ADVERTISEMENT

ಗೊಳಸಂಗಿ ಪ್ರಾ.ಆ. ಕೇಂದ್ರದ ಆಂಬುಲನ್ಸ್‌ಗೆ ಕೆಲಸವಿಲ್ಲ...

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 8:55 IST
Last Updated 28 ಅಕ್ಟೋಬರ್ 2011, 8:55 IST
ಗೊಳಸಂಗಿ ಪ್ರಾ.ಆ. ಕೇಂದ್ರದ ಆಂಬುಲನ್ಸ್‌ಗೆ ಕೆಲಸವಿಲ್ಲ...
ಗೊಳಸಂಗಿ ಪ್ರಾ.ಆ. ಕೇಂದ್ರದ ಆಂಬುಲನ್ಸ್‌ಗೆ ಕೆಲಸವಿಲ್ಲ...   

ಆಲಮಟ್ಟಿ: ಬಡರೋಗಿಗಳ ಪಾಲಿಗೆ ಆಸರೆಯಾಗಲಿ ಎಂಬ ಸದುದ್ದೇಶದಿಂದ ಸರ್ಕಾರ ಆರೋಗ್ಯ ಇಲಾಖೆಗೆ ಹತ್ತಾರು ಸವಲತ್ತುಗಳನ್ನು ನೀಡುತ್ತಿದ್ದರೂ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸದೇ ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲನ್ಸ್  ಜೀವಂತ ಸಾಕ್ಷಿಯಾಗಿ ಕಂಗೊಳಿಸುತ್ತಿದೆ.

ರಾ.ಹೆ 13 ಕ್ಕೆ ಹೊಂದಿಕೊಂಡಿರುವ ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರಸ್ತೆ ಅಪಘಾತ, ಹೆರಿಗೆ, ತುರ್ತು ಆಘಾತ ಸಂದರ್ಭದಲ್ಲಿ ಸಹಕಾರಿಯಾಗಿರಬೇಕೆಂದು ಸರ್ಕಾರ ಆಂಬುಲನ್ಸ್‌ನ್ನು ನೀಡಿರುವುದು ಶ್ಲಾಘನೀಯ.

ಆದರೆ ಆಂಬುಲನ್ಸ್ ಬಂದು ಈಗಾಗಲೇ ಹಲವಾರು ತಿಂಗಳುಗಳೇ ಗತಿಸಿವೆ. ಆದರೂ ಅದಕ್ಕೊಬ್ಬ ಚಾಲಕನನ್ನು ನೇಮಿಸುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ ತೋರಿದ್ದು ವಿಷಾದದ ಸಂಗತಿ. ನಮ್ಮೂರಿಗೂ ಆಂಬುಲನ್ಸ್ ಬಂತು ಎಂದು ಗ್ರಾಮಸ್ಥರು ನಿಟ್ಟುಸಿರು ಬಿಡುವುದನ್ನು ಬಿಟ್ಟರೆ ಅದು ಉಪಯೋಗಕ್ಕೆ ಬಾರದೇ ನಿಂತಿರುವುದು ಗ್ರಾಮಸ್ಥರಲ್ಲಿ ನಿಜಕ್ಕೂ ರೋಷಕ್ಕೆ ಕಾರಣವಾಗಿದೆ.

ರಾ.ಹೆ 13 ಕ್ಕೆ ಹೊಂದಿಕೊಂಡಿರುವ ಇಲ್ಲಿಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸುವ ಕುರಿತು ಈಗಾಗಲೇ ಹಲವಾರು ಬಾರಿ ಬೇಡಿಕೆಯನ್ನಿಟ್ಟಿದ್ದರೂ ಅದು ಇದುವರೆಗೂ ಕಾರ್ಯರೂಪಕ್ಕೆ ಬಾರದೇ ಇರುವುದು ಗ್ರಾಮಸ್ಥರ ದುರ್ದೈವ.

24x7 ಗೆ ಬದಲಾವಣೆ
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ (ಎನ್‌ಆರ್‌ಎಚ್‌ಎಮ್) ಯೋಜನೆಯಡಿ ಗೊಳಸಂಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಾರಿಯಲ್ಲಿದ್ದ  ಸೇವೆಯನ್ನು ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಬೇಕೆನ್ನುವ ಹುನ್ನಾರ ನಡೆದಿದೆ. 

 ಅದಲ್ಲದೇ ಸೂಕ್ತ ಸಿಬ್ಬಂದಿ ಇಲ್ಲದೇ ಆಸ್ಪತ್ರೆಯ ಕಾರ್ಯವನ್ನು ಸಮರ್ಪಕವಾಗಿ ನಡೆಸಲು ಸಾಧ್ಯವಾಗುತ್ತಿಲ್ಲ.
 ಈ ಮೊದಲಿದ್ದ ಮೂವರು ನರ್ಸ್‌ಗಳ (ಶುಶ್ರೂಷಕಿಯರನ್ನು) ಬೇರೆಡೆಗೆ ವರ್ಗಾಯಿಸಲಾಗಿದ್ದು ಕೂಡಲೇ ಆ ಸ್ಥಾನಕ್ಕೆ ಬೇರೆಯವರನ್ನು ನೇಮಿಸದಿದ್ದರೆ ಗ್ರಾಮಸ್ಥರೆಲ್ಲಾ ಸೇರಿ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮದ ಮುಖಂಡರು  ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.