ADVERTISEMENT

ಕ್ರೀಡಾಂಗಣ ನಿರ್ಮಾಣಕ್ಕೆ ಗುಡಿಸಲು ನಿವಾಸಿಗಳ ವಿರೋಧ:ಧರಣಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2012, 5:15 IST
Last Updated 19 ಅಕ್ಟೋಬರ್ 2012, 5:15 IST
ಕ್ರೀಡಾಂಗಣ ನಿರ್ಮಾಣಕ್ಕೆ ಗುಡಿಸಲು ನಿವಾಸಿಗಳ ವಿರೋಧ:ಧರಣಿ
ಕ್ರೀಡಾಂಗಣ ನಿರ್ಮಾಣಕ್ಕೆ ಗುಡಿಸಲು ನಿವಾಸಿಗಳ ವಿರೋಧ:ಧರಣಿ   

ಸಿಂದಗಿ: ಪಟ್ಟಣದ ವಿದ್ಯಾನಗರ ಜೋಪಡಿಪಟ್ಟಿ ಪ್ರದೇಶದಲ್ಲಿ ಸರ್ಕಾರ ನಿರ್ಮಾಣ ಮಾಡಬೇಕೆಂದಿರುವ ತಾಲ್ಲೂಕು ಕ್ರೀಡಾಂಗಣವನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿ ನಿವಾಸಿಗಳು ಕರ್ನಾಟಕ ಪ್ರಾಂತ ರೈತ ಸಂಘ, ಜನವಾದಿ ಮಹಿಳಾ ಸಂಘ ಹಾಗೂ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್ ನೇತೃತ್ವದಲ್ಲಿ ಗುರುವಾರ ಸ್ಥಳೀಯ ಮಿನಿವಿಧಾನಸೌಧ ಮುಖ್ಯದ್ವಾರದ ಬಳಿ ಶಹಾಪುರ ಮುಖ್ಯ ರಸ್ತೆಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಪ್ರಾರಂಭಿಸಿದರು.

ಪ್ರತಿಭಟನಾಕಾರರು ಮೊದಲು ನಿಗದಿಪಡಿಸಿ ದಂತೆ ಮಿನಿವಿಧಾನಸೌಧ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಯಲಿಲ್ಲ. ತಾಲ್ಲೂಕು ದಂಡಾಧಿಕಾರಿ ಡಾ.ಶಂಕ್ರಣ್ಣ ವಣಕ್ಯಾಳ ಇದಕ್ಕೆ ಅನುಮತಿ ನೀಡಲಿಲ್ಲ. ಕಚೇರಿ ಆವರಣದಲ್ಲಿ ಅನಿರ್ದಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವುದರಿಂದ ಮಿನಿ ವಿಧಾನಸೌಧದ ವಿವಿಧ ಇಲಾಖೆಗಳಿಗೆ ಕಾರ್ಯ ನಿಮಿತ್ತ ಆಗಮಿಸುವ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಸಿಆರ್‌ಪಿ 133 ಕಲಂಯನ್ವಯ ಪ್ರತಿಭಟನಕಾರರಿಗೆ ಧರಣಿ ನಡೆಸಲು ಅನುಮತಿ ನೀಡಿಲ್ಲ ಎಂದು ಅವರು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದರು.

ಧರಣಿನಿರತ ನಿವಾಸಿಗಳು ಅಲ್ಲಿಯೇ ರಸ್ತೆಯಲ್ಲಿಯೇ ಒಲೆ ಹೊತ್ತಿಸಿ ಅನ್ನ ಸಾರು ಸಿದ್ಧಪಡಿಸಿ ಊಟ ಮಾಡಿದರು.
ರಸ್ತೆಯಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿರುವುದರಿಂದ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಓಡಾಟಕ್ಕೆ ತೊಂದರೆಯಾಯಿತು.

ಬೃಹತ್ ಮೆರವಣಿಗೆ: ಇಲ್ಲಿಯ ಡಾ.ಅಂಬೇಡ್ಕರ್ ವೃತ್ತದಿಂದ ನೂರಾರು ಮಹಿಳಾ ನಿವಾಸಿಗಳನ್ನೊಳಗೊಂಡು ಪ್ರತಿಭಟನಾ ಮೆರವಣಿಗೆ ಪ್ರಾರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಾಗಿ ನೇರವಾಗಿ ಪುರಸಭೆಗೆ ತಲುಪಿತು. ಅಲ್ಲಿ  ಕೆಲ ಕಾಲ ಧರಣಿ ನಡೆಸಿದರು. ನಂತರ ಮಿನಿವಿಧಾನಸೌಧಕ್ಕೆ ತಲುಪಿ ಇನ್ನೇನು ಆವರಣದಲ್ಲಿ ನುಗ್ಗಲು ಪ್ರಯತ್ನ ನಡೆಸುತ್ತಿದ್ದಂತೆ ಅಲ್ಲಿ ಕಾವಲಿನಲ್ಲಿ ನಿಂತಿದ್ದ ಪೊಲೀಸ್ ಪಡೆ ಅವರನ್ನು ತಡೆದರು.

ಹೀಗಾಗಿ ಪ್ರತಿಭಟನಕಾರರು ಕೆಲ ಕಾಲ ಮುಖ್ಯರಸ್ತೆಯಲ್ಲಿ ನೆಲದ ಮೇಲೆ ಕುಳಿತು ಘೋಷಣೆ ಕೂಗಿದರು. ಇದೇ ಸಂದರ್ಭದಲ್ಲಿ ಜನವಾದಿ ಮಹಿಳಾ ಸಂಘದ ಸುರೇಖಾ ರಜಪೂತ, ಕಮ್ಯುನಿಸ್ಟ್ ಪಾರ್ಟಿ ಪ್ರಮುಖ ವಿ.ಎಂ. ಸೊನ್ನದ, ಕುಮಾರ ನಾಯ್ಕ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಅಣ್ಣಾರಾಯ ಈಳಗೇರ ಮಾತನಾಡಿ, ವಿದ್ಯಾನಗರ ಜೋಪಡಿಪಟ್ಟಿ ಪ್ರದೇಶದಲ್ಲಿನ ಕ್ರೀಡಾಂಗಣವನ್ನು ಬೇರೆಡೆ ಸ್ಥಳಾಂತರಿಸಬೇಕು. ಅಲ್ಲಿನ ನಿವಾಸಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

ಹಕ್ಕುಪತ್ರ ದೊರೆಯುವ ತನಕ ಇಲ್ಲಿಂದ ಕದಲುವದಿಲ್ಲ. ಬೇಕಿದ್ದರೆ ಫೋಲಿಸರು ನಮ್ಮನ್ನು ಬಂಧಿಸಲಿ, ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಲಿ, ನಾವು ಪ್ರಾಣ ತ್ಯಾಗಕ್ಕೂ ಸಿದ್ಧ ಎಂದರು.  ಧರಣಿಯಲ್ಲಿ ಡಿವೈಎಫ್‌ಐ ತಾಲ್ಲೂಕು ಅಧ್ಯಕ್ಷ ಅಬ್ದುಲರಜಾಕ ಸಿಂದಗಿಕರ, ಮಹಾಂತೇಶ ನಡುವಿನಕೇರಿ, ನಾನಾಗೌಡ ಪಾಟೀಲ, ಬಾಬು ಕೇಸರಿ, ಸಾವಿತ್ರಿಬಾಯಿ ಈಳಗೇರ, ಮಹಾದೇವ ಪೂಜಾರಿ, ರಾಜೂ ತಳವಾರ, ಶಕೀಲ ವಾಲೀಕಾರ, ರಫೀಕ್ ಖಾನಗೌಡ, ಮಹಾನಂದ ಕುಂಬಾರ, ಜಮೀರ್ ವಾಲೀಕಾರ, ದೀಪಕ ಚವ್ಹಾಣ, ಸುನೀಲ ರಾಠೋಡ ಇಂದ್ರಾಬಾಯಿ ಶಂಬೇವಾಡ, ಯಮುನಾಬಾಯಿ ಪೂಜಾರಿ, ಮೋದಿನ ಮುಲ್ಲಾ ಮುಂತಾದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.