ADVERTISEMENT

ಜುಲೈ 15ರೊಳಗೆ ಫಲಿತಾಂಶ: ಹೈಕೋರ್ಟ್ ಆದೇಶ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2011, 6:45 IST
Last Updated 16 ಏಪ್ರಿಲ್ 2011, 6:45 IST

ಬೆಂಗಳೂರು: ವಿಜಾಪುರ ಜಿಲ್ಲೆಯ ಇಂಡಿಯ ಅಂಜುಮನ್- ಎ- ಇಸ್ಲಾಮಿಯಾ ಸಂಸ್ಥೆಗೆ ಚುನಾವಣೆ ನಡೆಸಿ, ಫಲಿತಾಂಶ ಪ್ರಕಟಿಸಲು ಹೈಕೋರ್ಟ್ ಜುಲೈ 15ರ ಗಡುವು ನೀಡಿದೆ. ಮೇ 31ರ ಒಳಗೆ ಮತದಾರರ ಪಟ್ಟಿ ತಯಾರಿಸುವಂತೆ, ಆ ನಂತರದ ಒಂದು ವಾರದಲ್ಲಿ ಚುನಾವಣಾ ವೇಳಾಪಟ್ಟಿ ಹೊರಡಿಸುವಂತೆ ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಕೇಹರ್ ಹಾಗೂ ಎ.ಎಸ್. ಬೋಪಣ್ಣ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಅಂತೆಯೇ, ‘ಅಂಜುಮನ್- ಎ- ಇಸ್ಲಾಮಿಯಾ ಸಮಿತಿ’ ಎಂಬ ಹೆಸರಿನ ಬದಲು ಈ ಸಂಸ್ಥೆಗೆ ‘ಅಂಜುಮನ್- ಎ- ಇಸ್ಲಾಮಿಯಾ, ಇಂಡಿ’ ಎಂದು ಬದಲಾಯಿಸಲು ನ್ಯಾಯಮೂರ್ತಿ ಗಳು ಅರ್ಜಿ ದಾರರಿಗೆ ಅನುಮತಿ ನೀಡಿದ್ದಾರೆ.

ಹೆಸರು ಬದಲಾವಣೆ, ಶೀಘ್ರ ಚುನಾವಣೆ ಇತ್ಯಾದಿ ಕೋರಿಕೆ ಇಟ್ಟು ಸಲ್ಲಿಸಲಾದ ಪ್ರತ್ಯೇಕ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಗಳು ನಡೆಸಿದರು. ಕೋರ್ಟ್ ನೀಡಿರುವ ಗಡುವಿನ ಒಳಗೆ ಚುನಾವಣೆ ನಡೆದಿರುವ ಬಗ್ಗೆ ಪ್ರಮಾಣ ಪತ್ರ ಸಲ್ಲಿಸಬೇಕು. ಒಂದು ವೇಳೆ ಚುನಾವಣೆ ಈ ಅವಧಿಯಲ್ಲಿ ನಡೆಯದೇ ಹೋದರೆ, ಅರ್ಜಿಯ ವಿಚಾರಣೆಯನ್ನು ಮುಂದುವರಿಸಿ, ಈ ಕುರಿತು ಸೂಕ್ತ ಕ್ರಮ ತೆಗೆದು ಕೊಳ್ಳಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳು ಎಚ್ಚರಿಕೆ ನೀಡಿದ್ದಾರೆ.

ಇದೇ ರೀತಿ, ಸಂಸ್ಥೆಯಲ್ಲಿ ಹಿಂದಿನ ಆಡಳಿತ ಮಂಡಳಿ ಅವ್ಯವಹಾರ ನಡೆಸಿರುವ ಬಗ್ಗೆ ತನಿಖೆಗೆ ಕೋರಿ ಸಲ್ಲಿಸಿರುವ ಇನ್ನೊಂದು ಅರ್ಜಿಯನ್ನು ಪೀಠ ಇತ್ಯರ್ಥಗೊಳಿಸಿದೆ.ಹೊಸ ಆಡಳಿತ ಮಂಡಳಿ ಮುಂದೆ ಈ ಕುರಿತು ಮನವಿ ಸಲ್ಲಿಸಿ, ವಿವಾದ ಬಗೆಹರಿಸಿ ಕೊಳ್ಳುವಂತೆ ನ್ಯಾಯ ಮೂರ್ತಿಗಳು ನಿರ್ದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.