ADVERTISEMENT

ಡೊಳ್ಳುಕುಣಿತಕ್ಕೂ ನಾವ್ ಸೈ...

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2011, 5:55 IST
Last Updated 17 ಏಪ್ರಿಲ್ 2011, 5:55 IST

ಬಸವನಬಾಗೇವಾಡಿ: ಇಲ್ಲಿ ಕಲಿಯುವ ಬಾಲಕಿಯರಲ್ಲಿ ಯಾರೊಬ್ಬರು ಉತ್ತಮ ಹಿನ್ನೆಲೆಯಿಂದ ಬಂದವರಲ್ಲ. ಈ ಶಾಲೆಯ ಮಕ್ಕಳು ಎಂಥವರೂ ಕೂಡ ಬೆರಗುಗೊಳ್ಳುವಂಥ ಸಾಧನೆ ಮಾಡಿ ಬಸವನ ಬಾಗೇವಾಡಿಗೆ ಕೀರ್ತಿ ತಂದಿದ್ದಾರೆ.

ಸ್ಥಳೀಯ ಕಸ್ತೂರ್‌ಬಾ ವಸತಿ ಶಾಲೆ ಕೇಂದ್ರ ಸರಕಾರದ ಯೋಜನೆಯಡಿ ನಡೆಯುತ್ತಿದೆ. ಈ ಶಾಲೆಯಲ್ಲಿ ಶೇಕಡಾ 75ರಷ್ಟು ಮಕ್ಕಳು ಹಿಂದುಳಿದ ವರ್ಗದ ಹಾಗೂ ಹಿಂದುಳಿದ ಜನಾಂಗದವರಾಗಿದ್ದಾರೆ. 6ನೇ ತರಗತಿಯಿಂದ 8ನೇ ತರಗತಿಯ ವರೆಗಿನ ಶಾಲೆಯ ಜವಾಬ್ದಾರಿಯನ್ನು ವಿಜಾಪುರದ ಮಹಿಳಾ ಸಮಖ್ಯಾ ಕರ್ನಾಟಕ ಶಾಖೆ ವಹಿಸಿಕೊಂಡಿದೆ.

ನಿರ್ಮಲಾ ಶಿರಗುಪ್ಪಿ ಅವರ ದೂರದೃಷ್ಟಿಯ ಫಲದಿಂದ ಶಾಲೆ ಯಲ್ಲಿ ಇರುವ ಬಾಲಕಿಯರಿಗೆ ಅಭ್ಯಾಸದ ಜೊತೆಗೆ ಇತರ ಚಟುವಟಿಕೆ ಗಳಿಗೆ ಪ್ರೋತ್ಸಾಹ ಕೊಡಲಾಗುತ್ತಿದೆ. ಶಾಲೆಯ ವಿದ್ಯಾರ್ಥಿನಿಯರು ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದಾರೆ.

ADVERTISEMENT

ಶಾಲೆಯ ಸಂಗೀತಾ ಶಿವಪ್ಪ ಲಮಾಣಿ ಎನ್ನುವ ಬಾಲಕಿ ಕಳೆದ ವರ್ಷ ರಾಜ್ಯ ಮಟ್ಟದಲ್ಲಿ ಉದ್ದ ಜಿಗಿತದಲ್ಲಿ ದಾಖಲೆಯೊಂದಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಕರಾಟೆಯ ವಿವಿಧ ವಿಭಾಗಗಳಲ್ಲಿ ಸುನೀತಾ ರಾಠೋಡ, ಅನಿತಾ ರಾಠೋಡ, ಸಂಗೀತಾ ಲಮಾಣಿ ರಾಜ್ಯ ಮಟ್ಟದಲ್ಲಿ ಮಿಂಚಿದ್ದಾರೆ.

ಕಳೆದ ವರ್ಷ ಆಂಧ್ರಪ್ರದೇಶದ  ಅನಂತಪುರ ಜಿಲ್ಲೆಯ ಅಂಕಾಪಲ್ಲಿಯಲ್ಲಿ ನಡೆದ ಬಾಲಕಿಯರ ಕರಾಟೆ ಸ್ಫರ್ಧೆಯಲ್ಲಿ ಕುಮಾರಿ ಸೂರಮ್ಮದೇವಿ ಹಾಗೂ ಸಿದ್ದಮ್ಮ ಬಜಂಂತ್ರಿ ಪ್ರಥಮ ಸ್ಥಾನ ಪಡೆದು ರಾಜ್ಯಕ್ಕೆ ಗೌರವ ತಂದಿದ್ದಾರೆ.

ಜಾನಪದ ನಶಿಸುತ್ತಿರುವ ದಿನಗಳಲ್ಲಿ ಶಾಲೆಯ ವಿದ್ಯಾರ್ಥಿನಿ ಯರ ಡೊಳ್ಳು ಕುಣಿತ ನಾಡಿನ ಜನರ ಮೆಚ್ಚುಗೆ ಗಳಿಸಿದೆ. ಸುರೇಖಾ ಜಗಲಿ, ನೀಲಮ್ಮ ಚಕ್ರವರ್ತಿ, ಸಂಗೀತಾ ಲಮಾಣಿ, ನೀಲಾ ರಾಠೋಡ, ಮೀನಾಕ್ಷಿ ಪವಾರ, ಅಪ್ಸರಾ ಆಸಂಗಿ, ಜ್ಯೋತಿ ಮಾಳಿ, ರುಕ್ಮಿಣಿ ಮಾದರ, ಮಾಲಾಶ್ರಿ ದೊಡಮನಿ, ಸಿದ್ದಮ್ಮ ಇಟಗಿ, ಲಕ್ಷ್ಮಿ ಹಲಸಂಗಿ, ಜಯಶ್ರೀ ರಾಠೋಡ, ಲಕ್ಕಮ್ಮ, ದ್ರೌಪದಿ ಪವಾರ ಮೊದಲಾದ ವಿದ್ಯಾರ್ಥಿನಿ ಯರನ್ನು ಒಳಗೊಂಡ ಡೊಳ್ಳು ಕುಣಿತದ ತಂಡ ಜಿಲ್ಲಾ ಮಟ್ಟದ ಜಾನಪದ ಕಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. 2010ರಲ್ಲಿ ಜಿಲ್ಲಾ ಯುವ ಜನ ಸೇವಾ ಇಲಾಖೆ ನಡೆಸಿದ ಕಾರ್ಯಕ್ರಮದಲ್ಲಿ ಪ್ರಥಮ  ಬಹುಮಾನ ಪಡೆದಿದೆ.

ಶಾಲೆಯ ವಿದ್ಯಾರ್ಥಿನಿಯರಿಗೆ ಡೊಳ್ಳುಕುಣಿತಕ್ಕೆ ಚಂದ್ರು ಬೂದಿ ಹಾಳ, ಕರಾಟೆ ತರಬೇತಿಗೆ ಬಸವರಾಜ ಅರಸನಾಳ ಹಾಗೂ ಸಂಗೀತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಖ್ಯಾತ ಸಂಗೀತ ಕಲಾವಿದ ಶ್ರೀಮಂತ ಅವಟಿ ಪ್ರೇರಣೆ ನೀಡುತ್ತಿದ್ದಾರೆ.ಒಟ್ಟು 16 ಜನ ಸಿಬ್ಬಂದಿ ಇಲ್ಲಿದ್ದಾರೆ. 100 ವಿದ್ಯಾರ್ಥಿನಿಯರು ಅಭ್ಯಾಸ ಮಾಡುತ್ತಿದ್ದಾರೆ.

ಮೇಲ್ವಿಚಾರಕಿ ಅರುಣಾ ಬಸರಗಿ, ಸುಮಂಗಲಾ ಹಿರೇಮಠ, ಸಾಹಿರಾ ಬನಹಟ್ಟಿ ಹಾಗೂ ಶಾಲೆಯ ಸಿಬ್ಬಂದಿ ವರ್ಗ ವಿದ್ಯಾರ್ಥಿನಿಯರ ಸರ್ವ ತೋಮುಖ ಬೆಳವಣಿಗೆಗೆ ಸಹಕಾರ ನೀಡುತ್ತಿದ್ದಾರೆ. ಜೊತೆಗೆ ಲತಾ ಕುಲಕರ್ಣಿ ಮಾರ್ಗದರ್ಶಕ ರಾಗಿದ್ದಾರೆ.

ತಂದೆ ತಾಯಿಯನ್ನು ಕಳೆದು ಕೊಂಡ ದುರ್ಗವ್ವ ಮಾದರ ಶಾಲೆಗೆ ಬಂದ ನಂತರ ಆತ್ಮವಿಶ್ವಾಸ ಬಂದಿದೆ ಎಂದು ಹೇಳುತ್ತಾರೆ. ಹರಿಹಳ್ಳ ತಾಂಡಾದ ಸಂಗೀತಾ ಲಮಾಣಿ ಹಾಗೂ ಅನಿತಾ ರಾಠೋಡ ಶಾಲೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.