ADVERTISEMENT

‘ಚಲಾ ಬೆಂಗಳೂರು, ಕೋಲಾರ’

ವಿನೂತನ ಪ್ರತಿಭಟನೆ; ಬಸ್ಸಿನ ಮೆರವಣಿಗೆ ಮಾಡಿದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 7:42 IST
Last Updated 31 ಮಾರ್ಚ್ 2018, 7:42 IST
‘ಚಲಾ ಬೆಂಗಳೂರು, ಕೋಲಾರ’
‘ಚಲಾ ಬೆಂಗಳೂರು, ಕೋಲಾರ’   

ಮುದ್ದೇಬಿಹಾಳ: ‘ಪಟ್ಟಣದಿಂದ ಬೆಂಗಳೂರು ಮಾರ್ಗವಾಗಿ ಕೋಲಾರಕ್ಕೆ ತೆರಳಬೇಕಿದ್ದ ಕೋಲಾರ ಡಿಪೊಗೆ ಸೇರಿದ ಬಸ್ಸನ್ನು ಮುದ್ದೇಬಿಹಾಳದ ಡಿಪೊ ಒಳಗಡೆ ಅಧಿಕಾರಿಗಳು ನಿಲ್ಲಿಸಿದ್ದನ್ನು ಅರಿತ ಸಾರ್ವಜನಿಕರು ಬಸ್ಸನ್ನು ಊರ ತುಂಬ ಮೆರವಣಿಗೆ ಮಾಡಿ, ಪೂಜೆ ಮಾಡಿ ಶುಕ್ರವಾರ ಸಂಜೆ ಕೋಲಾರಕ್ಕೆ ಬೀಳ್ಕೊಟ್ಟರು.

ತಾಲ್ಲೂಕಿನ ವಿವಿಧ ಗ್ರಾಮಗಳ ಸುಮಾರು 300ಕ್ಕೂ ಹೆಚ್ಚು ಜನ ಕಾರ್ಮಿಕರು ಕೋಲಾರದ ಬಂಗಾರದ ಗಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅಲ್ಲಿಗೆ ಹೋಗಲು, ಬರಲು ಅನುಕೂಲವಾಗಲೆಂದು ಪಟ್ಟಣದಿಂದ ಕೋಲಾರ ಗೋಲ್ಡ್ ಫೀಲ್ಡ್‌ (ಕೆ.ಜಿ.ಎಫ್)ಗೆ ಬೆಂಗಳೂರು ಮಾರ್ಗವಾಗಿ ಬಸ್ಸು ಬಿಡುವಂತೆ 30ಕ್ಕೂ ಹೆಚ್ಚು ಸಲ ಅರ್ಜಿಗಳನ್ನು ನಗರಾಭಿವೃದ್ಧಿ ಯುವ ಹೋರಾಟ ವೇದಿಕೆ ಮುದ್ದೇಬಿಹಾಳ ಘಟಕ ವ್ಯವಸ್ಥಾಪಕರಿಗೆ ನೀಡಿತ್ತು.

ಆದರೆ, ಕೋಲಾರಕ್ಕೆ ಬಸ್ಸು ಬಿಡದೇ ಇದ್ದುದರಿಂದ ಅಲ್ಲಿಂದಲೇ ಒಂದು ಸಾರಿಗೆ ಬಸ್ ಬಿಡುವಂತೆ ವೇದಿಕೆಯ ಸಂಚಾಲಕ ಬಸಯ್ಯ ನಂದಿಕೇಶ್ವರಮಠ ಅಲ್ಲಿಯ ಘಟಕ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಅಲ್ಲಿಯವರು ‘ಕೋಲಾರ–ಬೆಂಗಳೂರು–ಮುದ್ದೇಬಿಹಾಳ’ ಹೊಸ ಬಸ್ ಬಿಟ್ಟಿದ್ದರು. ಆದರೆ, ಇದಕ್ಕೆ ಇಲ್ಲಿಯವರು ಅನುಮತಿ ನೀಡದೇ ಸತಾಯಿಸಿದ್ದೂ ಅಲ್ಲದೇ ಬಸ್ಸನ್ನು ಮೂರು ದಿನಗಳಿಂದ ಒಳಗೇ ನಿಲ್ಲುವಂತೆ ದಿಗ್ಬಂಧನ ಹಾಕಿದ್ದರು.

ADVERTISEMENT

ಬಸ್ಸು ಹೊರಗೆ ಬಾರದೇ ಒಳಗೇ ಉಳಿದುದನ್ನು ಅರಿತ ನಗರಾಭಿವೃದ್ಧಿ ಯುವ ಹೋರಾಟ ಸಮಿತಿ ಸಂಚಾಲಕ ಬಸಯ್ಯ ನಂದಿಕೇಶ್ವರಮಠ, ಸದಸ್ಯರಾದ ಉಮೇಶ ಜತ್ತಿ, ಪುರಸಭೆ ಮಾಜಿ ಸದಸ್ಯ ಪುಟ್ಟು ಕುಲಕರ್ಣಿ, ಅಶೋಕ ಚಿನಿವಾರ, ರಾಜು ಕಂಠಿ, ಗಿರೀಶ ದೇಶಪಾಂಡೆ ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಾದ ವಿಕಾರ ಅಹ್ಮದ ಮೋಮಿನ್, ಆಸೀಫ್ ಇಕ್ಬಾಲ್ ಮೋಮಿನ್‌ ಹಸನ್‌ ಬಾಗವಾನ ಮತ್ತಿತರರು ಬಸ್ಸನ್ನು ಹೊರಗೆ ತಂದು ಪಟ್ಟಣದ ತುಂಬ ಮೆರವಣಿಗೆ ಮಾಡಿ ಗ್ರಾಮದೇವತೆ ದೇವಸ್ಥಾನದ ಮುಂದೆ ಬಸ್ಸಿನ ಪೂಜೆ ಮಾಡಿದರು.

ಕೋಲಾರದಿಂದ ಬಂದಿದ್ದ ಮೂರು ಜನ ಚಾಲಕ, ನಿರ್ವಾಹಕರಿಗೆ ಬಟ್ಟೆ ಆಹೇರಿ ಮಾಡಿ ಸತ್ಕರಿಸಿದರು. ನಂತರ ಬಸ್ಸಿನಿಂದಲೇ ‘ಚಲಾ ಬೆಂಗಳೂರು, ಕೋಲಾರ, ಚಲಾ ಬೆಂಗಳೂರು, ಕೋಲಾರ ಎಂದು ಕೂಗುತ್ತಲೇ ಬಸ್ಸನ್ನು ಬೆಂಗಳೂರು ಮಾರ್ಗವಾಗಿ ಕೋಲಾರಕ್ಕೆ ಬೀಳ್ಕೊಟ್ಟರು.

**

ಕೋಲಾರ ಬೆಂಗಳೂರು ಮುದ್ದೇಬಿಹಾಳ ಬಸ್ಸಿಗೆ ಮೊದಲು ಅನುಮತಿ ನೀಡಿರಲಿಲ್ಲ. ಹೀಗಾಗಿ ಬಸ್ಸು ಬಿಟ್ಟಿದ್ದಿಲ್ಲ.

-ಪಿ.ಕೆ.ಜಾಧವ, ಘಟಕ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.