ಸಿಂದಗಿ: ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲಾ ಸ್ಥಿತಿ-ಗತಿ ಕುರಿತಾಗಿ ದೀರ್ಘ ಚರ್ಚೆ ಮುಂದುವರೆದು ಜಿಲ್ಲಾ ಪಂಚಾಯ್ತಿ ಸದಸ್ಯರು ಮತ್ತು ಕ್ಷೇತ್ರಶಿಕ್ಷಣಾಧಿಕಾರಿ ಮಧ್ಯೆ ಜಟಾಪಟಿ ನಡೆದ ಘಟನೆ ಬುಧವಾರ ನಗರದ ತಾ.ಪಂ ಸಭಾಭವನದಲ್ಲಿ ನಡೆದ 10ನೇ ಸಾಮಾನ್ಯ ಸಭೆಯಲ್ಲಿ ನಡೆಯಿತು.
ತಾಲ್ಲೂಕಿನಲ್ಲಿ ಮಕ್ಕಳಿಗನುಗುಣವಾಗಿ ಶಿಕ್ಷಕರಿದ್ದಾರೆಯೇ ಎಂಬ ಜಿಪಂ ಸದಸ್ಯ ಸಾಹೇಬಗೌಡ ಪಾಟೀಲ ವಣಕಿಹಾಳರ ಪ್ರಶ್ನೆಗೆ 200 ಶಿಕ್ಷಕರ ಕೊರತೆ ಇದೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಶ್ರೀಶೈಲ ಬಿರಾದಾರ ಪ್ರತಿಕ್ರಿಯಿಸಿದರು. ಹಾಗಿದ್ದಲ್ಲಿ ಅದೆಷ್ಟೋ ಶಿಕ್ಷಕರ ನಿಯೋಜನೆ(ಡೆಪ್ಯೂಟೇಶನ್) ಯಾಕೆ ರದ್ದು ಮಾಡಿಲ್ಲ ಎಂಬ ಮರು ಪ್ರಶ್ನೆಗೆ ತುಂಬಾ ಜನ ಶಿಕ್ಷಕರು ಜಿಲ್ಲಾ ಪಂಚಾಯ್ತಿ ಸದಸ್ಯರ ಹೆಸರಿನಲ್ಲಿ ಅಷ್ಟೇಕೆ ಶಾಸಕರ ಹೆಸರಿನಲ್ಲಿ ಎಲ್ಲೆಲ್ಲೋ ಉಳಿದುಕೊಂಡಿದ್ದಾರೆ ನಾನೇನು ಮಾಡಲಿ ಎಂದು ಬಿಇಒ ಅಷ್ಟೇ ಖಡಕ್ ಉತ್ತರ ನೀಡಿದರು.
ನಿಯೋಜನೆ ಮೇಲಿರುವ ಶಿಕ್ಷಕರು ತಮ್ಮ ಮೂಲ ಶಾಲೆಗೆ ಹಾಜರಾಗಿಲ್ಲ. ಅಂಥವರ ವಿರುದ್ಧ ಏನು ಕ್ರಮ ಜರುಗಿಸಿದ್ದೀರಿ ಎಂದಿದ್ದಕ್ಕೆ ಸಂಬಳ ತಡೆ ಹಿಡಿಯಲಾಗಿದೆ ಬಿಇಒ ವಿವರಣೆ. ಅಷ್ಟಾದರೆ ಸಾಲದು ಅಮಾನತು ಮಾಡಿ ಎಂದು ಸದಸ್ಯ ಹಳ್ಳೆಪ್ಪ ಚೌಧರಿ ಸೂಚನೆ ನೀಡಿದರು. ಹಾಗಿದ್ದಲ್ಲಿ ಇದೇ ಸಭೆಯಲ್ಲಿ ಠರಾವು ಮಾಡಿ ಕೊಡಿ ಅಂಥ ಎಲ್ಲ ಶಿಕ್ಷಕರನ್ನು ಅಮಾನತುಗೊಳಿಸುವುದಾಗಿ ಶಿಕ್ಷಣಾಧಿಕಾರಿ ಹೇಳಿದರು.
ಶಾಲೆ ಬಿಟ್ಟ ಮಕ್ಕಳಿಗಾಗಿಯೇ ಸರ್ಕಾರ ಸ್ಥಾಪಿಸಿದ ಕಸ್ತೂರಿಬಾ ಪ್ರಾಥಮಿಕ ಶಾಲೆಗೆ ಶಾಲೆಯನ್ನು ಅರ್ಧಕ್ಕೆ ಬಿಟ್ಟ ದೇವರಹಿಪ್ಪರಗಿ ಪಟ್ಟಣದ ಕಸ್ತೂರಿ ಮೆಟಗಾರ ಎಂಬ ಬಾಲಕಿ ಪ್ರವೇಶ ನಿರಾಕಿಸಿದ್ದೇಕೆ ಎಂದು ಸಾಹೇಬಗೌಡ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಇವರ ಬೆನ್ನು ಹಿಂದೆಯೇ ಕನ್ನೊಳ್ಳಿ ಕ್ಷೇತ್ರದ ಜಿಪಂ ಸದಸ್ಯ ಯಲ್ಲಪ್ಪ ಹಾದಿಮನಿ ತಾಲ್ಲೂಕಿನ ಬಹುತೇಕ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಕ್ಕಳಿಂದ ಪರೀಕ್ಷೆಯಲ್ಲಿ ಉತ್ತರಪತ್ರಿಕೆಗಾಗಿ ಪೇಪರ್ ತರಲು ಹಣ ವಸೂಲಿ ಮಾಡುವ ಶೋಷಣೆ ವ್ಯಾಪಕವಾಗಿದೆ. ಈ ವಿಷಯ ತಮಗೆ ಗೊತ್ತಿಲ್ಲವೇನು ಎಂದು ಅವರು ಅಧಿಕಾರಿಗೆ ಪ್ರಶ್ನಿಸಿದರು.
ಇದು ಸುಳ್ಳು ಎಂದು ಬಿಇಒ ವಾದಿಸಿದರು. ಆಗ ಸದಸ್ಯೆ ಲಕ್ಷ್ಮೀಬಾಯಿ ಮೆಟಗಾರ ಮಧ್ಯೆ ಪ್ರವೇಶಿಸಿ ಹೌದು ಶಿಕ್ಷಕರು ನಮ್ಮೂರ ಶಾಲೆಯಲ್ಲೂ ಪ್ರತಿ ಶುಕ್ರವಾರಕ್ಕೊಮ್ಮೆ ಎರಡು ರೂಪಾಯಿ ಮಕ್ಕಳಿಂದ ಸಂಗ್ರಹ ಮಾಡುತ್ತಾರೆ ಎಂದು ಧ್ವನಿಗೂಡಿಸಿದರು.
ತಾಲ್ಲೂಕಿನಲ್ಲಿ ಸುಮಾರು 20 ಶಾಲಾ ಕಟ್ಟಡಗಳು ಅರ್ಧಕ್ಕೆ ನಿಂತಿರಲು ಕಾರಣವೇನು ಎಂದು ಜಿಪಂ ಸದಸ್ಯ ಯಲ್ಲಪ್ಪರ ಪ್ರಶ್ನೆಗೆ ನೀರಿನ ಕೊರತೆ ಎಂದು ಅಧಿಕಾರಿ ಉತ್ತರ ಬಂತು. ಹಾಗಾದರೆ ಮಕ್ಕಳಿಗೆ ಶಾಲೆಯಲ್ಲಿ ಕುಡಿಯುವ ನೀರು ಮತ್ತು ಶೌಚಾಲಯಕ್ಕೆ ನೀರು ಯಾವೊಬ್ಬ ಶಿಕ್ಷಕರು ತರುತ್ತಿಲ್ಲ ಎಂಬ ಜಿಪಂ ಸದಸ್ಯ ಯಲ್ಲಪ್ಪರ ಮರು ಮಾತಿಗೆ ನೀರು ತರುವ ಕಾರ್ಯ ಶಿಕ್ಷಕರದಲ್ಲ ಎಂದು ತುಂಬಾ ಜೋರು ಧನಿಯಲ್ಲಿ ಬಿಇಓ ರ ಉತ್ತರವೂ ತಕ್ಷಣವೇ ಹೊರ ಬಂತು.
ಸಭೆಯ ಅರ್ಧದಷ್ಟು ಸಮಯ ಶಿಕ್ಷಣ ಇಲಾಖೆ ಚರ್ಚೆಗೆ ಹೋಯಿತು. ಸಭೆಯ ಅಧ್ಯಕ್ಷತೆಯನ್ನು ತಾಪ ಅಧ್ಯಕ್ಷೆ ಶಿವಲಿಂಗಮ್ಮ ಹಚಡದ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷ ಸುರೇಶ ಬೇನಾಳ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.