ADVERTISEMENT

ಜನಸೇವೆಗೆ ಲಭ್ಯವಾಗದ ಶೌಚಾಲಯ!

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 8:35 IST
Last Updated 17 ಮಾರ್ಚ್ 2012, 8:35 IST

ಆಲಮೇಲ: ಇಲ್ಲಿನ ಬಸ್ ನಿಲ್ದಾಣವನ್ನು ಇತ್ತೀಚೆಗೆ ರೂ 56 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣೆ ಮಾಡಲಾಗಿದೆ ಹಾಗೂ ರೂ 36 ಲಕ್ಷ ವೆಚ್ಚದಲ್ಲಿ ನಿಲ್ದಾಣದ ಅಭಿವೃದ್ಧಿಗೆ ಟೆಂಡರ್ ಕರೆಯಲಾಗಿದೆ. ಆದರೆ ನಿಲ್ದಾಣದಲ್ಲಿ ಶೌಚಾಲಯ ನಿರ್ಮಿಸಿ ಐದಾರು ವರ್ಷಗಳೇ ಗತಿಸಿದ್ದರೂ ಸಾರ್ವಜನಿಕರ ಬಳಕೆಯಾಗದೇ ನಿರುಪಯುಕ್ತವಾಗಿ ನಿಂತಿವೆ.

ಶೌಚಾಲಯದ ನಿರ್ವಹಣೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದವರೇ ಅದನ್ನು ಸೇವೆಗೆ ಸಮರ್ಪಿಸಲು ಅವಕಾಶ ನೀಡುತ್ತಿಲ್ಲ. ಹೀಗಾಗಿ ಪ್ರಯಾಣಿಕರು ಶೌಚಾಲಯದ ಹುಡುಕಾಟ ನಡೆಸಿ, ಕೊನೆಗೆ ಬಸ್ ನಿಲ್ದಾಣದ ಗೋಡೆಗಳ ಸುತ್ತ ದಾರಿ ಕಂಡುಕೊಳ್ಳುವರು. ಅಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ.

ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯ:  ಶೌಚಾಲಯವನ್ನು ಸಾರ್ವಜನಿಕ ಸೇವೆಗೆ ನೀಡಲು ಸಾರಿಗೆ ಸಂಸ್ಥೆಯು ಮನಸ್ಸು ಮಾಡುತ್ತಿಲ್ಲ ಎಂಬುದು ನಾಗರಿಕರ ದೂರು. ಶೌಚಾಲಯವನ್ನು ಹೆಚ್ಚಿನ ದರಕ್ಕೆ ಟೆಂಡರ್ ನೀಡಲಾಗಿದೆ. ಆದರೆ ಗ್ರಾಮೀಣ ಪ್ರದೇಶದ ಪ್ರಯಾಣಿಕರು ಶೌಚಾಲಯಗಳ ಬಳಕೆ ಮಾಡುವುದು ಕಡಿಮೆ. ಗ್ರಾಮೀಣ ಜನರನ್ನು ಹಣ ಕೊಟ್ಟು ಅದನ್ನು ಬಳಸಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಗುತ್ತಿಗೆ ಪಡೆದವರು ಇದನ್ನು ನಿರ್ವಹಿಸಲು ಸಾಧ್ಯವಾಗದೆ ನಷ್ಟ ಅನುಭವಿಸುವಂತಾಗಿದೆ ಎಂಬುದು ಸಾರಿಗೆ ಅಧಿಕಾರಿಗಳ ವಿವರಣೆ.

ಶೌಚಾಲಯವನ್ನು ಸಾರಿಗೆ ಇಲಾಖೆಯು ಅತಿ ಕಡಿಮೆ ದರದಲ್ಲಿ ಬಾಡಿಗೆ ನೀಡುವ ಮೂಲಕ ಸೇವೆಗೆ ಲಭ್ಯವಾಗುವಂತೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಪರಿಸರ ನೈರ್ಮಲ್ಯಕ್ಕೆ ಪೂರಕವಾದ ವಾತಾವರಣ ನಿರ್ಮಿಸಬೇಕು. ಜನರ ಆರೋಗ್ಯ ರಕ್ಷಣೆಗೆ ಅದರಲ್ಲೂ ಮಹಿಳೆಯರು ಅನುಭವಿಸುತ್ತಿರುವ ತೊಂದರೆ ನಿವಾರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಜಿಪಂ ಸದಸ್ಯ ಮಲ್ಲಪ್ಪ ತೋಡಕರ ಮಾತನಾಡಿ ಶೌಚಾಲಯವನ್ನು ಸೇವೆಗೆ ಮುಕ್ತಗೊಳಿಸಬೇಕು. ಬಾಡಿಗೆಗೆ ನೀಡದೆ ಸೇವೆ ರೀತಿಯಲ್ಲಿ ಗ್ರಾಮೀಣ ಭಾಗದ ಬಡ ಜನರು ಉಪಯೋಗಿಸಲು ಅವಕಾಶ ಮಾಡಿಕೊಡಬೇಕು. ಈ ಕುರಿತು ಸಾರಿಗೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಹಂದಿಗಳ ತಾಣವಾಗಿ ಪರಿವರ್ತನೆ ಆಗುತ್ತಿರುವ ಶೌಚಾಲಯವನ್ನು ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಅನುಕೂಲ ಆಗುವಂತೆ ಮಾಡಲು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾತ್ರಿಯೂ ಬಳಕೆ ಮಾಡಲು ಹೈಮಾಸ್ಟ್ ದೀಪವನ್ನೂ ಅಳವಡಿಸಬೇಕು ಎಂಬುದು ಕರವೇ ಮುಖಂಡ ಸಿದ್ಧು ಮುಗಳಿ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.