ADVERTISEMENT

ದಲಿತರ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 7:20 IST
Last Updated 12 ಫೆಬ್ರುವರಿ 2011, 7:20 IST

ಸಿಂದಗಿ: ಪಟ್ಟಣದಲ್ಲಿ ಫೆಬ್ರುವರಿ 15ರಿಂದ ನಡೆಯಲಿರುವ 12ನೇ ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಲಿತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿ, ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ಸುಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ತಹಸೀಲ್ದಾರ ಕಚೇರಿ ಎದುರು ಧರಣಿ ನಡೆಸಿದರು.

ನಂತರ ಸಭೆಯಲ್ಲಿ ದಸಂಸ ಸಂಚಾಲಕ ಚಂದ್ರಕಾಂತ ಸಿಂಗೆ, ಸಂಘಟನಾ ಸಂಚಾಲಕರಾದ ಶ್ರೀನಿವಾಸ ಓಲೇಕಾರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ರಾವುತ ತಳಕೇರಿ, ಶರಣು ಜಮಖಂಡಿ, ಶರಣು ಬ್ಯಾಡಗಿಹಾಳ, ಬಸವರಾಜ ಆಹೇರಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವು ಮೇಲ್ವರ್ಗದವರು ಮತ್ತು ಮಠಾಧೀಶರ ಸಮ್ಮೇಳನವಾಗಿದೆ. ದಲಿತರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ದೂರಿದರು.

ಪಕ್ಷಪಾತದಿಂದ ತುಂಬಿರುವ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ರದ್ದುಗೊಳಿಸಿ ದಲಿತ ಸಾಹಿತಿ, ಕಲಾವಿದರಿಗೆ ಆದ್ಯತೆ ನೀಡಿರುವ ಹೊಸ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಬೇಕು. ಇಲ್ಲದಿದ್ದರೆ ಸಮ್ಮೇಳನದ ದಿನ ಸಿಂದಗಿ ಬಂದ್ ನಡೆಸಲಾಗುವುದು. ಅಲ್ಲದೆ ಸಮ್ಮೇಳನದ ಸಂದರ್ಭದಲ್ಲಿ ಕಪ್ಪು ಬಾವುಟ ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲಾಗುವುದು ಎಂದು ಅವರು ಹೇಳಿದರು.

ವಿಜಾಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಸಾಹಿತಿಗಳ ಕೈಯಲ್ಲಿ ಸಿಕ್ಕು ಮಹತ್ವ ಕಳೆದುಕೊಂಡಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಬಸಲಿಂಗಪ್ಪ ಬೂದಿಹಾಳ ಪರಿಷತ್‌ನ್ನು ತಮ್ಮ ಸ್ವಂತ ಆಸ್ತಿಯಂತೆ ಮಾಡಿಕೊಂಡು ಅನರ್ಹರಿಗೆ ಮಣೆ ಹಾಕಿದ್ದಾರೆ ಎಂದು ಆರೋಪಿಸಿದರು.

ದಸಂಸ ಸಂಚಾಲಕರಾದ ಚಂದ್ರಕಾಂತ ಸಿಂಗೆ ಮತ್ತು ಶ್ರೀನಿವಾಸ ಓಲೇಕಾರ, ದಸಂಸ ಸಂಘಟನಾ ಸಂಚಾಲಕ ಧರ್ಮಣ್ಣ ಯಂಟಮಾನ, ಪರುಶರಾಮ ಕಾಂಬಳೆ, ಪ್ರಕಾಶ ನಡುವಿನಕೇರಿ, ಲಕ್ಷ್ಮಣ ಬನ್ನೆಟ್ಟಿ, ರವಿ ಆಲಹಳ್ಳಿ, ಭೀಮು ಮ್ಯಾಕೇರಿ, ಕಾಶೀನಾಥ ಹೊಸಮನಿ, ಅರುಣ ಸಿಂಗೆ, ಸುಭಾಸ ನಾಟೀಕಾರ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ತಹಸೀಲ್ದಾರ ಶಿವಾನಂದ ಭಜಂತ್ರಿ ಪ್ರತಿಭಟನಕಾರರಿಂದ ಮನವಿ ಪತ್ರ ಸ್ವೀಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.