ವಿಜಾಪುರ: ರಾಜಾರಾಮ ದುಬೆ ವಿಜಾಪುರ ಲೋಕಸಭಾ ಕ್ಷೇತ್ರದ ಪ್ರಥಮ ಸಂಸದ. 1952ರಲ್ಲಿ ಆಯ್ಕೆಯಾದ ಅವರು ಮೊದಲ ಅವಧಿಯಲ್ಲಿ 1957ರ ವರೆಗೆ ಅಧಿಕಾರದಲ್ಲಿದ್ದರು. ಆದರೆ, ಅವರ ಪತ್ನಿ ನಿರ್ಮಲಾ ದುಬೆ 54 ವರ್ಷಗಳ ನಂತರ ಮಾಜಿ ಸಂಸದರ ಪತ್ನಿಗೆ ಕೇಂದ್ರ ಸರ್ಕಾರ ನೀಡುವ ಪಿಂಚಣಿ ಪಡೆಯುತ್ತಿದ್ದಾರೆ!
ಸ್ಥಳೀಯ ಶಿವಾಜಿ ಚೌಕ್ ಹತ್ತಿರದ ಶಾಹುನಗರದ ಮನೆಯಲ್ಲಿ ಸೊಸೆ ಮಿಥಿಲೇಶ್ವರಿ ಹಾಗೂ ಮೊಮ್ಮಕ್ಕಳೊಂದಿಗೆ ವಾಸವಾಗಿರುವ 83 ವರ್ಷದ ನಿರ್ಮಲಾ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದರು.
‘ನಮ್ಮ ಯಜಮಾನರು ಚುನಾವಣೆಗೆ ಸ್ಪರ್ಧಿಸಿದ್ದರೂ ನಾನೆಂದೂ ಪ್ರಚಾರಕ್ಕೆ ಹೋಗಲಿಲ್ಲ. ಪ್ರಚಾರಕ್ಕೆ ಕರೆಯುವುದಿರಲಿ, ರಾಜಕೀಯ ವಿಷಯಗಳನ್ನು ಅವರು ನನ್ನೊಂದಿಗೆ ಚರ್ಚಿಸುತ್ತಲೂ ಇರಲಿಲ್ಲ. ಅವರು ಎರಡು ಬಾರಿ ಎಂ.ಪಿ., ಒಮ್ಮೆ ಎಂ.ಎಲ್.ಸಿ. ಆಗಿದ್ದರೂ ನಮಗಾಗಿ ಏನನ್ನೂ ಮಾಡಲಿಲ್ಲ. ನಾವೂ ಅವರನ್ನು ಏನೂ ಕೇಳಲಿಲ್ಲ. ಅವರದು ಎಂದು ಹೇಳಿಕೊಳ್ಳಲು ಈ ಹಳೆಯ ಮನೆಯೊಂದೇ ಇದೆ’ ಎಂದರು.
‘ರಾಜಾರಾಮ ದುಬೆ ಅವರು ಎರಡು ಬಾರಿ ಲೋಕಸಭೆಗೆ ಆಯ್ಕೆಯಾಗಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಸಂಸದೀಯ ಕಾರ್ಯದರ್ಶಿಯೂ ಆಗಿದ್ದರು. ವಿಧಾನ ಪರಿಷತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಇಷ್ಟೆಲ್ಲ ದೊಡ್ಡ ಹುದ್ದೆಗೇರಿದರೂ ಈ ಮನೆಯ ಸೌಂದರ್ಯ ಹೆಚ್ಚಲಿಲ್ಲ ನೋಡಿ. ಮುಂದಿನ ಕೋಣೆ ನನ್ನ ಮಗ ಕಟ್ಟಿಸಿದ್ದು’ ಎಂದು ಮುಗುಳ್ನಕ್ಕರು.
‘ಈ ಮನೆಯೂ ಮಿತ್ರರೊಬ್ಬರು ಬಕ್ಷೀಸು ಕೊಟ್ಟದ್ದು. ವಿದೇಶಕ್ಕೆ ಹೋದಾಗ ಅಲ್ಲಿಯ ಮಿತ್ರ ನೀಡಿದ ಟೈಪ್‌ರೈಟರ್‌ನ್ನೂ ಕಾಂಗ್ರೆಸ್ ಕಚೇರಿಗೆ ಕೊಟ್ಟು ಖಾಲಿ ಕೈಯಲ್ಲಿ ಮನೆಗೆ ಬಂದಿದ್ದರು. 1970ರಲ್ಲಿ ಅವರು ತೀರಿಕೊಂಡಾಗ ಅವರ ಬ್ಯಾಂಕ್ ಖಾತೆಯೂ ಖಾಲಿಯಾಗಿತ್ತು’ ಎಂದರು ಅವರ ಸೊಸೆ ಮಿಥಿಲೇಶ್ವರಿ ಅನಿಲ್ ದುಬೆ.
‘ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದ ರಾಜಾರಾಮ ಅವರು, ಒಟ್ಟಾರೆ ಮೂರುವರೆ ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. 1941ರಲ್ಲಿ ನ್ಯಾಯಾಲಯ ಅವರಿಗೆ ₨300 ದಂಡ ವಿಧಿಸಿತ್ತು. ಅದನ್ನು ಪಾವತಿಸಲು ಅವರ ಬಳಿ ಹಣ ಇರಲಿಲ್ಲ. ಹೀಗಾಗಿ ಒಂದು ವರ್ಷ ಜೈಲಿನಲ್ಲಿ ಇರಬೇಕಾಯಿತು’ ಎಂದು ದಾಖಲೆಗಳನ್ನು ಮುಂದಿಟ್ಟರು.
‘ನನ್ನೂರು ಆಗ್ರಾ. ತಮ್ಮ 36ನೇ ವಯಸ್ಸಿನಲ್ಲಿ ನನ್ನನ್ನು ವಿವಾಹವಾದರು. ಆಗ ಅವರು ಲೋಕಸಭಾ ಸದಸ್ಯರೂ ಆಗಿದ್ದರು. 1957ರ ಚುನಾವಣೆಯಲ್ಲಿ ಪರಾಭವಗೊಂಡರು. 1962ರಲ್ಲಿ ಮತ್ತೆ ಆಯ್ಕೆಯಾದರು. 1968ರಲ್ಲಿ ಅವರನ್ನು ವಿಧಾನ ಪರಿಷತ್‌ಗೆ ನಾಮಕರಣ ಮಾಡಲಾಗಿತ್ತು. 1970ರಲ್ಲಿ ಅವರು ತೀರಿಕೊಂಡರು’ ಎಂದರು.
‘ಅವರು ನಿಧನರಾದ ನಂತರ ಕುಟುಂಬ ನಿರ್ವಹಣೆಗೆ ನಾನು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. 1974ರಲ್ಲಿ ಸ್ವಾತಂತ್ರ್ಯ ಯೋಧರ ಪಿಂಚಣಿ (ತಿಂಗಳಿಗೆ ₨120) ಬರಲಾರಂಭಿಸಿದ ನಂತರ ನಾನು ನೆಮ್ಮದಿಯಿಂದ ಎರಡು ಹೊತ್ತು ಊಟ ಮಾಡಲು ಸಾಧ್ಯವಾಯಿತು’ ಎನ್ನುತ್ತ ಮೌನಕ್ಕೆ ಶರಣಾದರು.
‘ನನ್ನ ಮಾವ ಪಕ್ಷಕ್ಕಾಗಿ ಎಷ್ಟೆಲ್ಲ ತ್ಯಾಗ ಮಾಡಿದರು. ನಿಷ್ಠೆ–ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸಿದರು. ಆದರೆ, ಕಾಂಗ್ರೆಸ್ ಪಕ್ಷದವರು ನನ್ನ ಪತಿ ಅನಿಲ್ ದುಬೆ ಅವರಿಗೆ ಯಾವುದೇ ಸ್ಥಾನಮಾನ ನೀಡಲಿಲ್ಲ. ಆ ಕೊರಗಿನಲ್ಲಿಯೇ ಅವರು ಅಕಾಲಿಕವಾಗಿ ನಿಧನರಾದರು’ಎಂದು ಮಿಥಿಲೇಶ್ವರಿ ಕಣ್ಣೀರಿಟ್ಟರು.
ಕೊಟ್ಟ ಮಾತು ಮರೆತರು: ‘ರಾಜಾರಾಮ ದುಬೆ ಅವರ ಅಂತ್ಯಸಂಸ್ಕಾರದ ಸಮಯದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ದುಬೆ ಅವರ ಪುತ್ಥಳಿಯನ್ನು ನಗರದಲ್ಲಿ ಸ್ಥಾಪಿಸುವುದಾಗಿ ಆಗಿನ ಕಾಂಗ್ರೆಸ್ ಮುಖಂಡರು ಹೇಳಿದ್ದರು. ಆ ನಂತರ ಅವರೆಲ್ಲ ಮಾತು ಮರೆತರು. ವಿಜಾಪುರದಲ್ಲಿ ದುಬೆ ಅವರ ಸ್ಮರಣೆಗಾಗಿ ಒಂದೇ ಒಂದು ಕುರುಹು ಇಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು ಅವರ ಒಡನಾಡಿ, ಹಿರಿಯ ಪತ್ರಕರ್ತ ಶ್ರೀರಾಮ ಪಿಂಗಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.