ADVERTISEMENT

ನನ್ನ ಸಂಭಾವನೆ ಬಡವರಿಗೆ ಮೀಸಲು...

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 7:25 IST
Last Updated 22 ಜನವರಿ 2011, 7:25 IST

ಸಿಂದಗಿ: ತಾಲ್ಲೂಕಿನ ಕಲಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ನೂತನ ಸದಸ್ಯ ಸಾಹೇಬಗೌಡ ಪಾಟೀಲ (ವಣಕಿಹಾಳ) ಅವರೊಂದಿಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ.

* ರಾಜಕೀಯದ ಗುರಿ ಏನು?
ಕಲಕೇರಿ ಮತಕ್ಷೇತ್ರದ ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು ಆಯ್ಕೆ ಮಾಡಿದ್ದಾರೆ. ಅವರ ವಿಶ್ವಾಸಕ್ಕೆ ಚ್ಯುತಿ ಬರದ ಹಾಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಮಾಡುವುದೇ ನನ್ನ ಗುರಿಯಾಗಿದೆ.

* ಮುಂದಿನ ಅಭಿವೃದ್ಧಿ ಯೋಜನೆ?
ಕಲಕೇರಿ ಕ್ಷೇತ್ರದ ವ್ಯಾಪ್ತಿಗೊಳಪಡುವ 22 ಗ್ರಾಮಗಳು ಹಾಗೂ ಎರಡು ತಾಂಡಾಗಳಿಗೆ ಮೂಲಸೌಕರ್ಯಗಳಾದ ಕುಡಿಯುವ ನೀರು, ರಸ್ತೆಗಳಿಗೆ ಹೆಚ್ಚಿನ ಆದ್ಯತೆ ನೀಡುವೆ. ಈಗಾಗಲೇ ನನ್ನ ಕ್ಷೇತ್ರದ ಅಸ್ಕಿ, ಆನೆಮಡು ಹಳ್ಳಿಗಳಿಗೆ ಮಂಜೂರಾದ ಕೇಂದ್ರ ಸರ್ಕಾರದ ರಾಜೀವಗಾಂಧಿ ಬಹು ಹಳ್ಳಿಗಳ ಶಾಶ್ವತ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲಾಗುವುದು.ಭೂ ಸವಕಳಿ ತಡೆದು ಅಂತರ್ಜಲ ಹೆಚ್ಚಿಸಲು ನಾಲಾಬದು ಯೋಜನೆಗೆ ಚಾಲನೆ ನೀಡಲಾಗುವುದು. ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ರೈತರಿಗೆ ಪ್ರೋತ್ಸಾಹಿಸಿ ಸರ್ಕಾರದ ಸೌಲಭ್ಯಗಳನ್ನು ಅವರಿಗೆ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುವೆ.

* ಗ್ರಾಮ ನೈರ್ಮಲ್ಯ...
ಗ್ರಾಮ ನೈರ್ಮಲ್ಯ ಕಾಪಾಡಿಕೊಂಡು ಬರಲು ಮಹಿಳಾ ಶೌಚಾಲಯ ನಿರ್ಮಾಣ, ಗ್ರಾಮೀಣ ಚರಂಡಿಗಳನ್ನು ಕೀ ಪ್ಲಾನ್ ಯೋಜನೆಯಡಿ ‘ಟಾಪ್ ಟೂ ಬಾಟಮ್’ ವರೆಗೆ ನಿರ್ಮಾಣಗೊಳಿಸುವುದು. ಮಹಿಳಾ ಅಭಿವೃದ್ಧಿಯ ಜೊತೆಗೆ ಸ್ವಸಹಾಯ ಸಂಘಗಳನ್ನು ಬಲಪಡಿಸುವುದು. ಗ್ರಾಮೀಣ ರಸ್ತೆಗಳ ಸುಧಾರಣೆ, ಸಾವಯವ ಕೃಷಿ ಬಗ್ಗೆ ರೈತರಲ್ಲಿ ಅರಿವು ಮೂಡಿಸುವ ಮೂಲಕ ಕೃಷಿ ಕ್ಷೇತ್ರವನ್ನು ಬಲಪಡಿಸಲಾಗುವುದು.

* ವಿಶೇಷ ಕಾರ್ಯ ವೈಖರಿ...
ನನ್ನ ರಾಜಕೀಯ ಪ್ರವೇಶವೇ ವಿಶೇಷ ಕಾರ್ಯ ವೈಖರಿಗಾಗಿ. ನಾನು ರಾಜಕಾರಣಿ ಆಗಬಯಸಲಾರೆ. ಆದರೆ, ರಾಜಕೀಯ ಅಧಿಕಾರದ ಮೂಲಕ ಸಮಾಜ ಸೇವೆ ನನ್ನ ಮೂಲ ಗುರಿಯಾಗಿದೆ.ಮುಂದೆ ಜಿಲ್ಲಾ ಪಂಚಾಯಿತಿ ನನಗೆ ನೀಡುವ ಐದು ವರ್ಷಗಳ ವೈಯಕ್ತಿಕ ಸಂಭಾವನೆಯನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹಾಗೂ ಬಡ ಕುಟುಂಬಗಳ ಶವ ಸಂಸ್ಕಾರಕ್ಕೆ ನೀಡಬಯಸುತ್ತೇನೆ.
     

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.