ADVERTISEMENT

ಡೋಣಿ ಹೂಳೆತ್ತಲು ಕೇಂದ್ರದ ನೆರವು: ಎಂಬಿ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2011, 9:55 IST
Last Updated 11 ಮಾರ್ಚ್ 2011, 9:55 IST

ವಿಜಾಪುರ: ‘ಡೋಣಿ ನದಿ ಹೂಳು ತೆಗೆಯುವ ಕಾಮಗಾರಿಗೆ ಕೇಂದ್ರ ಸರ್ಕಾರದ ನೆರವು ಪಡೆಯಲು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದು, ಕೇಂದ್ರ ಜಲಸಂಪನ್ಮೂಲ ಸಚಿವ ಸಲ್ಮಾನ್ ಖುರ್ಷಿದ್ ಅವರನ್ನೂ ಸಹ ಭೇಟಿಯಾಗಿ ನೆರವು ಕೋರಲಾಗುವುದು’ ಎಂದು ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲ ಹೇಳಿದರು.

ತಾಲ್ಲೂಕಿನ ತೊನಶ್ಯಾಳ ನವಗ್ರಾಮ-2 ಆಸರೆ ಫಲಾನುಭವಿಗಳಿಗೆ ಮನೆಗಳ ಬೀಗ ವಿತರಿಸುವ ಸಮಾರಂಭದಲ್ಲಿ ಮಾತನಾಡಿದ ಅವರು, ಡೋಣಿ ನದಿ ಹೂಳು ತೆಗೆಸಲು ಹೆಚ್ಚಿನ ಅನುದಾನ ಅಗತ್ಯವಿದೆ. ರಾಜ್ಯ ಸರ್ಕಾರಕ್ಕೆ ಇದು ಕಷ್ಟವೆನಿಸಿದರೆ ಕೇಂದ್ರದ ನೆರವು ಕೋರಿ ಶಾಶ್ವತ ಪರಿಹಾರವನ್ನು ನದಿ ಪಾತ್ರದ ಜನತೆಗೆ ಕಲ್ಪಿಸಬೇಕು ಎಂದರು.

ಪಂಚಾಯಿತಿಗಳಲ್ಲಿ ದಾಖಲಾತಿ ಇಲ್ಲದ, ಅವಿಭಕ್ತ ಕುಟುಂಬದಲ್ಲಿ ವಾಸವಾಗಿರುವ ಹಾಗೂ ಇತರ ಕಾರಣಗಳಿಂದ ನವಗ್ರಾಮಗಳಲ್ಲಿ ಮನೆ ಹೊಂದದವರಿಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನೂ ನೀಡಿದರು.

ಜಿ.ಪಂ. ಸದಸ್ಯರಾದ ಉಮೇಶ ಕೋಳಕೂರ, ಬಾಪುಗೌಡ ಪಾಟೀಲ, ಜಿ.ಪಂ. ಮಾಜಿ ಅಧ್ಯಕ್ಷ ಸೋಮನಾಥ ಬಾಗಲಕೋಟ, ಮಾಜಿ ಸದಸ್ಯ ವಿ.ಎಸ್. ಪಾಟೀಲ, ತಹಸೀಲ್ದಾರ ರಾಜಶ್ರೀ ಜೈನಾಪುರ, ತಾ.ಪಂ. ಸದಸ್ಯೆ  ಸಿದ್ದಮ್ಮ ಮಾದರ, ಗ್ರಾ.ಪಂ. ಅಧ್ಯಕ್ಷ ಬಿ.ಡಿ. ಆಸಂಗಿ, ಶಂಕರಗೌಡ ಬಿರಾದಾರ, ರಾಜಶೇಖರ ಪೂಜಾರಿ, ಎ.ಎಂ. ಸಾಣಕರ ಮುಂತಾದವರು ಉಪಸ್ಥಿತರಿದ್ದರು.

ಭೂಮಿ ಪೂಜೆ: ತಾಲ್ಲೂಕಿನ ಸಾರವಾಡ - ಜುಮನಾಳ ರಸ್ತೆಯಲ್ಲಿ ದದಾಮಟ್ಟಿ ಗ್ರಾಮದ ಹತ್ತಿರ ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸುತ್ತಿರುವ ರೂ. 73 ಲಕ್ಷ ವೆಚ್ಚದ ಸೇತುವೆ ಹಾಗೂ ಇದೇ ರಸ್ತೆಯ 3 ಕಿ.ಮೀ. ಯಿಂದ 8.7 ಕಿ.ಮೀ ವರೆಗಿನ ಮರು ಡಾಂಬರೀಕರಣದ ರೂ.38 ಲಕ್ಷ ವೆಚ್ಚದ ಕಾಮಗಾರಿಗೆ ಶಾಸಕ ಎಂ.ಬಿ. ಪಾಟೀಲ ಭೂಮಿಪೂಜೆ ನೆರವೇರಿಸಿದರು.

ಜಿ.ಪಂ. ಸದಸ್ಯರಾದ ಉಮೇಶ ಕೋಳಕೂರ, ಬಾಪುಗೌಡ ಪಾಟೀಲ, ತಾ.ಪಂ. ಸದಸ್ಯ ಈಶ್ವರಗೌಡ ಕೋಟಿ, ಗ್ರಾ.ಪಂ. ಅಧ್ಯಕ್ಷ ಶಿವಾನಂದ ಕವಲಗಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.