ADVERTISEMENT

ದೇವರಹಿಪ್ಪರಗಿಗೆ ಉಪ ಮಾರುಕಟ್ಟೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:45 IST
Last Updated 9 ಅಕ್ಟೋಬರ್ 2012, 9:45 IST

ಸಿಂದಗಿ: ದೇವರಹಿಪ್ಪರಗಿ ಭಾಗದ ರೈತರಿಗೆ ಅಗತ್ಯವಾಗಿರುವ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಸ್ಥಾಪನೆಯನ್ನು ಆದಷ್ಟು ಶೀಘ್ರದಲ್ಲಿಯೇ ಮಾಡಲಾಗುವುದು ಎಂದು ಕೃಷಿ ಮಾರುಕಟ್ಟೆ ಹಾಗೂ ವಕ್ಫ್ ಸಚಿವ ಎಸ್.ಕೆ.ಬೆಳ್ಳುಬ್ಬಿ ಭರವಸೆ ನೀಡಿದರು.

ತಾಲ್ಲೂಕಿನ ದೇವರಹಿಪ್ಪರಗಿಯಲ್ಲಿ ಕೋ-ಆಪ್ ಕ್ರೆಡಿಟ್ ಸೊಸೈಟಿ ಕಾರ್ಯಾಲಯದ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿ ರುವುದರಿಂದ ಆರ್ಥಿಕ ಸಬಲತೆ ಹೆಚ್ಚುತ್ತಲಿದೆ.

ದೇವರಹಿಪ್ಪರಗಿಯನ್ನು ಅಭಿವೃದ್ಧಿ ಪಡಿಸಲು ಈ ಗ್ರಾಮವನ್ನು ಸುವರ್ಣ ಗ್ರಾಮಯೋಜನೆ ಯಡಿ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ವಿಜಾಪುರ ಜಿಲ್ಲೆಯಲ್ಲಿ ನೀರಾವರಿ ಯೋಜನೆಗಳನ್ನು ಅನುಷ್ಠಾನದಲ್ಲಿ ತರಲು ವಿಶೇಷ ಕಾಳಜಿ ವಹಿಸಲಾಗುತ್ತಿದೆ ಎಂದು ಹೇಳಿದರು.

ಸಂಸದ ರಮೇಶ ಜಿಗಜಿಣಗಿ ಮುಖ್ಯ ಅತಿಥಿ ಗಳಾಗಿ ವಿಜಾಪುರ- ಹುಮನಾಬಾದ್ ರಾಷ್ಟ್ರೀಯ ಹೆದ್ದಾರಿಯನ್ನು ಇನ್ನಷ್ಟು ವಿಸ್ತರಣೆಗೊಳಿಸಲು ಸರ್ಕಾರ ಈಗಾಗಲೇ ರೂ.608 ಕೋಟಿ ಅನುದಾನ ಬಿಡುಗಡೆಗೊಳಿಸಿದೆ  ಎಂದರು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಿಜಾಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಮಾಜಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ವಿಜಾಪುರ ಡಿ.ಸಿ.ಸಿ ಬ್ಯಾಂಕ್ ತನ್ನ ಆರಂಭದ ಸಂದರ್ಭದಲ್ಲಿ ಕೇವಲ ರೂ 50 ಲಕ್ಷ ಬಂಡವಾಳ ಹೊಂದಿತ್ತು. ಈಗ ಈ ಬ್ಯಾಂಕ್ ವಹಿವಾಟು ರೂ 2,500ಕೋಟಿ ಇದೆ. ಈ ಬೆಳವಣಿಗೆಗೆ ರೈತರ ಸಹಕಾರವೇ ಪ್ರಮುಖ ಕಾರಣ ಎಂದರು.

ಜಿಪಂ ಅಧ್ಯಕ್ಷೆ ಸಾವಿತ್ರಿ ಅಂಗಡಿ, ಜಿಪಂ ಸದಸ್ಯ ನಿಂಗನಗೌಡ ಪಾಟೀಲ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಎಂ.ಎಸ್.ಮಠ, ಉಪಾಧ್ಯಕ್ಷ ಶರಣು ಧರಿ, ತಾಪಂ ಸದಸ್ಯೆ ಲಕ್ಷ್ಮೀಬಾಯಿ ಮೆಟಗಾರ, ಗ್ರಾಪಂ ಅಧ್ಯಕ್ಷ ಶ್ರೀಕಾಂತ ರಾಠೋಡ, ಡಾ.ಎಲ್.ಎಚ್.ಬಿದರಿ, ಬಿಜೆಪಿ ಧುರೀಣ ಸೋಮನಗೌಡ ಪಾಟೀಲ, ಯುವಮೋರ್ಚಾ  ಜಿಲ್ಲಾ ಘಟಕದ ಅಧ್ಯಕ್ಷ  ರಾಜೂಗೌಡ ಪಾಟೀಲ, ಕಾಶೀನಾಥ ಮಸಬಿನಾಳ ಉಪಸ್ಥಿತರಿದ್ದರು. ಸೊಸೈಟಿ ಅಧ್ಯಕ್ಷ ಡಾ.ಆರ್. ಆರ್.ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮನ ಗೌಡ ಪಾಟೀಲ ಸ್ವಾಗತಿಸಿದರು. ಕಬೂಲ ಕೊಕಟ ನೂರ ನಿರೂಪಿಸಿದರು. ಶ್ರೀಧರ ನಾಡಗೌಡ ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.