ADVERTISEMENT

ತಿಂಗಳಿಗೆ 25 ಶೌಚಾಲಯ ಗ್ರಾ.ಪಂಗೆ ಗುರಿ

ವಿದ್ಯಾರ್ಥಿಗಳು ಶೌಚಾಲಯ ಬಳಸದಿದ್ದರೆ ಮುಖ್ಯಶಿಕ್ಷಕರ ಮೇಲೆ ಕ್ರಮ!

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2013, 6:11 IST
Last Updated 1 ಆಗಸ್ಟ್ 2013, 6:11 IST

ವಿಜಾಪುರ: `ಶೌಚಾಲಯ ಬಳಕೆ ಕುರಿತಂತೆ ಶಾಲಾ ಹಂತದಲ್ಲೇ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕು. ಶೌಚಾಲಯಗಳಿದ್ದರೂ ವಿದ್ಯಾರ್ಥಿಗಳು ಬಳಕೆ ಮಾಡದಿದ್ದರೆ ಅಂತಹ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು' ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಶಿವಕುಮಾರ್ ಎಚ್ಚರಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕಾವ್ಯ ದೇಸಾಯಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ಜರುಗಿದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

`ಯಾವುದೇ ವಿದ್ಯಾರ್ಥಿ ಬಯಲು  ಶೌಚಕ್ಕೆ ಹೋಗಬಾರದು. ಈ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸುತ್ತೋಲೆ ಹೊರಡಿಸಬೇಕು. ಶಾಲಾವಾರು ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಇದೇ ಮಾದರಿ ಅಂಗನವಾಡಿಯಲ್ಲೂ ಜಾರಿಗೊಳ್ಳಬೇಕು' ಎಂದು ಸೂಚಿಸಿದರು.

ಶಾಲೆಗಳ ಶೌಚಾಲಯ, ಕುಡಿಯುವ ನೀರಿನ ನಿರ್ವಹಣೆಗೆ ಪ್ರಸಕ್ತ ವರ್ಷದಿಂದ ಶಾಲಾವಾರು ಅನುದಾನ ನೀಡಲಾಗುವುದು ಎಂದರು.
ಪ್ರತಿ ತಿಂಗಳು 25 ಶೌಚಾಲಯ ನಿರ್ಮಿಸುವ ಗುರಿಯನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಲಾಗಿದೆ. ವಿಶೇಷ ಗ್ರಾಮಸಭೆಗಳನ್ನು ನಡೆಸಿ ಫಲಾನುಭವಿಗಳನ್ನು ಆಯ್ಕೆ ಮಾಡಬೇಕು. ಪ್ರಚಾರಕ್ಕೆ ಪ್ರತಿ ಗ್ರಾ.ಪಂ.ಗೆ ರೂ 3,000 ಹಣ ಬಿಡುಗಡೆ ಮಾಡಲಾಗುವುದು ಎಂದ ಹೇಳಿದರು.

ಒಂದು ಶೌಚಾಲಯ ನಿರ್ಮಾಣಕ್ಕೆ ರೂ 8,000 ಅನುದಾನ ಸಾಲುತ್ತಿಲ್ಲ. ಕನಿಷ್ಠ ರೂ 12,000ಕ್ಕೆ ಹೆಚ್ಚಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ನಿವೇಶನ ಕೊರತೆಯಿದ್ದು, ಪ್ರತಿ ಕುಟುಂಬಕ್ಕೊಂದು ಶೌಚಾಲಯದಂತೆ ಸಮುದಾಯ ಶೌಚಾಲಯಗಳ ಮಾದರಿಯಲ್ಲಿ ನಿರ್ಮಾನ ಮಾಡಿ, ಆಯಾ ಮನೆಗಳಿಗೆ ಶೌಚಾಲಯಗಳನ್ನು ಹಂಚಿಕೆ ಮಾಡಬೇಕು ಎಂದು  ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕೋಳಕೂರ ಸಲಹೆ ನೀಡಿದರು.

ಪ್ರಸಕ್ತ ವರ್ಷ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಕಾರಜೋಳ, ಬಾಬಾನಗರ, ಉಕ್ಕಲಿ, ಕೊಣ್ಣೂರ, ರಕ್ಕಸಗಿ, ಇಂಚಗೇರಿ, ಉಮರಾಣಿ, ಚಿಕ್ಕರೂಗಿ, ಹುಣಶ್ಯಾಳ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ 575,09 ಬಿಪಿಎಲ್, 56,385 ಎಪಿಎಲ್ ಕುಟುಂಬಗಳಿಗೆ. 2,126 ಶಾಲೆಗಳು ಹಾಗೂ 581 ಅಂಗನವಾಡಿಗಳಿಗೆ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ರೂ. 27.70 ಕೋಟಿ ಅನುದಾನ ಬಂದಿದ್ದು, ರೂ17.82 ಕೋಟಿ ವಿನಿಯೋಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ  ಅನುಸೂಯಾ ಜಾಧವ, ಸಹ ಕಾರ್ಯದರ್ಶಿ ಹಿಟ್ನಳ್ಳಿ,  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವಸಂತ ಪ್ರೇಮ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.