ADVERTISEMENT

ಜೆಡಿಎಸ್ ಆತ್ಮಾವಲೋಕನ ಸಭೆ: ಕಣ್ಣೀರಿಟ್ಟ ಮನಗೂಳಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2013, 10:43 IST
Last Updated 3 ಜೂನ್ 2013, 10:43 IST

ಸಿಂದಗಿ: `ನಾನು ಸಾಯುವ ವರೆಗೂ ಜೆಡಿಎಸ್ ಕಾರ್ಯಕರ್ತರ ಜೊತೆ, ಜೊತೆಯಾಗಿಯೇ ಇದ್ದುಕೊಂಡು ಸಮಾಜ ಸೇವೆ ಸಲ್ಲಿಸುವೆ. ನಾನು ಚುನಾವಣೆಯಲ್ಲಿ ಸೋತೆನೆಂದು ಯಾವೊಬ್ಬ ಕಾರ್ಯಕರ್ತರು ಧೃತಿಗೆಡಬೇಡಿ' ಎಂದು ಮಾಜಿ ಸಚಿವ, ಸಿಂದಗಿ ಮತಕ್ಷೇತ್ರದ ಜೆಡಿಎಸ್ ಪರಾಜಿತ ಅಭ್ಯರ್ಥಿ ಎಂ.ಸಿ. ಮನಗೂಳಿ ಕಣ್ಣೀರಿಟ್ಟು ಹೇಳಿದರು.

ನಗರದ ಆನಂದ ಚಿತ್ರಮಂದಿರದಲ್ಲಿ ಶನಿವಾರ ಜೆಡಿಎಸ್ ತಾಲ್ಲೂಕು ಘಟಕ ಏರ್ಪಡಿಸಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಭಾವಾವೇಶದಿಂದ ಮಾತನಾಡಿದರು.

`ಅಧಿಕಾರ ಇದ್ದರೂ ಸರಿ. ಇಲ್ಲದಿದ್ದರೂ ಸರಿ. ದೇವರಸಾಕ್ಷಿಯಾಗಿ ಹೇಳುತ್ತೇನೆ ನಿಮ್ಮ ಕೈ ಬಿಡುವುದಿಲ್ಲ. ನನಗೆ ಕಾರ್ಯಕರ್ತರೇ ಅತ್ಯಮೂಲ್ಯ ಆಸ್ತಿ' ಎಂದರು.

ಯುವ ಧುರೀಣ ಅಶೋಕ ಮನಗೂಳಿ, `ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ.ಸಿ.ಮನಗೂಳಿ ಅವರ ಸೋಲಿಗೆ ಕೆಲವು ಅಧಿಕಾರಿಗಳು ಬಿಜೆಪಿ ಅಭ್ಯರ್ಥಿ ಕೈಗೊಂಬೆಯಾಗಿ ನಡೆಸಿದ ಕುತಂತ್ರವೇ ಕಾರಣ. ಮತದಾರರು ಜೆಡಿಎಸ್ ಪರ ಒಲವು ತೋರಿಸಿದ್ದಾರೆ. ಅಂತೆಯೇ 37,000 ಮತಗಳು ಬಂದಿವೆ ಎಂದರು.

ಎಚ್.ಕೆ. ನದಾಫ್,  `ಬಿಜೆಪಿ ಅಭ್ಯರ್ಥಿ ಹಣದ ಹೊಳೆ ಹರಿಸಿದರು. ಜೊತೆಗೆ ಮನಗೂಳಿ ಸ್ವಜಾತಿ ಮತದಾರರು ವಿರೋಧವಾಗಿ ಮತ ಚಲಾಯಿಸಿದ್ದಾರೆ. ಮನಗೂಳಿಯವರು ನಂಬಿಕೊಂಡಿದ್ದ ಹಾಲುಮತ ಸಮುದಾಯ ಕೈ ಕೊಟ್ಟಿದ್ದಾರೆ. ಹೀಗಾಗಿ ಮನಗೂಳಿ ಸೋತಿದ್ದಾರೆ' ಎಂದು ಆತ್ಮಾವಲೋಕನ ಮಾಡಿಕೊಂಡರು.

ಗೊಲ್ಲಾಳಪ್ಪಗೌಡ ಪಾಟೀಲ, ಯಶವಂತರಾಯಗೌಡ ರೂಗಿ, ಶ್ರೀಕಾಂತ ಬಿಜಾಪುರ, ರಮೇಶ ದೇಸಾಯಿ, ಪರಶು ಬ್ಯಾಡಗಿಹಾಳ, ಡಾ.ರಾಜಶೇಖರ ಸಂಗಮ, ಗೌಸ್ ಮನಿಯಾರ, ರಾಜಣ್ಣ ನಾರಾಯಣಕರ, ಶೈಲಜಾ ಸ್ಥಾವರಮಠ, ಶರಣಗೌಡ ಯಂಕಂಚಿ, `ಮನಗೂಳಿ ಮತದಾರರ ಮನಸ್ಸು ಗೆದ್ದಿದ್ದಾರೆ ಎಂದರು.

ವೇದಿಕೆಯಲ್ಲಿ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಪ್ರಕಾಶ ಹಿರೇಕುರಬರ, ಸೋಮನಗೌಡ ಬಿರಾದಾರ, ತಾ.ಪಂ. ಸದಸ್ಯ ಅಕ್ಬರ ಮುಲ್ಲಾ, ಕೆಂಚಪ್ಪ ಕತ್ನಳ್ಳಿ ಬಳಗಾನೂರ, ಜೆಡಿಎಸ್ ವಕ್ತಾರ ಸಿದ್ದಣ್ಣ ಚೌಧರಿ, ದಯಾನಂದ ಬಿರಾದಾರ, ಅಶೋಕ ಕೊಳಾರಿ, ಇಮ್ತಿಯಾಜ ಖತೀಬ, ಉಮೇಶ ಜೋಗೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.