ADVERTISEMENT

ಗುತ್ತಿಗೆ ವಸೂಲಿಗೆ ಠರಾವಿನ ಮುದ್ರೆ!

ತುರ್ತು ಸಭೆ ಬಹಿಷ್ಕರಿಸಿದ ರವೀಂದ್ರ ಲೋಣಿ; 14ನೇ ಹಣಕಾಸು ಆಯೋಗದ ಅನುದಾನಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 9:09 IST
Last Updated 19 ಜೂನ್ 2018, 9:09 IST
ವಿಜಯಪುರದ ಜಲನಗರದಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ತುರ್ತು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಬಿಜೆಪಿ ಸದಸ್ಯ ರವೀಂದ್ರ ಲೋಣಿ
ವಿಜಯಪುರದ ಜಲನಗರದಲ್ಲಿನ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ತುರ್ತು ಸಭೆಯನ್ನು ಬಹಿಷ್ಕರಿಸಿ ಹೊರ ನಡೆದ ಬಿಜೆಪಿ ಸದಸ್ಯ ರವೀಂದ್ರ ಲೋಣಿ   

ವಿಜಯಪುರ:‌ ‘ಭಾನುವಾರದ ಸಂತೆಯಲ್ಲಿ ಶುಲ್ಕ ವಸೂಲಿ’ ಮಾಡುವ ಗುತ್ತಿಗೆಯನ್ನು ಮೂರು ವರ್ಷದ ಅವಧಿಯವರೆಗೂ ಮುಂದುವರೆಸಲು ಬೆರಳೆಣಿಕೆ ಸದಸ್ಯರ ಅಪಸ್ವರ, ಬಿಜೆಪಿ ಸದಸ್ಯ ರವೀಂದ್ರ ಲೋಣಿ ಸಭಾತ್ಯಾಗದ ನಡುವೆಯೂ ಇಲ್ಲಿನ ಜಲನಗರದಲ್ಲಿರುವ ಮಹಾನಗರ ಪಾಲಿಕೆ ಕಚೇರಿಯಲ್ಲಿ ಸೋಮವಾರ ನಡೆದ ತುರ್ತು ಸಭೆ ಠರಾವು ಅಂಗೀಕರಿಸಿತು.

ಸಭೆ ಆರಂಭಗೊಳ್ಳುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯ ವಿಜಯಕುಮಾರ ಮಂಗಳವೇಡೆ ಆಕ್ಷೇಪ ವ್ಯಕ್ತಪಡಿಸಿದರು. ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲಿಕ್ಕಾಗಿಯೇ ತುರ್ತು ಸಭೆ ಕರೆಯುವ ಅವಶ್ಯಕತೆ ಏನಿತ್ತು ಎಂದು ಏರು ದನಿಯಲ್ಲಿ ಪ್ರಶ್ನಿಸಿದರು.

‘ಪಾಲಿಕೆ ಆಡಳಿತಕ್ಕೆ ಸಂಬಂಧಿಸಿದಂತೆ ಏನನ್ನಾದರೂ ಪ್ರಶ್ನಿಸಲು ಮುಂದಾದರೇ ದಕ್ಷ ಆಡಳಿತಗಾರರಿಗೆ ಕಿರಿಕಿರಿ ಮಾಡುತ್ತೀರಿ ಎಂಬ ಅಪವಾದ ಕೇಳಬೇಕು. ಬಜೆಟ್‌ ಖಡಕ್‌ ಮಾಡಿಕೊಂಡ ಕಮಿಷನರ್‌ ನಮ್ಮ ಸಾಮಾನ್ಯ ಸಭೆಗೆ ಹಾಜರಾಗುವುದು ಯಾವಾಗ? ಜನರಿಗೆ ನಾವು ಏನು ಹೇಳಬೇಕು?’ ಎಂದು ಮಂಗಳವೇಡೆ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಮಂಗಳವೇಡೆ ಆರೋಪಗಳಿಗೆ ದನಿಗೂಡಿಸಿದ ಬಿಜೆಪಿ ಸದಸ್ಯ ರವೀಂದ್ರ ಲೋಣಿ ‘ಅಧಿಕಾರಿಗಳೇ ಚುನಾಯಿತ ಜನಪ್ರತಿನಿಧಿಗಳ ವಿರುದ್ಧ ದಬ್ಬಾಳಿಕೆಯ ಆಳ್ವಿಕೆ ನಡೆಸುವ ಸಂಸ್ಕೃತಿ ವಿಜಯಪುರದಲ್ಲಿದೆ. ನಮ್ಮ ನಾಯಕರಾದ ಮೇಯರ್‌ ಸಹ ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ಲೋಣಿ ದೂರಿಗೆ ಪ್ರತಿಕ್ರಿಯಿಸಿದ ಮೇಯರ್‌ ಸಂಗೀತಾ ಪೋಳ, ‘ಸಭೆ ಕರೆಯದಿರುವುದಕ್ಕೆ ಇರುವ ತೊಂದರೆಗಳನ್ನು ನಿಮಗೆ ಹೇಳಲಿಕ್ಕಾಗಲ್ಲ. ಯಾವೊಬ್ಬ ಸದಸ್ಯರು ಇದೂವರೆಗೂ ಇಂತಹ ವಿಷಯವಿದೆ. ಚರ್ಚಿಸಬೇಕು. ಸಭೆ ಕರೆಯಿರಿ ಎಂದು ನನಗೆ ಹೇಳಿಲ್ಲ. ಪತ್ರವನ್ನೂ ಕೊಟ್ಟಿಲ್ಲ’ ಎಂದು ಹೇಳಿದರು.

ಮೇಯರ್ ಉತ್ತರಕ್ಕೆ ಗರಂ ಆದ ಲೋಣಿ, ‘ನಾವು ನಿಮ್ಮ ಮನೆಯ ಸಮಸ್ಯೆ ಕೇಳ್ತಿಲ್ಲ. ನಗರದ ಹಿತ ದೃಷ್ಟಿಯಿಂದ ಸಭೆ ಕರೆಯದಿರುವುದು ಅಕ್ಷಮ್ಯ. ತಪ್ಪು ಎಸಗಿದ್ದೀರಿ. ನೀವೂ ಸಹ ಎಂದೆಂದೂ ಸಾಮಾನ್ಯ ಸಭೆ ಕರೆಯುವ ಸಂಬಂಧ ಸದಸ್ಯರೊಟ್ಟಿಗೆ ಚರ್ಚಿಸಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಇದೀಗ ವಿಜಯಪುರ ನಗರಕ್ಕೆ ನಷ್ಟ ಉಂಟು ಮಾಡಲು ತುರ್ತು ಸಭೆ ಕರೆದಿದ್ದೀರಿ. ವಿಜಯಪುರಿಗರಿಗೆ ನಷ್ಟ ಉಂಟು ಮಾಡುತ್ತಿರುವ ನಿಮ್ಮ ವಿರುದ್ಧ ಕ್ರಮ ಜರುಗಿಸಿ ಎಂದು ಏಕೆ ದೂರು ಕೊಡಬಾರದು? ಮೂರು ವರ್ಷ ಗುತ್ತಿಗೆ ಅವಧಿಯನ್ನು ವಿಸ್ತರಿಸುವುದಕ್ಕೆ ನನ್ನ ವಿರೋಧವಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿ, ಸಭೆ ಬಹಿಷ್ಕರಿಸಿ ಹೊರ ನಡೆದರು.

ಈ ಸಂದರ್ಭ ಕೆಲ ಸದಸ್ಯರು ಲೋಣಿ ಮನವೊಲಿಸಲು ಮುಂದಾದರು. ವಿಜಯಪುರ ನಗರಕ್ಕೆ ನಷ್ಟವುಂಟು ಮಾಡುವ ಸಭೆಯಲ್ಲಿ ನಾನು ಹಾಜರಿರಲ್ಲ ಎಂದು ಹೊರಟರು. ಈ ಸಂದರ್ಭ ಬಿಜೆಪಿ ಸದಸ್ಯ ಪರಶುರಾಮ ರಜಪೂತ ‘ಹೋಗೋರೋ ಹೋಗಲಿ ಬಿಡ್ರೀ’ ಎಂದಿದ್ದಕ್ಕೆ, ಇಬ್ಬರ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ನಡೆಯಿತು.

ಸಭೆಯಲ್ಲಿ ಒಬ್ಬೊಬ್ರೇ ಮಾತನಾಡಿ. ಎಲ್ಲರಿಗೂ ಉತ್ತರಿಸುವೆ. ಒಮ್ಮೆಗೆ ನಿಂತು ಎಲ್ಲರೂ ಮಾತನಾಡಿದರೇ ನೀವು ಏನು ಹೇಳಿದ್ದೀರಿ ಎಂಬುದೇ ತಿಳಿಯಲ್ಲ
ಸಂಗೀತಾ ಪೋಳ, ಮೇಯರ್‌

ವಿಜಯಪುರ ಮಹಾನಗರ ಪಾಲಿಕೆ ಆರ್ಥಿಕ ಸಂಕಷ್ಟದಲ್ಲಿದೆ. ಈ ಹಿಂದಿನ ಸಭೆಯಲ್ಲಿ ನೀಡಿದ್ದ ಭರವಸೆಗಳೇ ಈಡೇರಿಲ್ಲ. ಕಾಯಿಪಲ್ಲೆ ಬಜಾರ್‌ನಲ್ಲಿ ದರ ಪಟ್ಟಿ ನಮೂದಿಸಿಲ್ಲ
ರವೀಂದ್ರ ಲೋಣಿ, ಬಿಜೆಪಿ ಸದಸ್ಯ

ಅನುದಾನ ವಾಪಸ್‌ಗೆ ಆಗ್ರಹ

ಪಾಲಿಕೆಗೆ ಮಂಜೂರಾಗಿದ್ದ 14ನೇ ಹಣಕಾಸು ಆಯೋಗದಲ್ಲಿನ ₹15.30 ಕೋಟಿ ಅನುದಾನವನ್ನು ಸಾಮಾನ್ಯ ಸಭೆಯ ಅನುಮತಿ ಪಡೆಯದೆ ಮಾಸ್ಟರ್‌ ಪ್ಲಾನ್‌ಗೆ ಬಳಸಿಕೊಳ್ಳುವಂತೆ ಜಿಲ್ಲಾಧಿಕಾರಿಗೆ ಕ್ರಿಯಾ ಯೋಜನೆ ಸಲ್ಲಿಸಿದ್ದರು. ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರುವುದಕ್ಕೆ ಕಾಂಗ್ರೆಸ್‌ನ ಸಜ್ಜಾದೆ ಪೀರಾ ಮುಶ್ರೀಫ್‌, ಆನಂದ ಮಂಗಳವೇಡೆ, ಪ್ರೇಮಸಿಂಗ್‌ ಚವ್ಹಾಣ, ಬಿಜೆಪಿಯ ಗೋಪಾಲ ಘಟಕಾಂಬಳೆ, ಪ್ರಕಾಶ ಮಿರ್ಜಿ, ಶಂಕರ ಕುಂಬಾರ ತೀವ್ರ ವಿರೋಧ ವ್ಯಕ್ತಪಡಿಸಿದರು.

ತಮ್ಮ ನಿಲುವಿನ ಪರ ಮೇಯರ್‌, ಉಪ ಮೇಯರ್‌ ರಾಜೇಶ ದೇವಗಿರಿ ಸಮರ್ಥಿಸಿಕೊಂಡರೇ, ಬಿಜೆಪಿ ಸದಸ್ಯರಾದ ಪರಶುರಾಮ ರಜಪೂತ, ರಾಹುಲ ಜಾಧವ ಸಹ ಮಾಸ್ಟರ್‌ ಪ್ಲಾನ್‌ಗೆ ಅನುದಾನ ಮೀಸಲಿಡಲು ಒಪ್ಪಿಗೆಯಿದೆ ಎಂದು ಸಮ್ಮತಿ ಸೂಚಿಸಿದರು.

ನಮ್ಮ ಬಡಾವಣೆಯಲ್ಲಿ ಮೊದಲ ಮಳೆಗೆ ರಸ್ತೆಗಳು ಹಾಳಾಗಿವೆ. ಇನ್ನಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕಿದೆ. ಮಾಸ್ಟರ್ ಪ್ಲಾನ್ ಕಾಮಗಾರಿ ನಡೆಸಲು ನಮ್ಮ ವಿರೋಧವಿಲ್ಲ. ಬೆಂಬಲವಿದೆ. ಅದಕ್ಕೂ ಮೊದಲು ನಮ್ಮ ವಾರ್ಡ್‌ನ ಜನರ ಸಮಸ್ಯೆಗೆ ನಾವು ಸ್ಪಂದಿಸಬೇಕಿದೆ. ಅನುದಾನ ಹಂಚಿ. ವಾರ್ಡ್‌ನಲ್ಲಿ ಕೆಲಸ ಮಾಡೋರು ಮಾಡಲಿ. ಬೇಡ ಎನ್ನುವವರು ಮಾಸ್ಟರ್‌ ಪ್ಲಾನ್‌ಗಾಗಿ ಅನುದಾನ ಬಿಟ್ಟುಕೊಡಲಿ ಎಂದು ಸದಸ್ಯರಾದ ಮಿರ್ಜಿ, ಗೋಪಾಲ, ಶಂಕರ ಕುಂಬಾರ ಆಗ್ರಹಿಸಿದರು.

ಸಭೆಯಲ್ಲಿ ಈ ವಿಷಯ ತೀವ್ರ ಚರ್ಚೆಗೀಡಾಗಿದ್ದರಿಂದ ಮೇಯರ್‌ ಮುಂದಿನ ಸಭೆಯಲ್ಲಿ ವಿಸ್ತೃತವಾಗಿ ಚರ್ಚಿಸೋಣ ಎಂದು ಹೇಳಿ ಸಭೆ ಮುಕ್ತಾಯಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.