀಲ್ದಾರ ಜಿ.ಎಲ್. ಮೇತ್ರಿ ಸ್ವಾಗತಿಸಿದರು. ಎಂ.ಎ.ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.